ಬೇಂದ್ರೆ ಒಲವಿನ ವೇದಾಂತಿ: ಡಾ.ಮಹೇಶ್‌ ಜೋಶಿ ಬಣ್ಣನೆ

| Published : Feb 01 2024, 02:02 AM IST

ಬೇಂದ್ರೆ ಒಲವಿನ ವೇದಾಂತಿ: ಡಾ.ಮಹೇಶ್‌ ಜೋಶಿ ಬಣ್ಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಮಾತನಾಡಿ, ಬೇಂದ್ರೆ ಅವರು ಜೀವಿತಾವಧಿಯಲ್ಲೇ ಇಹಲೋಕವನ್ನು ಮೀರಿ ಬದುಕಿದವರು. ಬದುಕಿನಲ್ಲಿ ಮೂಲ ಪ್ರೇಮವನ್ನು ಹಿಡಿದ ಅವರನ್ನು ‘ಒಲವಿನ ವೇದಾಂತಿ’ ಎಂದು ವರ್ಣಿಸಲಾಯಿತು. ಅವರೊಬ್ಬ ಹುಟ್ಟು ಕವಿ. ಅವರ ಮಾತೇ ಕಾವ್ಯದ ಪ್ರವಾಹದಂತೆ ಇರುತ್ತಿತ್ತು ಎಂದರು. ಕರ್ನಾಟಕದ ವರಕವಿ ದ.ರಾ. ಬೇಂದ್ರೆ ಅವರ ಹೆಸರಿನ ‘ಬೇಂದ್ರೆ ಟ್ರಸ್ಟ್‌’ ಹಣದ ಕೊರತೆಯಿಂದ ನರಳುತ್ತಿದ್ದು, ಸರ್ಕಾರ ಇದಕ್ಕೆ ನೆರವು ನೀಡುವ ಬಗ್ಗೆ ಗಮನ ಹರಿಸಬೇಕು ಎಂದು ಚಿಂತಕ ಡಾ.ಬಸವರಾಜ ಸಬರದ ಮನವಿ ಮಾಡಿದರು.

ಬೇಂದ್ರೆ ಟ್ರಸ್ಟ್‌ಗೆ ಸರ್ಕಾರ ನೆರವು ನೀಡಲಿ: ಡಾ.ಬಸವರಾಜ ಸಬರದ

ಕನ್ನಡಪ್ರಭ ವಾರ್ತೆ, ಬೆಂಗಳೂರು

ಕರ್ನಾಟಕದ ವರಕವಿ ದ.ರಾ. ಬೇಂದ್ರೆ ಅವರ ಹೆಸರಿನ ‘ಬೇಂದ್ರೆ ಟ್ರಸ್ಟ್‌’ ಹಣದ ಕೊರತೆಯಿಂದ ನರಳುತ್ತಿದ್ದು, ಸರ್ಕಾರ ಇದಕ್ಕೆ ನೆರವು ನೀಡುವ ಬಗ್ಗೆ ಗಮನ ಹರಿಸಬೇಕು ಎಂದು ಚಿಂತಕ ಡಾ.ಬಸವರಾಜ ಸಬರದ ಮನವಿ ಮಾಡಿದರು.

ಬೇಂದ್ರೆ ಅವರ 128ನೇ ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಬೇಂದ್ರೆ- ವಿಶೇಷ ಉಪನ್ಯಾಸ’ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಂದ್ರೆಯವರು ಯುಗದ ಕವಿ, ಅವರ ಕಾವ್ಯ ವಾಚ್ಯಾರ್ಥಗಳನ್ನು ಮೀರಿದ್ದು. ಅವರ ಒಂದೊಂದು ಕಾವ್ಯವೂ ಅಲ್ಲಮನ ವಚನಗಳಂತೆ ಅರ್ಥವನ್ನು ದಾಟಿ ಅನುಭಾವವನ್ನು ಮುಟ್ಟುತ್ತವೆ. ಅವರ ಒಂದೊಂದು ಕವಿತೆಯ ಕುರಿತು ಒಂದೊಂದು ಪುಸ್ತಕ ಬರೆಯಬಹುದು ಎಂದರು.

ಬೇಂದ್ರೆ ಅವರು ಬದುಕಿದ್ದಾಗ ಯಾವತ್ತೂ ಯಾರನ್ನೂ ಏನನ್ನೂ ಕೇಳಿದವರಲ್ಲ. ಆದರೆ, ಈಗ ಅವರ ಹೆಸರಿನ ಬೇಂದ್ರೆ ಟ್ರಸ್ಟ್ ಕೂಡ ಹಣದ ಕೊರತೆಯಿಂದ ನರಳುತ್ತಿದೆ. ಸರ್ಕಾರ ಇದಕ್ಕೆ ನೆರವು ನೀಡಲು ಮುಂದಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಮಾತನಾಡಿ, ಬೇಂದ್ರೆ ಅವರು ಜೀವಿತಾವಧಿಯಲ್ಲೇ ಇಹಲೋಕವನ್ನು ಮೀರಿ ಬದುಕಿದವರು. ಬದುಕಿನಲ್ಲಿ ಮೂಲ ಪ್ರೇಮವನ್ನು ಹಿಡಿದ ಅವರನ್ನು ‘ಒಲವಿನ ವೇದಾಂತಿ’ ಎಂದು ವರ್ಣಿಸಲಾಯಿತು. ಅವರೊಬ್ಬ ಹುಟ್ಟು ಕವಿ. ಅವರ ಮಾತೇ ಕಾವ್ಯದ ಪ್ರವಾಹದಂತೆ ಇರುತ್ತಿತ್ತು ಎಂದರು.

ಬರಗಾರ್ತಿ ಡಾ.ಗೀತಾ ವಸಂತ ಅವರು ಮಾತನಾಡಿ, ಬೇಂದ್ರೆ ಹುಟ್ಟು ಸಾವು ಮೀರಿದ ಪ್ರಜ್ಞೆಯ ವಿಶೇಷ ಚೇತನ, ಅವರು ಅಪ್ಪಟ ದೇಸಿಯೂ ಹೌದು ಅವಧೂತರೂ ಹೌದು. ಜನವಾಣಿಯನ್ನು ಆತ್ಮವಾಣಿಯಾಗಿಸಿದ ಅವರ ಕಾವ್ಯದ ದನಿಯನ್ನು ಹಿಡಿಯುವುದು ಕಷ್ಟ. ನೋವನ್ನೇ ನುಂಗಿದರೂ ಆನಂದ ಉಣಿಸಿ, ಪಟ್ಟ ಪಾಡನ್ನೆಲ್ಲಾ ಹುಟ್ಟು ಹಾಡಾಗಿಸುವ ಮೂಲಕ ಬದುಕಿನ ಎಲ್ಲ ಅನುಭವಗಳನ್ನೂ ರಸವಾಗಿಸಿದರು ಎಂದು ಸ್ಮರಿಸಿದರು.

ಕಸಾಪ ಕೋಶಾಧ್ಯಕ್ಷ ಬಿ.ಎಂ.ಪಟೇಲ ಪಾಂಡು, ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು ಮತ್ತಿತರರು ಭಾಗವಹಿಸಿದ್ದರು.