ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪಟ್ಟಣ ಪಂಚಾಯಿತಿ ಸಮೀಪ ಇರುವ ಬಹುಮಹಡಿ ಖಾಸಗಿ ಕಟ್ಟಡದ ಮುಂಭಾಗ ತೆರೆದ ಚರಂಡಿಯಿಂದಾಗಿ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ಇತ್ತೀಚೆಗೆ ಬಾಡಿಗೆದಾರರು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಆಡಳಿತ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಮುಂದಾಗಿದೆ. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಅನೇಕ ಕೊರತೆಗಳ ನಡುವೆ ಹಲವು ಬಾರಿ ವಿವಾದಕ್ಕೆ ಗುರಿಯಾಗಿದ್ದ ಖಾಸಗಿ ಕಟ್ಟಡದ ಮುಂಭಾಗ ಚರಂಡಿ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ನೀರು ನಿಂತು ರಸ್ತೆ ಹಾಳಾಗಿತ್ತು. ಮತ್ತೊಂದೆಡೆ ಕಟ್ಟಡದ ಬಾಡಿಗೆದಾರರು ಚರಂಡಿ ಅವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿ ದುರಸ್ತಿಗೆ ಆಗ್ರಹಿಸಿದ್ದರು. ಆದರೆ ಈ ಖಾಸಗಿ ಕಟ್ಟಡವು ಪಾರ್ಕಿಂಗ್ ಸೌಲಭ್ಯದ ಜಾಗದಲ್ಲಿ ಅಂಗಡಿ ಮುಂಗಟ್ಟು ಮಾಡಿದ್ದು ಇದಕ್ಕೆ ಅನುಮತಿ ನೀಡುವಾಗಲೇ ಪರಿಶೀಲಿಸದಿರುವುದು ತಾಂತ್ರಿಕ ತಜ್ಞರ ಲೋಪವಾಗಿದೆ ಎಂದು ಸದಸ್ಯ ಜಗದೀಶ್ ಆಕ್ಷೇಪಿಸಿದರು.ಬಹು ಮಹಡಿಯ ಕಟ್ಟಡಕ್ಕೆ ವಯಸ್ಕರು, ಅಂಗವಿಕಲರು ತೆರಳಲು ಸೂಕ್ತ ಲಿಫ್ಟ್ ವ್ಯವಸ್ಥೆಯಿಲ್ಲ. ಆದರೆ ಇದನ್ನು ಮಾಲಕರ ಬಳಿ ಕೇಳುವ ಬದಲು ಬಾಡಿಗೆದಾರರು ಪಟ್ಟಣ ಪಂಚಾಯಿತಿ ಮುಂಭಾಗ ಗಲಾಟೆ ಮಾಡುತ್ತಾರೆ. ಆದರೆ ಪ.ಪಂ.ನಿಂದ ಮೇಲಧಿಕಾರಿಗಳಿಗೆ ಪತ್ರ ಬರೆಯಬೇಕಿತ್ತು ಎಂದರು.
ಬೆಳ್ತಂಗಡಿ ಪ.ಪಂ. ಒಳಪಟ್ಟ ಸಂತೆಕಟ್ಟೆಬಸ್‌ನಿಲ್ದಾಣವಿರುವ ರಾಜೀವ್ ಗಾಂಧಿ ಕಟ್ಟಡ 2016ರಲ್ಲಿ ಉದ್ಘಾಟನೆಗೊಂಡಿದ್ದು, ಪ್ರಸಕ್ತ ಅಪಾಯದಲ್ಲಿರುವ ಕುರಿತು ಚರ್ಚೆ ನಡೆದಾಗ ಸಾಮರ್ಥ್ಯ ಪರಿಶೀಲನೆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದೆಂದು ನಿರ್ಣಯಿಸಲಾಯಿತು. ಸಂತೆಕಟ್ಟೆನೂತನ ಕಟ್ಟಡವೂ ಅವೈಜ್ಞಾನಿಕವಾಗಿ ರಚಿಸಲಾಗಿದೆ ಎಂದು ಸದಸ್ಯ ಜಗದೀಶ್ ಸಭೆಯ ಗಮನ ಸೆಳೆದರು.ಖಾಸಗಿ ಕಟ್ಟಡದ ಸಮಸ್ಯೆ ಮತ್ತು ಕೊಳಚೆ ನೀರಿನ ಬಗ್ಗೆ ಅಧ್ಯಕ್ಷ ಜಯಾನಂದ್ ಪ್ರತಿಕ್ರಿಯಿಸಿ ಸೋಮಾವತಿ ನದಿಗೆ ಚರಂಡಿ ಮೂಲಕ ಕೊಳಚೆ ನೀರು ಸಾಗುತ್ತಿದೆ. ಕಟ್ಟಡ ಸಹಿತ ಯಾವುದೇ ಮನೆ, ಖಾಸಗಿ ಕಟ್ಟಡದವರು ತೆರೆದ ಚರಂಡಿಗೆ ಕೊಳಚೆ ನೀರು ಬಿಡುವಂತಿಲ್ಲ. ಬಹು ಮಹಡಿ ಕಟ್ಟಡ ಮುಂಭಾಗ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಲಕರು ಗುರುತಿಸಬೇಕು. ತೆರೆದ ಚರಂಡಿಗೆ ಪ.ಪಂ. ಕಲ್ಲುಹಾಸಿಕೊಡುವ ನಿರ್ಧಾರವಿಲ್ಲ. ಮಾಲಕರೇ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ಆದರೆ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಪ.ಪಂ. ಅನುಮತಿ ಪಡೆದು ಮಳೆಗಾಲದಲ್ಲಿ ನೀರು ಸರಾಗವಾಗಿ ಸಾಗಲು ವ್ಯವಸ್ಥೆ ಕಲ್ಪಿಸಿಕೊಟ್ಟರಷ್ಟೆ ಅನುಮತಿ ನೀಡಲಾಗುವುದು ಎಂದರು.ಕೃಷಿ ಇಲಾಖೆ ಸಮೀಪ 10 ಸೆಂಟ್ಸ್ ಜಾಗ ಯುಜಿಡಿ ಘಟಕ ನಿರ್ಮಾಣಕ್ಕೆ ಅವಕಾಶ ಕೋರಿ ಸರಕಾರಕ್ಕೆ ಪತ್ರ ಬರೆಯಲು ಚಿಂತನೆ ನಡೆಸಲಾಯಿತು. 40 ಲಕ್ಷ ರುಪಾಯಿ ವೆಚ್ಚದಲ್ಲಿ ಬೆಳ್ತಂಗಡಿ ರುದ್ರಭೂಮಿ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.
ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ ಎಂಜಿನಿಯರ್ ಮಹಾವೀರ ಆರಿಗ ಸಹಿತ ಸದಸ್ಯರು ಸಭೆಯಲ್ಲಿ ಹಾಜರಿದ್ದರು.