ಅಡಕೆ ಬೆಳೆಗಾರರಿಗೆ ಇನ್ನೂ ಪಾವತಿಯಾಗದ ಹವಾಮಾನ ಆಧಾರಿತ ಬೆಳೆ ವಿಮೆ

| Published : Jan 03 2024, 01:45 AM IST

ಅಡಕೆ ಬೆಳೆಗಾರರಿಗೆ ಇನ್ನೂ ಪಾವತಿಯಾಗದ ಹವಾಮಾನ ಆಧಾರಿತ ಬೆಳೆ ವಿಮೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆ ಆಧಾರಿತ ವಿಮಾ ಸೌಲಭ್ಯದಿಂದ ದ.ಕ. ಜಿಲ್ಲೆಯ ಕಡಬ, ಸುಳ್ಯ ಪ್ರದೇಶದ ಅಡಕೆ ಬೆಳೆಗಾರ ಫಲಾನುಭವಿಗಳು ವಂಚಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನ ಕೆಲವು ಗ್ರಾಮಗಳು ಕೇಂದ್ರ ಸ್ವಾಮ್ಯದ ಹವಾಮಾನ ಆಧಾರಿತ ಬೆಳೆ ವಿಮಾ ಸೌಲಭ್ಯದಿಂದ ವಂಚಿತಗೊಂಡಿವೆ.

ಕಡಬ ತಾಲೂಕಿಗೆ ಸೇರಿದ ಎಣ್ಮೂರು ಗ್ರಾಮದ ಅಡಕೆ ಕೃಷಿಕರಿಗೆ ಹವಾಮಾನ ಬೆಳೆ ವಿಮೆ ಇನ್ನೂ ಬಂದಿಲ್ಲ. ಅದೇ ರೀತಿ ಎಡಮಂಗಲ, ಸುಳ್ಯದ ಮುರುಳ್ಯಗ್ರಾಮದ ಕೆಲವು ಮಂದಿಗೆ ವಿಮಾ ಸೌಲಭ್ಯ ಸಿಕ್ಕಿಲ್ಲ. ಈ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ, ಒಂದೊಂದು ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ನಿಗದಿತ ಅವಧಿಯಲ್ಲಿ ಅಡಕೆ ಬೆಳೆಗಾರರು ಪ್ರೀಮಿಯಂ ತುಂಬಿದ್ದಾರೆ. ಆದರೆ ಈಗ ತಾಂತ್ರಿಕ ಅಡಚಣೆಯನ್ನು ಅಧಿಕಾರಿಗಳು ಮುಂದಿಡುತ್ತಿದ್ದಾರೆ. ಕಳೆದ ಅವಧಿಯಲ್ಲಿ ಕ್ಲಪ್ತ ಸಮಯಕ್ಕೆ ಹವಮಾನ ಆಧಾರಿತ ಬೆಳೆ ವಿಮೆ ಲಭಿಸಿದೆ. ಆದರೆ ಈ ವರ್ಷ ಸರಿಯಾಗಿಯೇ ಪ್ರೀಮಿಯಂ ಪಾವತಿಸಿರುವಾಗ ಯಾಕೆ ಕೆಲವು ಗ್ರಾಮಗಳಿಗೆ ಸಿಕ್ಕಿಲ್ಲ ಎಂದು ಪ್ರಶ್ನಿಸುತ್ತಾರೆ.

ಈ ಬಾರಿ ಬೆಳೆ ವಿಮೆ ಪಾವತಿಯಲ್ಲೂ ಏರಿಳಿತವಾದ ಬಗ್ಗೆ ಬೆಳೆಗಾರರು ದೂರುತ್ತಿದ್ದಾರೆ. ಗ್ರಾಮಗಳಲ್ಲಿ ಹವಾಮಾನ ಸಾಮಾನ್ಯ ಒಂದೇ ರೀತಿ ಇರುತ್ತದೆ. ಆದರೆ ವಿಮೆ ಪಾವತಿ ವೇಳೆ ಅತ್ಯಲ್ಪ ಮೊತ್ತವನ್ನು ನೀಡಿದ್ದು ಇದೆ. ಇದು ವಿಮಾ ಕಂಪನಿ ಹಾಗೂ ಅಧಿಕಾರಿಗಳ ನಡುವಿನ ತೊಂದರೆಯಿಂದ ಆಗುತ್ತಿದೆ ಎನ್ನುವುದು ಬೆಳೆಗಾರರ ಆರೋಪ.

ಗ್ರಾಹಕ ಕೋರ್ಟ್‌ಗೆ ಮೊರೆ:

ಎರಡು ವರ್ಷ ಹಿಂದೆ ಇದೇ ರೀತಿ ಹವಾಮಾನ ಆಧಾರಿತ ಬೆಳೆ ವಿಮೆ ಸರಿಯಾಗಿ ಪಾವತಿ ಆಗದೇ ಇತ್ತು. ಇದನ್ನು ಪ್ರಶ್ನಿಸಿದಾಗ ಕಂಪನಿ ಏನೇನೋ ಸಬೂಬು ಹೇಳಿತ್ತು. ಆಗ 25 ಮಂದಿ ವಿಮೆ ವಂಚಿತ ಫಲಾನುಭವಿಗಳು ಇನ್ಸೂರೆನ್ಸ್‌ ಕಂಪನಿ ವಿರುದ್ಧ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಕಂಪನಿಗೆ ನೋಟಿಸ್‌ ಜಾರಿಗೊಳಿಸಿತ್ತು. ಕೂಡಲೇ ಕಂಪನಿ ಎಲ್ಲ ವಿಮಾ ಮೊತ್ತವನ್ನು ಬಿಡುಗಡೆಗೊಳಿಸಿತ್ತು ಎಂದು ನೆನಪಿಸುತ್ತಾರೆ ಎಣ್ಮೂರಿನ ಪ್ರಗತಿಪರ ಕೃಷಿಕ ಪ್ರಸನ್ನ ಕೆ.

ಹೊಂದಾಣಿಕೆ ಆಗದೇ ಇರುವುದು ಕಾರಣ?:

ಕಳೆದ ವರ್ಷದ ವಿಮೆ ಈ ಬಾರಿ ಪಾವತಿಸುವುದು ಕ್ರಮ. ಇನ್ನೂ ಆ ಮೊತ್ತ ಬಾರದೇ ಇರುವುದರಿಂದ ಮುಂದಿನ ವರ್ಷ ಪಾವತಿಗೊಳ್ಳುವ ಬಗ್ಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆಧಾರ್‌ ಜೋಡಣೆ, ಆರ್‌ಟಿಸಿಯಲ್ಲಿ ಹೆಸರು ವ್ಯತ್ಯಾಸ, ಹೊಸದಾಗಿ ಬೆಳೆ ನಮೂದು ಆಗದೇ ಇರುವುದು, ಬ್ಯಾಂಕ್‌ ಖಾತೆಯಲ್ಲಿ ವ್ಯತ್ಯಾಸ ಇವೇ ಮೊದಲಾದ ಕಾರಣಗಳು ವಿಮೆ ಪಾವತಿ ಆಗದೇ ಇರಲು ಕಾರಣ. ಇದು ಬಿಟ್ಟರೆ ಬೇರೆ ಏನೂ ಸಾಧ್ಯತೆ ಇಲ್ಲ ಎನ್ನುವುದು ಅಧಿಕಾರಿಗಳ ಸಮಜಾಯಿಷಿ. ಹೊಸ ತಾಲೂಕು ರಚನೆಗೊಂಡಿರುವಲ್ಲಿ ಕೃಷಿ ಜಮೀನುಗಳನ್ನು ವಿಭಜಿಸುವಲ್ಲಿನ ವಿಳಂಬ ಕೂಡ ಇನ್ನೊಂದು ಕಾರಣ ಎನ್ನುತ್ತಿದ್ದಾರೆ.