ಸಾರಾಂಶ
ಧಾರವಾಡ:
ಡಾ. ದ.ರಾ. ಬೇಂದ್ರೆ ಅವರು ಧಾರವಾಡಕ್ಕೆ ಜ್ಞಾನಪೀಠ ಪ್ರಶಸ್ತಿಯ ಗರಿ ತಂದುಕೊಡುವ ಜತೆಗೆ ಇಲ್ಲಿನ ಭಾಷೆ-ಸಂಸ್ಕೃತಿಯ ಸೊಗಡನ್ನು ವಿಶ್ವಕ್ಕೆ ಪರಿಚಯಿಸಿದವರು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಗರದ ಬೇಂದ್ರೆ ಭವನದಲ್ಲಿ ಏರ್ಪಡಿಸಿದ್ದ ‘ಶ್ರಾವಣ ಸಾಂಸ್ಕೃತಿಕ ಸಂಜೆ’ ಉದ್ಘಾಟಿಸಿದ ಅವರು,
ಬೇಂದ್ರೆ, ಕುವೆಂಪು, ಗೋಕಾಕರು ನವೋದಯದ ಸಾಹಿತ್ಯಕ್ಕೆ ವಿಶಿಷ್ಠ ಕೊಡುಗೆ ಕೊಟ್ಟಿದ್ದಾರೆ. ಇಂಥ ಸಾಹಿತಿ, ಕವಿಗಳ ವಿಚಾರಧಾರೆ ಇಂದಿನ ಮಕ್ಕಳಿಗೆ ಪರಿಚಯಿಸುವುದು ಅತ್ಯಗತ್ಯ ಎಂದರು.ಸಾಹಿತ್ಯ, ಸಂಗೀತವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಪರಿಪೂರ್ಣವಾಗುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಠ ಕೊಡುಗೆ ಕೊಟ್ಟಂತಹ ಕವಿಗಳು, ಸಾಹಿತಿಗಳು ಹಾಗೂ ಸಂಗೀತಗಾರರ ಕುರಿತು ಹಾಡು, ಭಾಷಣ ಹಾಗೂ ನಿಬಂಧ ಸ್ಪರ್ಧೆಗಳನ್ನು ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಬೇಕಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಬೇಂದ್ರೆ ಶ್ರಾವಣದ ಕವಿಯಾಗಿದ್ದು, ಶ್ರಾವಣ, ಶ್ರಾವಣದ ಪೃಕೃತಿಯ ಕುರಿತು ವಿಶಿಷ್ಠ ಪದ್ಯಗಳನ್ನು ನೀಡಿದ್ದಾರೆ. ಪ್ರತಿವರ್ಷ ಶ್ರಾವಣ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅವರನ್ನು ಸ್ಮರಿಸಲಾಗುತ್ತಿದೆ ಎಂದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕುವೆಂಪು ಅವರ ಎತ್ತರದಷ್ಟೇ ಸಾಹಿತ್ಯವನ್ನು ಬೇಂದ್ರೆಯವರು ರಚಿಸಿದ್ದರೂ ಸಹ, ಬೇಂದ್ರೆಯವರ ಸಮಗ್ರ ಸಾಹಿತ್ಯದ ಸಂಪುಟಗಳು ಬರಲಿಲ್ಲ. ಧಾರವಾಡದ ಸಾಹಿತ್ಯ ಲೋಕ ಈ ಕುರಿತು ಆಲೋಚನೆ ಮಾಡಬೇಕಿದೆ. ಮೈಸೂರು ಬಿಟ್ಟರೆ ಧಾರವಾಡ ಸಾಂಸ್ಕೃತಿಕ ನಗರಿ ಎಂದು ಕರೆಯುತ್ತೇವೆ. ಧಾರವಾಡದಲ್ಲಿ ನಿತ್ಯವೂ ಒಂದಿಲ್ಲೊಂದು ವೈಶಿಷ್ಠಪೂರ್ಣ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ ಎಂದರು. ವಿದುಷಿ ನಾಗರತ್ನಾ ಹಡಗಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಸತೀಶ ಜಾಧವ ನಿರೂಪಸಿದರು. ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ವಂದಿಸಿದರು. ದರ್ಬಾರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಸುಗಮ ಸಂಗೀತ ಕಾರ್ಯಕ್ರಮ ನೀಡಿದರು. ತಬಲಾದಲ್ಲಿ ಡಾ. ಎ.ಎಲ್. ದೇಸಾಯಿ ಹಾಗೂ ಬಸವರಾಜ ಹೂಗಾರ ಹಾರ್ಮೊನಿಯಂ ಸಾಥ ಸಂಗತ ನೀಡಿದರು.
ವಿದುಷಿ ನಾಗರತ್ನಾ ಹಡಗಲಿ ಅವರ ನೃತ್ಯ ಸಂಯೋಜನೆಯಲ್ಲಿ ರತಿಕಾ ನೃತ್ಯ ನಿಕೇತನದ ಕಲಾವಿದರಿಂದ ಬೇಂದ್ರೆ ಗೀತೆಗಳಾದ ಶ್ರಾವಣ ಬಂತು ನಾಡಿಗೆ, ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಹಾಗೂ ಬಸವಣ್ಣ ನಿನ್ನ ಕಂಡು, ದೀಪವು ನಿನ್ನದೆ, ವಿಶ್ವವಿನೂತನ ವಿದ್ಯಾಚೇತನ ಹಾಡಿಗೆ ಅತ್ಯಂತ ಮನಮೋಹಕವಾಗಿ ನೃತ್ಯವನ್ನು ಪ್ರಸ್ತುತಪಡಿಸಿದರು.ಡಾ. ಎಸ್.ಎಂ. ಲೋಕಾಪೂರ, ಡಾ. ಶಾಂತಾರಾಮ ಹೆಗಡೆ, ಡಾ. ದೀಪಕ ಆಲೂರ, ಮಲ್ಲಿಕಾರ್ಜುನ ಚಿಕ್ಕಮಠ, ಡಾ. ಧನವಂತ ಹಾಜವಗೋಳ, ಡಾ. ಶೈಲಜಾ ಅಮರಶೆಟ್ಟಿ, ವಿದುಷಿ ರಶ್ಮಿ ಕಾಖಂಡಕಿ, ಸಿ.ಸಿ. ಹಿರೇಮಠ ಶಿವಾನಂದ ಹೂಗಾರ, ಎಸ್.ಎಸ್. ಬಂಗಾರಿಮಠ, ರಮೇಶ ಉಳ್ಳಾಗಡ್ಡಿ, ಎಂ.ಆರ್. ಕಬ್ಬೇರ, ಸುನೀಲ ಕುಲಕರ್ಣಿ, ಡಾ. ಶ್ರೀನಿವಾಸ ಕಾಂತನವರ ಇದ್ದರು.