ವಿಜೃಂಭಣೆಯಿಂದ ನಡೆದ ಬೇಲೂರು ರಥೋತ್ಸವ

| Published : Apr 21 2024, 02:17 AM IST

ಸಾರಾಂಶ

ವಿಶ್ವ ವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವಸ್ವಾಮಿಯ ದಿವ್ಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಶನಿವಾರ ಜರುಗಿತು.

ಕುರಾನ್ ಪಠಣೆ ಮಾಡದೆ ಕೇಶವನಿಗೆ ನಮಸ್ಕರಿಸಿದ ಮೌಲ್ವಿ

ಕನ್ನಡಪ್ರಭ ವಾರ್ತೆ ಬೇಲೂರು

ವಿಶ್ವ ವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವಸ್ವಾಮಿಯ ದಿವ್ಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಶನಿವಾರ ಜರುಗಿತು.

ಬೆಳಿಗ್ಗೆ ಚೆನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಯಾತ್ರಾದಾನ ಸೇವೆಯ ನಂತರ ಶ್ರೀ ಯವರ ಉತ್ಸವ ಮೂರ್ತಿಯನ್ನು ಅಲಂಕಾರಗೊಂಡ ದಿವ್ಯ ರಥದಲ್ಲಿ ಕೂರಿಸಲಾಯಿತು. ರಥಕ್ಕೆ ಪೂಜೆಯನ್ನು ಸಲ್ಲಿಸಿದ ನಂತರ ಬಾಳೆಕಂದನ್ನು ಕತ್ತರಿಸಿ ಭಕ್ತರ ಜಯ ಘೋಷದ ನಡುವೆ 10.45ಕ್ಕೆ ರಥವನ್ನು ಮೂಲಸ್ಥಾನದಿಂದ ಎಳೆಯಲಾಯಿತು.

ಕುರಾನ್ ಪಠಣವಿಲ್ಲ:

ಕಳೆದ ಬಾರಿ ರಥದ ಮುಂದೆ ಕುರಾನ್ ಪಟ್ಟಣ ಮಾಡದಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು. ಈ ಬಾರಿಯ ರಥೋತ್ಸವದಲ್ಲೂ ಯಾವುದೇ ಕಾರಣಕ್ಕೂ ಕುರಾನ್ ಪಟ್ಟಣ ಮಾಡಬಾರದು ಎಂದು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಅದರಂತೆ ಈ ಬಾರಿ ರಥೋತ್ಸವದಲ್ಲಿ ಚಿಕ್ಕಮೇದೂರಿನ ಮೌಲ್ವಿ ಬಾಷಾ ಖಾದ್ರಿ ಸಾಹೇಬ್ ರಥದ ಮುಂಭಾಗ ಕುರಾನ್ ಪಠಣ ಮಾಡದೆ ದೇಗುಲ ಒಳ ಆವರಣದಲ್ಲಿ ದೇವರಿಗೆ ವಂದನೆ ಸಮರ್ಪಿಸಿ ದೇಗುಲದವರು ನೀಡುವ ಗೌರವ ಪಡೆದರು.

ವಿಜೃಂಭಣೆಯ ರಥೋತ್ಸವ:

10.45ಕ್ಕೆ ಆಗಮಿಕರ ಸೂಚನೆಯಂತೆ ವೆಂಕಟೇಶ್ ನಗಾರಿ ಹೊಡೆಯುವ ಮೂಲಕ ಮೂಲಸ್ಥಾನದಿಂದ ಎಳೆದ ರಥವನ್ನು ದೇಗುಲ ಗೋಪುರದ ಮುಂಭಾಗದಿಂದ ಹಾದು ಆಗ್ನೇಯ ದಿಕ್ಕಿನಲ್ಲಿರುವ ಬಯಲು ರಂಗಮಂದಿರದ ಬಳಿ ತಂದು ನಿಲ್ಲಿಸಲಾಯಿತು. ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ದೇವರಿಗೆ ಬಾಳೆಹಣ್ಣು, ಧವನವನ್ನು ಎಸೆದು ಭಕ್ತಿ ಮೆರೆದರು. ಬ್ರಹ್ಮ ರಥೋತ್ಸವ ಬಂದು ನಿಲ್ಲುವ ಜಾಗವು ಶ್ರೀ ವಿಷ್ಣು ಮೋಹಿನಿ ಅವತಾರ ತಾಳಿ ಭಸ್ಮಾಸುರನ್ನು ಕೊಂದ ಸ್ಥಳ ಎಂಬ ಪ್ರತೀತಿಯಿದೆ. ಭಾನುವಾರ ಹಗಲು ನಾಡ ರಥೋತ್ಸವ ನಡೆಯಲಿದ್ದು ರಥವನ್ನು ದೇಗುಲದ ಸುತ್ತ ಪ್ರದಕ್ಷಿಣೆಯನ್ನು ಹಾಕಿಸಿ ಮೂಲಸ್ಥಾನಕ್ಕೆ ಮತ್ತೆ ಎಳೆದು ನಿಲ್ಲಿಸಲಾಗುವುದು.

ಬಿಗಿ ಪೊಲೀಸ್ ಬಂದೋಬಸ್ತ್:

ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿತ್ತು. ಅರೆ ಸೇನಾ ಪಡೆ, ಕೆಎಸ್ಆರ್‌ಪಿ ಪಡೆಗಳನ್ನು ನಿಯೋಜಿಸಲಾಗಿತ್ತು. ದೇಗುಲದ ನಾಲ್ಕು ಮೂಲೆಯಲ್ಲಿ ಸಿಸಿಟಿವಿ ಮತ್ತು ಮೈಕುಗಳನ್ನು ಅಳವಡಿಸಲಾಗಿತ್ತು. ಜೇಬು, ಸರಗಳ್ಳರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿತ್ತು. ಎಸ್‌ಪಿ ಸುಜೀತ, ಡಿವೈಎಸ್‌ಪಿ ಲೋಕೇಶ್, ವೃತ್ತ ನಿರೀಕ್ಷಕರಾದ ಸುಬ್ರಹ್ಮಣ್ಯ, ಜಯರಾಂ, ಸಬ್ ಇನ್‌ಸ್ಪೆಕ್ಟರ್ ಪ್ರವೀಣ್ ನೇತೃತ್ವದ ತಂಡ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮವಹಿಸಿತ್ತು.

ಮಜ್ಜಿಗೆ ವಿತರಣೆ:

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬಿಸಿಲಿನ ವಾತಾವರಣ ಕಮ್ಮಿಯಾಗಿತ್ತು. ಪಟ್ಟಣದ ಎಸ್‌ಬಿಐ ಬ್ಯಾಂಕ್ ಹಾಗೂ ಇತರ ಸಂಘ ಸಂಸ್ಥೆಗಳು ಬಾಯಾರಿದ ಭಕ್ತರಿಗೆ ಮಜ್ಜಿಗೆ ಹಾಗೂ ತಂಪು ಪಾನೀಯ ನೀಡಿದರು. ದೇಗುಲ ಕಾರ್ಯನಿರ್ವಹಣಾಧಿಕಾರಿ ಯೋಗೇಶ್, ದೇಗುಲ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಸದಸ್ಯರು ಮತ್ತು ನೌಕರ ವರ್ಗ ಉಸ್ತುವಾರಿ ವಹಿಸಿದ್ದರು.

ಬೇಲೂರಿನಲ್ಲಿ ವಿಶ್ವ ವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶನಿವಾರ ನಡೆಯಿತು.