ಸಾರಾಂಶ
ಧಾರವಾಡ:
ಸ್ತ್ರೀ ತತ್ವವನ್ನು ವರಕವಿ ದ.ರಾ. ಬೇಂದ್ರೆ ಅವರು ತಮ್ಮ ಕಾವ್ಯದುದ್ದಕ್ಕೂ ಅಭಿವ್ಯಕ್ತ ಪಡಿಸಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ಕೃಷ್ಣ ಕಟ್ಟಿ ಹೇಳಿದರು.ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಬೇಂದ್ರೆ ಭವನದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿಯನ್ನು ಒಂದು ದೈವಿ ದರ್ಶನದಲ್ಲಿಟ್ಟು ನೋಡಿ, ಅದಕ್ಕೊಂದು ಸ್ವರೂಪ, ಸಿದ್ಧಾಂತ ಕೊಟ್ಟಂತಹ ಜಗತ್ತಿನ ಬಹುದೊಡ್ಡ ಕವಿ ಬೇಂದ್ರೆ. ಅವರ ಕಾವ್ಯದಲ್ಲಿ ಮಾತೃತ್ವ ದರ್ಶನ, ಮೀಮಾಂಸೆ, ರಸ ಅಲಂಕಾರವಾಗುತ್ತದೆ. ಈ ಎಲ್ಲ ತತ್ವಗಳನ್ನು ತಾಯಿ, ಅಂಬವ್ವ, ಅವ್ವ ಅಥವಾ ಅಬ್ಬೆ ಅನ್ನುವ ವಸ್ತು, ವಿಷಯ ರೂಪಕದಲ್ಲಿ ಕಟ್ಟಿಕೊಟ್ಟವರು ಬೇಂದ್ರೆ. ಜಗತ್ತಿನ ಸೃಷ್ಟಿಕರ್ತಳು ತಾಯಿ. ಸದಾ ಹೊಸದನ್ನು ಸೃಷ್ಟಿಸುವುದು ಸ್ತ್ರೀ ತತ್ವದ ಸಂಕೇತವಾಗಿದೆ ಎಂದರು.
ಮಾತೃಕೆಯರು ಎಂಬ ಶಬ್ದ ದರ್ಶನ ಮೀಮಾಂಸೆಯಲ್ಲಿ ಬೇರೆ ಬೇರೆ ಸ್ವರೂಪ ಪಡೆಯುತ್ತದೆ. ಬೇಂದ್ರೆ ದರ್ಶನ ಮೀಮಾಂಸೆಯಿಂದ ಅದನ್ನು ಕಾವ್ಯ ಮೀಮಾಂಸೆಗೆ ವಿಶಿಷ್ಟವಾಗಿ ಸಂಯೋಜಿಸಿದ್ದಾರೆ. ಅವರ ಸಖೀಗೀತದ ಮೇಲೆ ಗಂಭೀರವಾಗಿ ಅಭ್ಯಸಿಸಿದಷ್ಟು ಅವರ ಬಾಲ್ಯಕಾಂಡದ ಮೇಲೆ ಅಧ್ಯಯನವಾಗಿಲ್ಲ ಎಂದು ಹೇಳಿದರು.ಮರಾಠಿ ಸಾಹಿತ್ಯ ಕನ್ನಡಕ್ಕೆ:
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್, ನವೋದಯದ ಕವಿಗಳು ತಮ್ಮ ತಾಯಿಯವರೊಂದಿಗೆ ಇದ್ದ ಒಲವು, ಗೌರವವನ್ನು ತಮ್ಮ ಕಾವ್ಯಗಳಲ್ಲಿ ಅದ್ಭುತವಾಗಿ ಅಭಿವ್ಯಕ್ತಪಡಿಸಿದ್ದಾರೆ. ಹೊಸಗನ್ನಡದ ಆರಂಭಿಕ ಕವಿಗಳ ಮಹಿಳಾಪರ ಧೋರಣೆಯು ಮುಂಬರುವ ಸಾಹಿತ್ಯ ರಚನೆಗೆ ಮಾರ್ಗವನ್ನು ನಿರ್ಮಾಣ ಮಾಡಿತೆಂದರೆ ತಪ್ಪಾಗಲಾರದು. ಬೇಂದ್ರೆಯವರು ಮರಾಠಿಯಲ್ಲಿ ಬರೆದಿರುವ ಎರಡು ಸಾವಿರಕ್ಕೂ ಹೆಚ್ಚು ಪುಟಗಳಷ್ಟು ಸಾಹಿತ್ಯ ಲಭ್ಯವಿದೆ. ಅದನ್ನು ಕನ್ನಡಕ್ಕೆ ತರುವ ಕೆಲಸ ಮಾಡುವುದು ಬಹಳ ಅವಶ್ಯವಿದೆ ಎಂದರು.ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ಡಾ. ಅಶೋಕ ಶೆಟ್ಟರ, ಡಾ. ವೈ.ಎಂ. ಯಾಕೊಳ್ಳಿ, ಡಾ. ಶಿಲಾಧರ ಮುಗಳಿ, ಡಾ. ಶರಣಮ್ಮ ಗೊರೇಬಾಳ, ಇಮಾಮಸಾಬ್ ವಲ್ಲೆಪ್ಪನವರ, ಪ್ರಭು ಕುಂದರಗಿ ಇದ್ದರು. ನಾದಸುರಭಿ ಸಾಂಸ್ಕೃತಿಕ ಅಕಾಡೆಮಿಯ ಡಾ. ಜ್ಯೋತಿಲಕ್ಷ್ಮಿ ಕೂಡ್ಲಿಗಿ ತಂಡ ಡಾ. ದ.ರಾ. ಬೇಂದ್ರೆ ಗೀತೆ ಪ್ರಸ್ತುತಪಡಿಸಿದರು. ಭರತ ನೃತ್ಯ ಅಕಾಡೆಮಿಯ ವಿದ್ವಾನ್ ರಾಜೇಂದ್ರ ಟೊಣಪಿ ಮತ್ತು ತಂಡ ಬೇಂದ್ರೆ ಗೀತೆಗಳಿಗೆ ವೈವಿಧ್ಯಮಯ ನೃತ್ಯ ಪ್ರಸ್ತುತಪಡಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.
ಬೇಂದ್ರೆಗೆ ಸಿಗಲಿ ಕರ್ನಾಟಕ ರತ್ನ...ಬೇಂದ್ರೆ ಎಂದರೆ ಬೆರಗು ಮತ್ತು ಬೆಳಗು, ದಾರ್ಶನಿಕ ಕವಿ, ಯುಗದ ಕವಿ. ಇಂತಹ ಜಗದ ಕವಿಗೆ ರಾಜ್ಯ ಸರ್ಕಾರ “ಕರ್ನಾಟಕ ರತ್ನ” ಘೋಷಣೆ ಮಾಡಬೇಕೆಂಬುದು ಸಮಿತಿಯ ಆಶಯವಾಗಿದ್ದು ಜ. 31ರಂದು ಅವರ ಜನ್ಮದಿನವಿದ್ದು ಘೋಷಿಸಬೇಕು.
ಡಾ. ಸರಜೂ ಕಾಟ್ಕರ್, ಬೇಂದ್ರೆ ಟ್ರಸ್ಟ್ ಅಧ್ಯಕ್ಷ