ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಬೆಳ್ತಂಗಡಿಯ ಪಶು ಆಸ್ಪತ್ರೆಗಳೆಲ್ಲವೂ ಸ್ವಂತ ಕಟ್ಟಡ ಹೊಂದಿದ್ದು ವ್ಯವಸ್ಥಿತವಾಗಿವೆ. ಆದರೆ ಸಿಬ್ಬಂದಿ ಇದ್ದಾರೆಯೇ ಎಂದು ಕೇಳಿದರೆ ಉತ್ತರ ನಿರಾಶಾದಾಯಕ. ಇದು ಪಶು ಸಂಗೋಪನೆ ಎಂಬ ಇಲಾಖೆಯಲ್ಲಿನ ಸ್ಥಿತಿಗತಿ. ತಾಲೂಕಿನ ವಿವಧೆಡೆ ಇರುವ ಪಶು ಆಸ್ಪತ್ರೆಗಳಲ್ಲಿ 80 ಹುದ್ದೆಗಳಿವೆ. ಆದರೆ ಭರ್ತಿಯಾಗಿರುವುದು ಕೇವಲ 10 ಮಾತ್ರ. ಇದು ದ.ಕ.ಜಿ.ಪಂ. ಅಡಿ ಕಾರ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಪಶು ಸಂಗೋಪನೆ ಇಲಾಖೆಯಲ್ಲಿನ ಸದ್ಯದ ಪರಿಸ್ಥಿತಿ.
ತಾಲೂಕಿನಲ್ಲಿ ಈ ಹಿಂದಿನ ಜಾನುವಾರು ಗಣತಿ ಪ್ರಕಾರ 67,119 ಹಸು, 492 ಎಮ್ಮೆ, 550 ಹಂದಿ, 17 ಕುರಿ, 3,064 ಆಡುಗಳು ಸೇರಿ 71,242 ಜಾನುವಾರುಗಳಿವೆ. 3 ಪಶು ಆಸ್ಪತ್ರೆ, 9 ಪಶು ಚಿಕಿತ್ಸಾಲಯ, 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಕಡೆ ಸಿಬ್ಬಂದಿ ಕೊರತೆ ಇದೆ.ಬೆಳ್ತಂಗಡಿ, ಧರ್ಮಸ್ಥಳ ,ವೇಣೂರುಗಳಲ್ಲಿ ಪಶು ಆಸ್ಪತ್ರೆ, ಅಂಡಿಂಜೆ, ನಾರಾವಿ,ಬಾರ್ಯ, ಮಡಂತ್ಯಾರು, ಉಜಿರೆ, ಕಳೆಂಜೊಟ್ಟು (ನೆರಿಯ), ಕೊಕ್ಕಡ, ಅಳದಂಗಡಿಯಲ್ಲಿ ಪಶು ಚಿಕಿತ್ಸಾಲಯಗಳು, ಕಿಲ್ಲೂರು, ಕೇಳ್ತಾಜೆ, ಅರಸಿನಮಕ್ಕಿ, ಕಾಯರ್ತಡ್ಕ, ಕುಪ್ಪೆಟ್ಟಿ, ಮೊಗ್ರು, ಮುಂಡಾಜೆ, ಗರ್ಡಾಡಿಗಳಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಇವೆ. ಇಲ್ಲೆಲ್ಲ ಸಿಬ್ಬಂದಿ ಕೊರತೆ ಶಾಪವಾಗಿ ಪರಿಣಮಿಸಿದ್ದು ಪಶು ಪಾಲಕರು ಹೈರಾಣಾಗಿದ್ದಾರೆ.ಕೆಲವು ಕೇಂದ್ರಗಳಲ್ಲಿ ಓರ್ವ ಸಿಬ್ಬಂದಿ ಕೇಂದ್ರದ ಎಲ್ಲಾ ಹುದ್ದೆಗಳ ಏಕಪಾತ್ರಾಭಿನಯ ಮಾಡುವ ಅನಿವಾರ್ಯತೆ ಇದೆ. ಪಶುಗಳ ಚಿಕಿತ್ಸೆಗೆ ಹೊರ ಹೋಗುವ ಸಂದರ್ಭ ಕೇಂದ್ರಕ್ಕೆ ಬೀಗ ಜಡಿಯ ಬೇಕಾದ ಪರಿಸ್ಥಿತಿ ಇದೆ. ಕೆಲವು ಕೇಂದ್ರಗಳಲ್ಲಿ ವಾರದ 2-3 ದಿನ ಮಾತ್ರ ಸೇವೆ ಸಿಗುತ್ತಿದೆ. ಇನ್ನು ಕೆಲವೊಂದು ಹುದ್ದೆಗಳಿಗೆ ಎರಡು, ಮೂರು ಕೇಂದ್ರಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಒಂದು ಕೇಂದ್ರದ ಕೆಲಸವನ್ನೂ ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಖಾಲಿ ಇರುವ 30 ಡಿ ದರ್ಜೆ ನೌಕರರಲ್ಲಿ 15 ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದ್ದರು ಉಳಿದಿರುವ ಅಗತ್ಯ ಸ್ಥಳಗಳಿಗೆ ನಿಯೋಜನೆಗೊಳಿಸಿಲ್ಲ. ಪ್ರತಿ ಬುಧವಾರ ಹಾಗೂ ಗುರುವಾರ ಸಂಚಾರಿ ಪಶು ಘಟಕವಿದ್ದು ಇದರ ಹುದ್ದೆ ಖಾಲಿ ಇರುವುದರಿಂದ ಇರುವ ಸಿಬ್ಬಂದಿಯೇ ಇದನ್ನು ನೋಡಿಕೊಳ್ಳಬೇಕಾಗಿದೆ. ಸಿಬ್ಬಂದಿಗೆ ಇಲಾಖೆ ತನ್ನ ಬೇರೆ ಬೇರೆ ಯೋಜನೆಗಳ ಜವಾಬ್ದಾರಿ ನೀಡುತ್ತಿದೆ. ಜಾನುವಾರು ಕೃತಕ ಗರ್ಭಧಾರಣೆ, ರೇಬಿಸ್ ಲಸಿಕೆ, ಕಾಲುಬಾಯಿ ಲಸಿಕೆ, ಕಂದು ರೋಗ ಲಸಿಕೆ, ಗಳಲೆ ರೋಗ ಲಸಿಕೆ, ಕೋಳಿಗಳಲ್ಲಿ ಕೊಕ್ಕರೆ ರೋಗ, ಆಡು, ಕುರಿಗಳಿಗೆ ಸಿಡುಬು ಲಸಿಕೆ, ಜಾನುವಾರುಗಳಿಗೆ ಕಿವಿಯೋಲೆ ಹಾಕುವುದು, ಬರಡು ರಾಸು ಚಿಕಿತ್ಸೆ, ಜಾನುವಾರು ವಿಮೆ, ಪಶು ಭಾಗ್ಯ,ಅಮೃತ ಯೋಜನೆ, ಜಾನುವಾರು ಪ್ರದರ್ಶನ, ಮಾದರಿ ಸಮೀಕ್ಷೆ ಸೇರಿದಂತೆ ಅನೇಕ ಶಿಬಿರಗಳನ್ನು ಏರ್ಪಡಿಸಬೇಕು. ದೈನಂದಿನ ಮಾಹಿತಿ ತಂತ್ರಾಂಶದ ಮೂಲಕ ದಾಖಲಿಸಿ ಸಲ್ಲಿಸಬೇಕು. ಗ್ರಾಮ ಸಭೆಗಳಿಗೆ ಹಾಜರಾಗಬೇಕು. ಜಾನುವಾರುಗಳ ಆರೋಗ್ಯ ದೃಢೀಕರಣ, ಮರಣೋತ್ತರ ಪರೀಕ್ಷೆ, ನಾನಾ ಯೋಜನೆಗಳಿಗೆ ಪರವಾನಗಿ, ಪರಿಹಾರ ಧನ ಸಂಬಂಧಿತ ಕಾರ್ಯಗಳನ್ನು ನಡೆಸಬೇಕಾಗಿದೆ. ಈ ಎಲ್ಲಾ ವ್ಯವಸ್ಥೆಗಳಲ್ಲಿ ತೊಡಗುವ ಸಿಬ್ಬಂದಿ ಹೈರಾಣರಾಗುತ್ತಿದ್ದಾರೆ. ಪ್ರಗತಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಕಡ್ಡಾಯವಾಗಿ ಶೇ.100 ಗುರಿ ತಲುಪಬೇಕಾದ ಜವಾಬ್ದಾರಿ ಹೊರಿಸಲಾಗುತ್ತಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕು ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಒದಗಿಸುವುದರಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದರೂ ಜಾನುವಾರುಗಳ ಮತ್ತು ಹೈನುಗಾರರ ಅಭಿವೃದ್ಧಿಯಲ್ಲಿ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಅನೇಕ ಯೋಜನೆಗಳು ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವುದಿಲ್ಲ. ಇದರ ಜತೆ ಕೆಲವು ಕೇಂದ್ರಗಳ ಕಟ್ಟಡಗಳು ದುರಸ್ತಿಗೆ ಸರಿಯಾದ ಅನುದಾನವೂ ಮಂಜುರಾಗುತ್ತಿಲ್ಲ ಎಂಬ ಕೂಗು ಹೇಳಿ ಬರುತ್ತಿದೆ.-----ಖಾಲಿ ಹುದ್ದೆಗಳ ವಿವರ (ಒಟ್ಟು-ಭರ್ತಿ-ಖಾಲಿ)
ಮುಖ್ಯ ಪಶುವೈದ್ಯಾಧಿಕಾರಿ: 5 -3- 2
ಪಶುವೈದ್ಯಾಧಿಕಾರಿ: 8-0-8ಜಾನುವಾರು ಅಭಿವೃದ್ಧಿ ಅಧಿಕಾರಿ: 1-0-1
ಜಾನುವಾರು ಅಧಿಕಾರಿ: 2-1-1ಹಿರಿಯ ಪಶು ವೈದ್ಯ ಪರೀಕ್ಷಕ: 12-3-9
ಪಶುವೈದ್ಯ ಪರೀಕ್ಷಕ: 6-2-4ಕಿರಿಯ ಪಶು ವೈದ್ಯಕೀಯ ಪರೀಕ್ಷೆ:14 -0-14
ವಾಹನ ಚಾಲಕ:1-0-1ದ್ವಿತೀಯ ದರ್ಜೆ ಸಹಾಯಕ:1-1-0
ಡಿ ದರ್ಜೆ: 30- 0-30ಒಟ್ಟು: 80-10-70
........ಸಿಬ್ಬಂದಿ ಕೊರತೆ ಬಿಟ್ಟರೆ ಇತರ ಯಾವುದೇ ಹೆಚ್ಚಿನ ಸಮಸ್ಯೆ ಇಲ್ಲ. ಖಾಲಿ ಹುದ್ದೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದುಕೊಳ್ಳಲಾಗಿದೆ. ಹಲವು ಕಾರ್ಯಕ್ರಮಗಳಿಗೆ ಕೆ.ಎಂ.ಎಫ್. ಸಹಕಾರ ನೀಡುತ್ತಿದೆ.-ಡಾ.ರವಿಕುಮಾರ್, ಮುಖ್ಯ ಪಶುವೈದ್ಯಾಧಿಕಾರಿ, (ಆಡಳಿತ ) ಪಶು ಆಸ್ಪತ್ರೆ, ಬೆಳ್ತಂಗಡಿ.