ಪಿಕಾರ್ಡ್ ಬ್ಯಾಂಕ್‌ನಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿಲ್ಲ

| Published : Sep 26 2024, 09:47 AM IST

ಸಾರಾಂಶ

ಪಾಂಡವಪುರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ಪೀಕಾರ್ಡ್) ನಿರ್ದೇಶಕರು ತಮ್ಮ ನೀಡುವ ಸಾಲ ಸೌಲಭ್ಯದ ಫಲಾನುಭವಿಗಳು ಬ್ಯಾಂಕ್‌ನ ನಿರ್ದೇಶಕರ ಸಂಬಂಧಿಕರು ಮತ್ತು ಸ್ನೇಹಿತರೇ ಆಗಿದ್ದಾರೆ. ಇತರರೆ ಷೇರುದಾರರಿಗೆ ಸಾಲ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಿಕಾರ್ಡ್ ಬ್ಯಾಂಕ್‌ನ ಎಲ್ಲಾ ವ್ಯವಹಾರದಲ್ಲಿ ದಲ್ಲಾಳಿಗಳ ಪಾತ್ರ ಹೆಚ್ಚಾಗಿದೆ. ಅರ್ಹ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಷೇರುದಾರರು ಆಡಳಿತ ಮಂಡಳಿ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬ್ಯಾಂಕ್‌ನ ಅಧ್ಯಕ್ಷ ನಾಗಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಷೇರುದಾರರು ಸಂಘದ ಆಡಳಿತ ಮಂಡಳಿ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ಪಿಕಾರ್ಡ್) ನಿರ್ದೇಶಕರು ತಮ್ಮ ನೀಡುವ ಸಾಲ ಸೌಲಭ್ಯದ ಫಲಾನುಭವಿಗಳು ಬ್ಯಾಂಕ್‌ನ ನಿರ್ದೇಶಕರ ಸಂಬಂಧಿಕರು ಮತ್ತು ಸ್ನೇಹಿತರೇ ಆಗಿದ್ದಾರೆ. ಇತರರೆ ಷೇರುದಾರರಿಗೆ ಸಾಲ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆಸಿದರು.

ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿರುವ ವ್ಯಕ್ತಿಗಳು ಹೇಳಿದವರಿಗೆ ಮಾತ್ರ ಸೌಲಭ್ಯ ಎನ್ನುವಂತಾಗಿದೆ. ಹಾಗಾದರೆ ಷೇರುದಾರರ ಅವಶ್ಯಕತೆ ಏನಿದೆ ಎಂದು ತರಾಟೆ ತೆಗೆದುಕೊಂಡರು.

ಷೇರುದಾರರ ಪ್ರಶ್ನೆಗಳಿಗೆ ಸಂಘದ ನಿರ್ದೇಶಕ ಮಲ್ಲಿಗೆರೆ ಯಶವಂತ್ ಒಬ್ಬರೇ ಎಲ್ಲದಕ್ಕೂ ಉತ್ತರ ನೀಡಲು ಮುಂದಾದಾಗ ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಷೇರುದಾರರು ಅಧ್ಯಕ್ಷ ನಾಗಶೆಟ್ಟಿ ಅವರೇ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು.

ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಸರ್ಕಾರದಿಂದ ಸಿಗುವ ಮಾರ್ಜಿನ್ ಹಣದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಇದರಿಂದ ಈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಇದುವರಗೆ ಸದಸ್ಯರಿಗೆ ಷೇರು ಪ್ರಮಾಣ ಪತ್ರ ಯಾಕೆ ನೀಡಿಲ್ಲ. ಷೇರುದಾರರ ಅಮಾನತು ಮೊತ್ತ 2.27 ಲಕ್ಷ ಕಳೆದ 10೦ ವರ್ಷಗಳಿಂದಲ್ಲೂ ಆಡಿಟ್ ವರದಿಯಲ್ಲಿ ಹಾಗೆ ಮುಂದುವರೆದಿದೆ. ವಾರ್ಷಿಕ ಸಭೆ ಬಗ್ಗೆ ಷೇರುದಾರರಿಗೆ ಆಹ್ವಾನ ತಲುಪಿಸುತ್ತಿಲ್ಲ ಎಂದು ದೂರಿದರು.

ಬ್ಯಾಂಕ್‌ಗೆ ಬರುವಂತಹ ಷೇರುದಾರರ ಬಳಿ ಸಿಬ್ಬಂದಿ ಅಗೌರವದಿಂದ ನಡೆದುಕೊಳ್ಳುತ್ತಾರೆ. ಸಂಘಕ್ಕೆ ಆದಾಯ ಮೂಲ ಹೆಚ್ಚಿಸಲು ಬ್ಯಾಂಕ್‌ನ ಮುಂಭಾಗದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಎಂದು ಕಳೆದ ವಾರ್ಷಿಕ ಸಭೆಯಲ್ಲಿ ತಿರ್ಮಾನವಾಗಿದೆ. ಆದರೂ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾರ್ಷಿಕ ಮಹಾ ಸಭೆ ಷೇರುದಾರರ ಅಭಿಪ್ರಾಯಕ್ಕೆ ಮಾತ್ರ ಸಿಮೀತವಾಗಿದೆ ಎಂದು ಸದಸ್ಯರಾದ ಹಿರೇಮರಳಿ ಯೋಗೇಶ್, ಕೃಷ್ಣೇಗೌಡ, ಮಹದೇವು, ದೇವರಾಜು, ಶ್ಯಾದನಹಳ್ಳಿ ಜಯರಾಮು, ಕೆನ್ನಾಳು ಪುಟ್ಟೇಗೌಡ, ಪಟೇಲ್ ರಮೇಶ್ ಕಿಡಿಕಾರಿದರು.

ಸಭೆಯಲ್ಲಿ ಅಧ್ಯಕ್ಷ ನಾಗಶೆಟ್ಟಿ, ಉಪಾಧ್ಯಕ್ಷ ಚನ್ನಯ್ಯ ನಿರ್ದೇಶಕರಾದ ಸಿ. ಪ್ರಕಾಶ್, ರತ್ನಮ್ಮ, ಡಿಎನ್ ಸೋಮಶೇಖರ್, ಮುರುಳಿ ಎನ್, ಗೌರಮ್ಮ, ಶಿವಣ್ಣ, ಎಚ್‌.ಎನ್ ದಯಾನಂದ, ಗುರುರಾಜ್ ಕೆ.ಎಂ, ನರೇಂದ್ರ ಬಾಬು, ನಾಗೇಗೌಡ, ಚಂದ್ರಶೇಖರ್ ಇತರರು ಇದ್ದರು.