ಇಂದು ಕರ್ನಾಟಕ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ

| Published : Feb 05 2024, 01:47 AM IST / Updated: Feb 05 2024, 05:09 PM IST

ಇಂದು ಕರ್ನಾಟಕ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಲ್ಲಿ ಯೋಜನೆಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಯೋಜನಾ ಫಲಾನುಭವಿಗಳ ಸಮಾವೇಶ ಸಂಘಟಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಧಾರವಾಡ: ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಫೆ. 5ರಂದು ಸಂಜೆ 5ಕ್ಕೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಯೋಜನೆಗಳು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗಿದೆ. 

ಧಾರವಾಡ ಪಶ್ಚಿಮ, ಧಾರವಾಡ ಗ್ರಾಮೀಣ ಮತಕ್ಷೇತ್ರದ ಹಾಗೂ ಅಳ್ನಾವರ ತಾಲೂಕಿನ ಫಲಾನುಭವಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಮಿಕ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಇಲ್ಲಿಯ ಸರ್ಕ್ಯೂಟ್ ಹೌಸ್‌ನಲ್ಲಿ ಯೋಜನಾ ಫಲಾನುಭವಿಗಳ ಸಮಾವೇಶದ ಪೂರ್ವಭಾವಿ ಸಿದ್ಧತೆಗಾಗಿ ಭಾನುವಾರ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿದ ಅವರು, ಈ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಂಟು ಸಾವಿರ, ಆಹಾರ ಇಲಾಖೆಯ ಹತ್ತು ಸಾವಿರ,

 ಹೆಸ್ಕಾಂ ಪರವಾಗಿ 1,500, ಸಹಕಾರಿ ಮತ್ತು ಕೆಎಂಎಫ್ ಇಲಾಖೆಯ ಒಂದು ಸಾವಿರ ಮತ್ತು ಕಾರ್ಮಿಕ ಇಲಾಖೆಯ ಒಂದು ಸಾವಿರ ಜನ ಸೇರಿ ವಿವಿಧ ಇಲಾಖೆಗಳ ಅಂದಾಜು 21 ಸಾವಿರ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಅವರ ಬರುವಿಕೆಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 223 ಬಸ್‌ಗಳನ್ನು ನಿಯೋಜಿಸಲಾಗಿದೆ. ಮೈದಾನದಲ್ಲಿ ಬೃಹತ್ತ ವೇದಿಕೆ ಹಾಕಲಾಗುತ್ತಿದ್ದು, ಆಸನ, ಕುಡಿಯುವ ನೀರು, ಬಿಸ್ಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಸರ್ಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸವುದು, ಸಾರ್ವಜನಿಕರಲ್ಲಿ ಯೋಜನೆಗಳ ಕುರಿತು ಅರಿವು ಮೂಡಿಸುವುದು ಮುಖ್ಯ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಯೋಜನಾ ಫಲಾನುಭವಿಗಳ ಸಮಾವೇಶ ಸಂಘಟಿಸಲಾಗುತ್ತಿದೆ. 

ಅಧಿಕಾರಿಗಳು ಮತ್ತು ಕ್ಷೇತ್ರಮಟ್ಟದ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಅಚ್ಚುಕಟ್ಟಾಗಿ ಆಯೋಜಿಸಲು ಪ್ರತಿ ಹಂತದಲ್ಲಿ ವಿವಿಧ ಅಧಿಕಾರಿಗಳನ್ನು ನೊಡಲ್ ಅಧಿಕಾರಿಗಳನ್ನಾಗಿ ನೇಮಿಸಿ, ಅವರಿಗೆ ಕಾರ್ಯ ಹಂಚಿಕೆ ಮಾಡಲಾಗಿದೆ. ತಮಗೆ ವಹಿಸಿರುವ ಕಾರ್ಯಗಳನ್ನು ಲೋಪವಾಗದಂತೆ, ಜನಸ್ನೇಹಿಯಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಏನೇನು ಕಾರ್ಯಕ್ರಮ: ಜೀ ಕನ್ನಡ ವಾಹಿನಿ ಖ್ಯಾತಿಯ ಉಡುಪಿ ಗಾಯಕಿ ಕಲಾವತಿ ದಯಾನಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಮಾರು 10 ಕಲಾತಂಡಗಳ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪ ಪೊಲೀಸ್ ಆಯುಕ್ತ ರಾಜೀವ ಎಂ., ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಉಪವಿಭಾಗಾಧಿಕಾರಿ ಶಾಲಂ ಹುಸೆನ್, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ಧನಗೌಡರ, ಡಿಎಚ್‌ಒ ಡಾ. ಶಶಿ ಪಾಟೀಲ, ಆಹಾರ ಇಲಾಖೆಯ ವಿನೋದಕುಮಾರ ಹೆಗ್ಗಳಗಿ ಮತ್ತಿತರರು ಇದ್ದರು.