ಸಾರಾಂಶ
ಪ್ರತಿ ತಿಂಗಳು ಮಾಸಿಕ ಸಂತೆ ಆಯೋಜನೆಯಿಂದ ಸ್ವಸಹಾಯ ಸಂಘದ ಮಹಿಳೆಯರಿಗೆ ಅನುಕೂಲವಾಗಿದೆ.
ಸಂಜೀವಿನಿ ಮಾಸಿಕ ಸಂತೆ, ದೀಪ ಸಂಜೀವಿನಿ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕನಕಗಿರಿ
ಪ್ರತಿ ತಿಂಗಳು ಮಾಸಿಕ ಸಂತೆ ಆಯೋಜನೆಯಿಂದ ಸ್ವಸಹಾಯ ಸಂಘದ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಹೇಳಿದರು.ಪಟ್ಟಣದ ವಾರದ ಸಂತೆಯ ಮೈದಾನದಲ್ಲಿ ತಾಪಂ ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯಡಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಹಾಗೂ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಮಾಸಿಕ ಸಂತೆ ಆಯೋಜನೆಯಿಂದ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ವೇದಿಕೆ ಕಲ್ಪಿಸುವ ಜೊತೆಗೆ ಆದಾಯವನ್ನು ಹೆಚ್ಚಿಸಿದಂತಾಗಿದೆ ಎಂದರು.
ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಸಂಜೀವಿನಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಬೆಳಕಿನ ಹಬ್ಬವೇ ದೀಪಾವಳಿ, ಸ್ವ ಸಹಾಯ ಸಂಘಗಳ ಮಹಿಳೆಯರು ತಮ್ಮ ಕೈ ಚಳಕ, ಪರಿಶ್ರಮ ಹಾಗೂ ಸೃಜನಶೀಲತೆಯಿಂದ ವಿವಿಧ ಆಕರ್ಷಕ ದೀಪ ತಯಾರಿಸಿದ್ದಾರೆ. ಅವರಿಗೆ ಮಾರುಕಟ್ಟೆ ಒದಗಿಸುವುದು, ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ಅವರ ಸ್ವಾವಲಂಬಿ ನಡೆಗಳನ್ನು ಪ್ರೇರೇಪಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ಸದರಿ ಮಾಸಿಕ ಸಂತೆಯಲ್ಲಿ ಮಹಿಳೆಯರೇ ತಯಾರಿಸಿದ ವಿವಿಧ ಉತ್ಪನ್ನಗಳಾದ ಸಿಹಿ ತಿನಿಸುಗಳು, ಬಟ್ಟೆ ವ್ಯಾಪಾರ, ಬಳೆ ವ್ಯಾಪಾರ, ತೊಗರಿ ಬೆಳೆ ವ್ಯಾಪಾರ, ಖಾರದ ಪುಡಿ ವ್ಯಾಪಾರ, ಕಸೂತಿ ಸೇರಿದಂತೆ ಕರಕುಶಲ ವಸ್ತುಗಳು ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಆಕರ್ಷಕ ದೀಪಗಳು ಲಭ್ಯವಿದ್ದವು.
ಈ ಸಂದರ್ಭದಲ್ಲಿ ತಾಲೂಕು ಎನ್.ಆರ್.ಎಲ್.ಎಂ ಸಂಯೋಜಕಿ ರೇಣುಕಾ, ಪಿಡಿಒ ಈರಪ್ಪ, ಜೆಇ ಕೊಟ್ರೇಶ್, ಕಂಪ್ಯೂಟರ್ ಆಪರೇಟರ್ ಹುಲಿಗೇಶ್ ಸೇರಿದಂತೆ ಬಿಆರ್‌ಪಿಇಪಿ, ಸ್ವಸಹಾಯ ಸಂಘದ ಮಹಿಳೆಯರು, ಎಂಬಿಕೆ, ಎಲ್.ಸಿ.ಆರ್.ಪಿ, ಕೃಷಿ-ಪಶು ಸಖಿಯರು ಹಾಜರಿದ್ದರು.