ಕರ್ನಾಟಕ ವಿಶ್ವಮಾನ್ಯವಾಗಲು ಬಸವಣ್ಣ ಕಾರಣ

| Published : Jul 11 2025, 11:48 PM IST

ಸಾರಾಂಶ

ಅಂದು ಅಂತರ್ಜಾಲದ ವಿವಿಧ ಮಾಧ್ಯಮಗಳಾದ ಫೇಸ್‌ ಬುಕ್‌, ಇನ್ಸ್ಟಾಗ್ರಾಂ, ಟ್ವಿಟರ್‌, ಯೂಟ್ಯೂಬ್‌ ಯಾವುದೇ ಇರದಿದ್ದರೂ ಬಸವಣ್ಣನವರ ಫೇಸ್‌ ವ್ಯಾಲ್ಯೂ ನೋಡಿ ಬಸವಕಲ್ಯಾಣಕ್ಕೆ 196000 ಜನ ಶರಣರು ಬಂದರು.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ಹನ್ನೆರಡನೆಯ ಶತಮಾನದಲ್ಲಿಯೇ ವಿಶ್ವಮಾನ್ಯವಾಗಲು ವಿಶ್ವಗುರು ಬಸವಣ್ಣನವರು ಕಾರಣ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ನಗರದ ಬಿಇಎಂಎಲ್ ಬಸವ ಸಮಿತಿಯು ಕನಕದಾಸನಗರದ ಸುಪ್ರೀಂ ಪಬ್ಲಿಕ್ ಶಾಲೆಯ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ಸಮಿತಿಯ ಕುಟುಂಬ ಸದಸ್ಯರಿಗೆ ಹಮ್ಮಿಕೊಂಡಿದ್ದ ವಚನ ಕಂಠಪಾಠ, ವಚನ ವ್ಯಾಖ್ಯಾನ, ರಸಪ್ರಶ್ನೆ ಮತ್ತು ವಿವಿಧ ಸ್ಪರ್ಧಾ ಕಾಯಕ್ರಮದಲ್ಲಿ ಅವರು ಮಾತನಾಡಿದರು.

ಅಂದು ಅಂತರ್ಜಾಲದ ವಿವಿಧ ಮಾಧ್ಯಮಗಳಾದ ಫೇಸ್‌ ಬುಕ್‌, ಇನ್ಸ್ಟಾಗ್ರಾಂ, ಟ್ವಿಟರ್‌, ಯೂಟ್ಯೂಬ್‌ ಯಾವುದೇ ಇರದಿದ್ದರೂ ಬಸವಣ್ಣನವರ ಫೇಸ್‌ ವ್ಯಾಲ್ಯೂ ನೋಡಿ ಬಸವಕಲ್ಯಾಣಕ್ಕೆ 196000 ಜನ ಶರಣರು ಬಂದರು. ಮನುಷ್ಯ ಪರಿಪೂರ್ಣವಾಗಬೇಕಾದರೆ ತನು, ಮನ ಮತ್ತು ಭಾವ ಶುದ್ಧಿಗಳು ತುಂಬಾ ಅಗತ್ಯ. ಅದಕ್ಕಾಗಿ ಬಸವಣ್ಣನವರು ತನು ಶುದ್ಧಿಗಾಗಿ ಕಾಯಕ, ಮನ ಶುದ್ಧಿಗಾಗಿ ಇಷ್ಟಲಿಂಗ ಮತ್ತು ಭಾವ ಶುದ್ಧಿಗಾಗಿ ದಾಸೋಹ ತತ್ವವನ್ನು ಜಾರಿಗೆ ತಂದರು ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಇಎಂಎಲ್‌ ನಿವೃತ್ತ ನೌಕರ ಮನೋಹರ ಎಂ. ಕೋಟೆ ಮಾತನಾಡಿ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಸಂಸ್ಥೆಯ ಸದಸ್ಯರಲ್ಲಿ ಕ್ರಿಯಾತ್ಮಕ ಬಾಂಧವ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್‌ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ, ಎಸ್‌.ಎಸ್‌. ಪಾಟೀಲ್, ನೀಲಾಂಬಿಕೆ ನಾಗರಾಜು, ರಶ್ಮಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.