ಸಿಲಿಕಾನ್‌ ಸಿಟಿ ಟ್ರಾಫಿಕ್ ಜಾಂ : ವಿಶ್ವ ಮಟ್ಟದಲ್ಲೂ ಬೆಂಗಳೂರು ನಂ.3! - ಟಾಮ್ ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌

| Published : Jan 13 2025, 12:50 AM IST / Updated: Jan 13 2025, 07:26 AM IST

ಸಿಲಿಕಾನ್‌ ಸಿಟಿ ಟ್ರಾಫಿಕ್ ಜಾಂ : ವಿಶ್ವ ಮಟ್ಟದಲ್ಲೂ ಬೆಂಗಳೂರು ನಂ.3! - ಟಾಮ್ ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದೇಶದಲ್ಲಿ ಮಾತ್ರವಲ್ಲ, ಇದೀಗ ವಿಶ್ವಮಟ್ಟದಲ್ಲೂ ಸುದ್ದಿಯಾಗುತ್ತಿದೆ. ವಾಹನ ದಟ್ಟಣೆಗೆ ಹೆಸರುವಾಸಿಯಾದ ಬೆಂಗಳೂರು ನಿಧಾನಗತಿಯ ಟ್ರಾಫಿಕ್‌ಗಾಗಿ ವಿಶ್ವದಲ್ಲೇ 3ನೇ ಸ್ಥಾನ ಪಡೆದಿದೆ.

 ನವದೆಹಲಿ: ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದೇಶದಲ್ಲಿ ಮಾತ್ರವಲ್ಲ, ಇದೀಗ ವಿಶ್ವಮಟ್ಟದಲ್ಲೂ ಸುದ್ದಿಯಾಗುತ್ತಿದೆ. ವಾಹನ ದಟ್ಟಣೆಗೆ ಹೆಸರುವಾಸಿಯಾದ ಬೆಂಗಳೂರು ನಿಧಾನಗತಿಯ ಟ್ರಾಫಿಕ್‌ಗಾಗಿ ವಿಶ್ವದಲ್ಲೇ 3ನೇ ಸ್ಥಾನ ಪಡೆದಿದೆ.

ನೆದರ್‌ಲೆಂಡ್‌ನ ಲೊಕೇಷನ್‌ ಟೆಕ್ನಾಲಜಿ ಸಂಸ್ಥೆ ‘ಟಾಮ್‌ ಟಾಮ್‌’ ಬಿಡುಗಡೆ ಮಾಡಿರುವ ವಿಶ್ವದ ಪ್ರಮುಖ ನಗರಗಳ ಸಂಚಾರ ದಟ್ಟಣೆ ಕುರಿತ ವರದಿಯಲ್ಲಿ ಭಾರತದ ಮೂರು ನಗರಗಳು ವಿಶ್ವದ ಟಾಪ್‌ 5 ನಿಧಾನಗತಿಯ ಟ್ರಾಫಿಕ್‌ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸ್ಥಾನಪಡೆದಿವೆ. ಅದರಲ್ಲಿ ಕೋಲ್ಕತಾ, ಬೆಂಗಳೂರು, ಪುಣೆ ಕ್ರಮವಾಗಿ 2ರಿಂದ 4ನೇ ಸ್ಥಾನ ಪಡೆದುಕೊಂಡಿವೆ. ಮೊದಲ ಸ್ಥಾನದಲ್ಲಿ ಕೊಲಂಬಿಯಾದ ಬಾರಂಕ್ವಿಲಾ ನಗರವಿದೆ.

ಟ್ರಾಫಿಕ್‌ ಇಂಡೆಕ್ಸ್‌ ಹೇಳಿದ್ದೇನು?: ಟಾಟ್‌ ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌ ಪ್ರಕಾರ 2024ರಲ್ಲಿ ಬೆಂಗಳೂರು ನಗರದಲ್ಲಿ 10 ಕಿ.ಮೀ. ಕ್ರಮಿಸಲು ಸರಾಸರಿ 30.10 ನಿಮಿಷ ಬೇಕಿತ್ತು.. 2023ಕ್ಕೆ ಹೋಲಿಸಿದರೆ ಸಂಚಾರಿಸಲು ಬೇಕಾಗುವ ಸಮಯ 50 ಸೆಕೆಂಡ್‌ನಷ್ಟು ಹೆಚ್ಚಾಗಿದೆ. ಕೋಲ್ಕತಾದಲ್ಲಿ 10 ಕಿ.ಮೀ. ಕ್ರಮಿಸಲು 34.33 ನಿಮಿಷ ಬೇಕು. ಪುಣೆ, ನಿಧಾನಗತಿಯ ಟ್ರಾಫಿಕ್‌ ಹೊಂದಿರುವ ನಗರಗಳ ಪಟ್ಟಿಗೆ ಇದೇ ಮೊದಲ ಬಾರಿ ಸೇರ್ಪಡೆಯಾಗಿದ್ದು, ನಾಲ್ಕನೆಯ ಸ್ಥಾನ ಪಡೆದುಕೊಂಡಿದೆ.

ಇನ್ನು ಭಾರತದ ಇತರೆ ನಗರಗಳಾದ ಹೈದರಾಬಾದ್‌ 18, ಚೆನ್ನೈ 31 ಮತ್ತು ಮುಂಬೈ 39ನೇ ಸ್ಥಾನದಲ್ಲಿದೆ.

ವರ್ಷ ವರ್ಷ ಐಟಿ ಸಿಟಿ ಟ್ರಾಫಿಕ್‌ ಸ್ಥಿತಿ ಗಂಭೀರ

2022ರಲ್ಲಿ ಬೆಂಗಳೂರು ನಗರದಲ್ಲಿ 10 ಕಿ.ಮೀ. ಕ್ರಮಿಸಬೇಕಿದ್ದರೆ ಸರಾಸರಿ 29 ನಿಮಿಷ 9 ಸೆಕೆಂಡ್‌, 2023ರಲ್ಲಿ 28 ನಿಮಿಷ 10 ಸೆಕೆಂಡ್‌, 2024ರಲ್ಲಿ 30 ನಿಮಿಷ 10 ಸೆಕೆಂಡ್‌ ಬೇಕಾಗಿತ್ತು. ಅತಿ ಹೆಚ್ಚು ಖಾಸಗಿ ಕಾರು ಹೊಂದಿರುವ ನಗರಗಳ ಪೈಕಿ ಬೆಂಗಳೂರು ಕೆಲ ವರ್ಷಗಳ ಹಿಂದೆಯೇ ದೆಹಲಿ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದಿದೆ. ನಗರದಲ್ಲಿ 25 ಲಕ್ಷಕ್ಕೂ ಹೆಚ್ಚು ಖಾಸಗಿ ಕಾರುಗಳಿವೆ. ನಿತ್ಯವೂ 2000 ವಾಹನಗಳು ರಸ್ತೆಗೆ ಇಳಿಯುತ್ತಿವೆ ಎಂದು ನಗರದಲ್ಲಿನ ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿರುವ ಬಗ್ಗೆ ವರದಿ ಒತ್ತಿ ಹೇಳಿದೆ.

ವಿಶ್ವದ ಟಾಪ್‌ 5 ನಗರಗಳು

ರ್‍ಯಾಂಕ್‌ ನಗರ ಟೈಂ

1ಬಾರಂಕ್ವಿಲಾ 36.6

2 ಕೋಲ್ಕತಾ 34.33

3 ಬೆಂಗಳೂರು34.10

4 ಪುಣೆ33.22

5 ಲಂಡನ್‌33.17