ಕನ್ನಡಪ್ರಭ ವಾರ್ತೆ ಅಥಣಿ: ರೈತರೇ ದೇಶದ ಬೆನ್ನೆಲುಬು, ಕೃಷಿಯೇ ನಮ್ಮ ಪ್ರಧಾನ ಉದ್ಯೋಗವಾಗಿದೆ. ನಮ್ಮ ರೈತರು ಕೇವಲ ಸಾಂಪ್ರದಾಯಿಕ ಕೃಷಿಗೆ ಅಂಟಿಕೊಳ್ಳದೆ, ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಸುಧಾರಿತ ಪದ್ಧತಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಕೃಷಿಯಲ್ಲಿ ಲಾಭ ಕಾಣಲು ಸಾಧ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ:
ರೈತರೇ ದೇಶದ ಬೆನ್ನೆಲುಬು, ಕೃಷಿಯೇ ನಮ್ಮ ಪ್ರಧಾನ ಉದ್ಯೋಗವಾಗಿದೆ. ನಮ್ಮ ರೈತರು ಕೇವಲ ಸಾಂಪ್ರದಾಯಿಕ ಕೃಷಿಗೆ ಅಂಟಿಕೊಳ್ಳದೆ, ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಸುಧಾರಿತ ಪದ್ಧತಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಕೃಷಿಯಲ್ಲಿ ಲಾಭ ಕಾಣಲು ಸಾಧ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಇಲ್ಲಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ರೈತ ಭವನದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಅಥಣಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕಬ್ಬಿನ ಬೆಳೆಗಾರರ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು. ಕಬ್ಬು ಬೆಳೆಗಾರರ ಏಳಿಗೆಗಾಗಿ ಕಾರ್ಖಾನೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಬ್ಬು ಬೆಳೆಗಾರರ ಸಹಕಾರದಿಂದ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ೬,೫೦೦ ರಿಂದ ೭ ಸಾವಿರ ಟನ್ ಕಬ್ಬು ನುರಿಸಲಾಗುತ್ತಿದೆ. ಬೇರೆ ಕಾರ್ಖಾನೆಗಳಿಗೆ ಹೋಲಿಸಿದರೆ ಕೃಷ್ಣಾ ಕಾರ್ಖಾನೆಯಲ್ಲಿ ತೂಕದಲ್ಲಿ ಪಾರದರ್ಶಕತೆ ಇರುವುದರಿಂದ ರೈತರಿಗೆ ಪ್ರತಿ ಎಕರೆಗೆ ಸುಮಾರು ₹ ೩೫ ಸಾವಿರ ಹೆಚ್ಚುವರಿ ಉಳಿತಾಯವಾಗುತ್ತಿದೆ. ರೈತರಿಗೆ ತೂಕದಲ್ಲಿ ಮೋಸವಾಗದಂತೆ ಹಾಗೂ ಸಕಾಲಕ್ಕೆ ಬಿಲ್ ಪಾವತಿಸಲು ನಾನು ಬದ್ಧವಿರುವುದಾಗಿ ತಿಳಿಸಿದರು.ಕಬ್ಬು ಬೆಳೆ ತಜ್ಞ ಸುನೀಲಕುಮಾರ ನೂಲಿ ಮಾತನಾಡಿ, ಅಲ್ಪಾವಧಿ ಅಥವಾ ಮಧ್ಯಮಾವಧಿ ಹಾಗೂ ಹೂ ಬಿಡದ ಕಬ್ಬಿನ ತಳಿಗಳನ್ನು ಆಯ್ಕೆ ಮಾಡಿ ಸಾಲುಗಳ ನಡುವೆ ಅಗಲ, ಅಂತರ ಕಾಯ್ದುಕೊಂಡರೆ ಗಾಳಿ- ಬಿಸಿಲು ಸಿಗುತ್ತದೆ. ಕಬ್ಬಿನ ರವದಿಯನ್ನು ಸುಡುವ ಬದಲು ಅದನ್ನು ಕೊಳೆಸಿ ಸಾವಯವ ಗೊಬ್ಬರವನ್ನಾಗಿ ಬಳಸಿ. ಕಬ್ಬು ಕಡಿದ ೫೦ ದಿನಗಳ ನಂತರ ಕಳಿಗೆ ಹರಿಯುವುದು ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ಕಬ್ಬು ಬೆಳೆಗಾರರು ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಸಾವಯುವ ಗೊಬ್ಬರದಿಂದ ಸುಧಾರಿತ ಕೃಷಿ ಕೈಗೊಳ್ಳಬೇಕು. ಕಬ್ಬುಬೆಳೆಗಾರರ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಗಮೋಡೆ, ಕೃಷಿ ಇಲಾಖೆಯ ನಿಂಗನಗೌಡ ಬಿರಾದಾರ, ನಿರ್ದೇಶಕರಾದ ಗೂಳಪ್ಪ ಜತ್ತಿ, ರಮೇಶ ಪಟ್ಟಣ, ಮುಖಂಡರಾದ ಎಸ್.ವಿ.ಕೋಳೇಕರ, ಶಿವಶಂಕರ ಮೂರ್ತಿ, ಡಾ.ಎಸ್.ಎಸ್.ನೂಲಿ, ಡಾ.ಮಂಜುನಾಥ್ ಜೋಡರೆಟ್ಟಿ, ಯುನುಸ್ ಮುಲ್ಲಾ, ನಾರಾಯಣ ಸಾಳುಂಕೆ, ಮಂಜುನಾಥ್ ಕಲ್ಲೋಳಿ ಸೇರಿ ಹಲ ರೈತರು ಭಾಗವಹಿಸಿದ್ದರು.-----
ಕೋಟ್‌ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಕಿತ್ತು ಹೋಗಿ ೨ ಟಿಎಂಸಿ ನೀರು ಪೋಲಾಗಿದೆ. ಈಗ ೪ ಟಿಎಂಸಿ ನೀರು ಮಾತ್ರ ಲಭ್ಯವಿದೆ. ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಗೇಟ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮುಂದೆ ನೀರಿನ ಕೊರತೆಯಾಗದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಹಣ ಪಾವತಿಸಿ ೨ ಟಿಎಂಸಿ ನೀರು ಬಿಡಿಸಿಕೊಳ್ಳಲು ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿದ್ದೇನೆ. ರೈತರು ವಾರದಲ್ಲಿ ಒಂದು ದಿನ ಪಂಪ್‌ಸೆಟ್ ಬಂದ್ ಮಾಡಿ ಸಹಕರಿಸಿದರೆ, ನೀರಿನ ಬಳಕೆಗೆ ಅನುಕೂಲಕವಾಗಲಿದೆ.- ಲಕ್ಷ್ಮಣ ಸವದಿ, ಶಾಸಕರು