ಬೆಂ.ಗ್ರಾ.ಕ್ಷೇತ್ರ: ಯಾರೇ ಗೆದ್ದರೂ ದಾಖಲೆ ನಿರ್ಮಾಣ

| Published : Apr 30 2024, 02:04 AM IST

ಬೆಂ.ಗ್ರಾ.ಕ್ಷೇತ್ರ: ಯಾರೇ ಗೆದ್ದರೂ ದಾಖಲೆ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕಾಗಿರುವುದು ಅಭ್ಯರ್ಥಿಗಳು ಮಾತ್ರವಲ್ಲದೆ ಕಾರ್ಯಕರ್ತರಲ್ಲಿಯೂ ಕುತೂಹಲ ಹೆಚ್ಚಿಸಿದೆ. ಆದರೆ, ಕ್ಷೇತ್ರದಲ್ಲಿ ಯಾರೇ ಗೆದ್ದರೂ ದಾಖಲೆ ನಿರ್ಮಾಣವಾಗಲಿದೆ

ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕಾಗಿರುವುದು ಅಭ್ಯರ್ಥಿಗಳು ಮಾತ್ರವಲ್ಲದೆ ಕಾರ್ಯಕರ್ತರಲ್ಲಿಯೂ ಕುತೂಹಲ ಹೆಚ್ಚಿಸಿದೆ. ಆದರೆ, ಕ್ಷೇತ್ರದಲ್ಲಿ ಯಾರೇ ಗೆದ್ದರೂ ದಾಖಲೆ ನಿರ್ಮಾಣವಾಗಲಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ನಡುವೆ ನೇರ ಹಣಾಹಣಿ ನಡೆದಿದೆ. ಹಾಗಾಗಿ ಈ ಉಭಯರಲ್ಲಿ ಯಾರೇ ಗೆದ್ದರೂ ಹೊಸ ದಾಖಲೆ ಬರೆದಂತಾಗುತ್ತದೆ.

ಕಳೆದ 2014ರ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್, ಬಿಜೆಪಿ ಅಭ್ಯರ್ಥಿಯಾಗಿ ಮುನಿರಾಜುಗೌಡ ಸ್ಪರ್ಧಿಸಿದರೆ, ಜೆಡಿಎಸ್‌ನಿಂದ ಪ್ರಭಾಕರ್ ರೆಡ್ಡಿ ಅವರೂ ಕಣದಲ್ಲಿದ್ದರು.

ಕ್ಷೇತ್ರದಲ್ಲಿ ಅಧಿಕವಾಗಿರುವ ಒಕ್ಕಲಿಗ ಸಮುದಾಯದ ಮತಗಳು ಮೂರು ಪಕ್ಷಗಳಿಗೂ ವಿಭಜನೆಯಾದ ಕಾರಣದಿಂದಲೇ ಅಂದು ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣವಾಗಿತ್ತು ಎಂಬುದು ಬಿಜೆಪಿಗರ ವಾದ. ಆಗ ಡಿ.ಕೆ.ಸುರೇಶ್ ಅವರು 2,31,480 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.

2019ರ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಕಣಕ್ಕಿಳಿದರೆ, ಬಿಜೆಪಿಯಿಂದ ಅಶ್ವತ್ಥ ನಾರಾಯಣಗೌಡ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಇದ್ದರೂ ಸುರೇಶ್ ಗೆಲುವಿಗೆ ನಿರೀಕ್ಷೆಯಷ್ಟು ಮತಗಳನ್ನು ತಂದು ಕೊಡಲಿಲ್ಲ. ಈಗ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳು ತಮ್ಮ ಕೈ ಹಿಡಿಯಲಿವೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರವಾಗಿದೆ.

ಕಳೆದ ಬಾರಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜೊತೆ ದೋಸ್ತಿ ಸಾಧಿಸಿತು. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರೆಲ್ಲರೂ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪರವಾಗಿ ದುಡಿದಿದ್ದಾರೆ. ಅಲ್ಲದೆ, ಮೋದಿ ಹವಾ ಕೂಡ ಕೆಲಸ ಮಾಡಿರುವುದರಿಂದ ಬಿಜೆಪಿ ನೂತನ ದಾಖಲೆ ಬರೆಯುವುದು ಶತಸಿದ್ಧ ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿಗರು ಹೆಚ್ಚಿನ ಹುಮ್ಮಸ್ಸಿನಲ್ಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲಿದ್ದ ಕನಕಪುರ ಲೋಕಸಭಾ ಕ್ಷೇತ್ರವಿದ್ದ ಕಾಲದಿಂದಲೂ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. 2 ಉಪಚುನಾವಣೆ ಮತ್ತು 14 ಸಾರ್ವತ್ರಿಕ ಚುನಾವಣೆ ಕಂಡಿರುವ ಕ್ಷೇತ್ರದಲ್ಲಿ ಜೆಡಿಎಸ್ 03 ಹಾಗೂ ಬಿಜೆಪಿ 01 ಬಾರಿ ಮಾತ್ರ ಗೆಲವು ಸಾಧಿಸಿರುವುದನ್ನು ಹೊರತುಪಡಿಸಿದರೆ ಉಳಿದ 12 ಚುನಾವಣೆಗಳಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಬಾಕ್ಸ್‌.....

ಡಿಕೆಸು ಗೆದ್ದರೆ 4ನೇ ಬಾರಿ ಸಂಸದರು:ಎಂ.ವಿ.ಚಂದ್ರಶೇಖರಮೂರ್ತಿ ಕಾಂಗ್ರೆಸ್‌ನಿಂದ ಆರು ಬಾರಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರೆ, ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಎರಡು ಬಾರಿ ಚುನಾಯಿತರಾಗಿದ್ದರು. ಚಂದ್ರಶೇಖರಮೂರ್ತಿ ಅವರನ್ನು ಹೊರತು ಪಡಿಸಿದರೆ ಬೇರೆ ಯಾರು ನಾಲ್ಕು ಬಾರಿ ಗೆಲುವು ಸಾಧಿಸಿಲ್ಲ.ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ 2009ರ ಚುನಾವಣೆಯಲ್ಲಿ ಬಿಜೆಪಿಯ ಸಿ.ಪಿ. ಯೋಗೇಶ್ವರ್ ವಿರುದ್ಧ ಗೆದ್ದಿದ್ದ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದರು. 2013ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಡಿ.ಕೆ. ಸುರೇಶ್ ಅವರು ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಮಣಿಸಿದ್ದರು. 2014ರಲ್ಲಿ ಪುನರಾಯ್ಕೆಯಾದ ಕಾಂಗ್ರೆಸ್ಸಿನ ಡಿ.ಕೆ. ಸುರೇಶ್ 2019ರ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದರು. ಇದೀಗ ನಾಲ್ಕನೇ ಬಾರಿ ಗೆದ್ದರೆ ಸಾಧನೆಯಾಗಲಿದೆ.

ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಗೆಲುವು ಸಾಧಿಸಿದರೂ ದಾಖಲೆಯಾಗಲಿದೆ. ಒಂದು ವೇಳೆ ಇವರಿಬ್ಬರನ್ನು ಹೊರತು ಪಡಿಸಿ ಮೂರನೇ ಅಭ್ಯರ್ಥಿ ಗೆಲುವು ಸಾಧಿಸಿದರೆ ಅದೂ ಮತ್ತೊಂದು ವಿಶೇಷಕ್ಕೆ ಕಾರಣವಾಗಲಿದ್ದು, ಅದು ದಾಖಲೆಯ ಪುಟ ಸೇರುವುದರಲ್ಲಿ ಸಂದೇಹವಿಲ್ಲ.

ಹೀಗಾಗಿ ಪ್ರಸ್ತುತ ಚುನಾವಣೆಯಲ್ಲಿ ಗೆಲುವು ಯಾರದೇ ಆದರೂ ಒಂದು ವಿಶೇಷ ದಾಖಲೆ ಆಗಲಿದೆ ಎಂಬುದು ನಿಶ್ಚಿತವಾಗಿದೆ. ಸೋಲು ಗೆಲುವು ಎಂಬುದು ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ಸಾರ್ವಜನಿಕರ ಪಾಲಿಗೂ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.29ಕೆಆರ್ ಎಂಎನ್ 1,2.ಜೆಪಿಜಿ

1.ಡಿ.ಕೆ.ಸುರೇಶ್

2.ಡಾ.ಸಿ.ಎನ್ .ಮಂಜುನಾಥ್