ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾಂಗ್ರೆಸ್ ಸೇರಿರುವ ಬೇಲೂರು ಸೋಮಶೇಖರ್ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರಾಗಿಲು ಅರ್ಹರಲ್ಲ ಎಂದು ತಾಲೂಕು ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹರಳಹಳ್ಳಿ ಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಅಂಬಿ ರೆಬೆಲ್ ಕ್ಯಾಂಟೀನ್‌ನಲ್ಲಿ ಅಂಬಿ ಅಭಿಮಾನಿಗಳ ಜೊತೆ ಬೇಲೂರು ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಕುರಿತು ಕೆಲಕಾಲ ಚರ್ಚಿಸಿದ ಬಳಿಕ ಮಾತನಾಡಿದ ಅಂಬಿ ಸುಬ್ಬಣ್ಣ, ಬೇಲೂರು ಸೋಮಶೇಖರ್ ಅಂಬರೀಶ್ ಕುಟುಂಬ ಹಾಗೂ ಅಭಿಮಾನಿಗಳ ಒಪ್ಪಿಗೆ ಪಡೆಯದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಆರೋಪಿಸಿದರು.
ಅಂಬರೀಶ್ ಹೆಸರೇಳಿಕೊಂಡು ಅಭಿಮಾನಿಯಾಗಿ ಹೆಸರುವಾಸಿ ಆಗಿರುವ ಬೇಲೂರು ಸೋಮಶೇಖರ್ ರನ್ನು ಅಭಿಮಾನಿಗಳು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ರಾಜ್ಯಾಧ್ಯಕ್ಷರಾಗಿದ್ದರಿಂದ ಅಂಬಿ ಕುಟುಂಬಕ್ಕೆ ಋಣಿಯಾಗಿದ್ದರು. ಈಗ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಮಗೆ ವೈಯಕ್ತಿಕವಾಗಿ ಖುಷಿ ಇದೆ. ಅವರಿಗೆ ಒಳ್ಳೆಯದಾಗಲಿ. ಆದರೆ, ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ ಎಂದರು.ಅಂಬರೀಶ್ ಹೆಸರಿನಿಂದ ಬೇಲೂರು ಸೋಮಶೇಖರ್‌ಗೆ ಹೆಸರಿತ್ತು. ಆದರೆ, ಅಂಬಿ ಕುಟುಂಬದಿಂದ ದೂರವಾಗಿ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಬೇಲೂರು ಸೋಮಶೇಖರ್ ಅವರು ಅಂಬರೀಶ್ ಅಭಿಮಾನಿಯಾಗಿದ್ದಾರೆ. ಸಂಘಕ್ಕೆ ರಾಜ್ಯಾಧ್ಯಕ್ಷರಲ್ಲ ಎಂದು ಸ್ಪಷ್ಟಪಡಿಸಿದರು.
ಸುಮಲತಾ ಅಂಬರೀಶ್ ಅವರು ಮಂಡ್ಯ ಸಂಸದರಾಗಿದ್ದಾಗ ಬೇಲೂರು ಸೋಮಶೇಖರ್‌ಗೆ ಅಧಿಕಾರ ಸಿಕ್ಕಿತ್ತು. ಸುಮಲತಾ ಅಂಬರೀಶ್ ವಿರುದ್ಧವಾಗಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ನಿರ್ಧಾರ ಸರಿಯಿಲ್ಲ. ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ ಅಂಬಿ ಕುಟುಂಬದಿಂದ ಉಪಯೋಗ ಪಡೆದು ಈಗ ಕಾಂಗ್ರೆಸ್ ಸೇರ್ಪಡೆಯಾಗಿರುವ ನಿರ್ಧಾರ ಒಳ್ಳೆಯದಲ್ಲ ಎಂದರು.ಅಂಬರೀಶ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀನಿವಾಸ್ ಅವರು ಐದು ವರ್ಷದ ಹಿಂದೆ 11 ತಿಂಗಳಿಗೆ ಮಾತ್ರ ರಾಜ್ಯಾಧ್ಯಕ್ಷ ಸ್ಥಾನದ ಅಧಿಕಾರ ನೀಡಿದ್ದರು. ಆದರೆ, ಮುಂದಿನ ಅವಧಿಗೂ ಮುಂದುವರಿದರು. ಈಗ ಅಭಿಮಾನಿಗಳಿಗೆಲ್ಲಾ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ರವರೇ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಅಂಬರೀಶ್ ಅಭಿಮಾನಿ ಎಲೆಕೆರೆ ಈರೇಗೌಡ ಮಾತನಾಡಿ, ಬೇಲೂರು ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಯಿಂದ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸ್ಥಾನ ತೆರವುಗೊಳಿಸಬೇಕು. ಈ ಸ್ಥಾನಕ್ಕೆ ಅಂಬಿ ಕುಟುಂಬಸ್ಥರು ಬೇರೆಯವರ ನೇಮಕದ ಬಗ್ಗೆ ತೀರ್ಮಾನಿಸಬೇಕು ಎಂದು ಒತ್ತಾಯಿಸಿದರು.ಅಂಬಿ ಅಭಿಮಾನಿ ತಮ್ಮಣ್ಣ ಮಾತನಾಡಿ, ಅಂಬಿ ಹೆಸರಿನಲ್ಲಿ ರಾಜ್ಯಾಧ್ಯಕ್ಷರಾಗಿದ್ದ ಬೇಲೂರು ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಒಳ್ಳೆಯ ನಿರ್ಧಾರವಲ್ಲ ಎಂದರು.
ಅಂಬರೀಶ್ ಅಭಿಮಾನಿಗಳಾದ ಡಾಮಡಹಳ್ಳಿ ಚಾಮೇಗೌಡ, ಅಭಿಷೇಕ್ ಸೇರಿದಂತೆ ಅನೇಕರಿದ್ದರು.