ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ ನಂತರ ಹೊರಟ ವಂದೇ ಭಾರತ್ ರೈಲು ದಾವಣಗೆರೆ ರೈಲು ನಿಲ್ದಾಣಕ್ಕೆ ಮಧ್ಯಾಹ್ನ ಆಗಮಿಸಿದ ವೇಳೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ಇತರರು ಸಂಭ್ರಮದಿಂದ ಸ್ವಾಗತಿಸಿ, ನಂತರ ಇಲ್ಲಿಂದ ಮುಂದೆ ಸಾಗಲು ಹಸಿರು ನಿಶಾನೆ ತೋರುವ ಮೂಲಕ ರೈಲನ್ನು ಬೀಳ್ಕೊಟ್ಟರು.ಬೆಂಗಳೂರು-ದಾವಣಗೆರೆ-ಬೆಳಗಾವಿ ಮಧ್ಯೆ ಸಂಚರಿಸುವ ಸ್ವದೇಶಿ ನಿರ್ಮಿತ, ಸೆಮಿ, ಹೈಸ್ಪೀಡ್, ಸ್ವಯಂ ಚಾಲಿತ ನೂತನ ವಂದೇ ಭಾರತ್ ರೈಲು ಆಗಮಿಸುತ್ತಿದ್ದಂತೆ ಪ್ರಯಾಣಿಕರು ಸಂಭ್ರಮದಿಂದ ರೈಲನ್ನು ಸ್ವಾಗತಿಸಿದರೆ, ಬಿಜೆಪಿ ಮುಖಂಡರು, ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ಸಂಭ್ರಮಿಸಿದರು.
ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ವಂದೇ ಭಾರತ್ ರೈಲಿಗೆ ಬಹು ದಿನಗಳಿಂದ ಬೇಡಿಕೆ ಇತ್ತು. ಅದು ಈಗ ಈಡೇರಿದ್ದು, ಯಾವುದೇ ಹೊಸ ಯೋಜನೆಗಳು ಬಂದರೂ ಅವು ಕೇಂದ್ರ-ರಾಜ್ಯ ಸರ್ಕಾರಗಳ ಜಂಟಿ ಅನುದಾನದಲ್ಲೇ ಚಾಲನೆಗೊಳ್ಳುತ್ತವೆ. ನೂತನ ವಂದೇ ಭಾರತ್ ರೈಲು ಬೆಂಗಳೂರಿಗೆ ಬೆಳಿಗ್ಗೆ 9.30ಕ್ಕೆ ಇಲ್ಲಿಂದ ಹೊರಡುವವರಿಗೆ ಅನುಕೂಲಕರವಾಗಿದೆ ಎಂದರು.ಪ್ರತಿ ಗಂಟೆಗೆ 160 ಕಿಮೀ ವೇಗದಲ್ಲಿ ಸಾಗುವ ವಂದೇ ಭಾರತ್ ನಲ್ಲಿ ಪ್ರಯಾಣಿಸುವುದರಿಂದ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬೇಗ ತಲುಪಲು, ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ, ಉದ್ಯೋಗಿಗಳು, ಮಹಿಳೆಯರು, ವಯೋವೃದ್ಧರು, ವಿಕಲಚೇತನರಿಗೆ ಆರಾಮದಾಯಕ, ತ್ವರಿತ ಪ್ರಯಾಣಕ್ಕೆ ಸಹಕಾರಿಯಾಗಲಿದೆ. ವ್ಯಾಪಾರ ವಹಿವಾಟು ವೃದ್ಧಿಗೂ ಇದು ಸಹಕಾರಿಯಾಗಲಿದೆ ಎಂದರು.
ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಮೇಕ್ ಇನ್ ಇಂಡಿಯಾ ಯೋಜನೆಯಡಿ 2019ರಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಯಿತು. ಈಗಾಗಲೇ 144 ರೈಲುಗಳನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ನೀಡಿದ್ದಾರೆ. ಇದು ರಾಜ್ಯಕ್ಕೆ ನೀಡಿದ 11ನೇ ರೈಲು. ಇನ್ನೂ ಹೆಚ್ಚು ರೈಲುಗಳನ್ನು ಕರ್ನಾಟಕಕ್ಕೆ ನೀಡಲು ಸಿದ್ಥತೆಗಳೂ ನಡೆದಿವೆ ಎಂದರು.ಹರಿಹರ ಶಾಸಕ ಬಿ.ಪಿ.ಹರೀಶ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಮೈಸೂರು ರೈಲ್ವೇ ವಿಭಾಗದ ವಿಭಾಗೀಯ ವ್ಯವಸ್ಥಾಪಕ ಶಾಮೀದ್ ಹಮೀದ್, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವ
ಕುಮಾರ, ಚಂದ್ರಶೇಖರ ಪೂಜಾರ, ಲೋಕಿಕೆರೆ ನಾಗರಾಜ, ಶಿವನಗೌಡ ಪಾಟೀಲ, ಗೌತಮ್ ಜೈನ್, ಟಿಂಕರ್ ಮಂಜಣ್ಣ ಇತರರು ಇದ್ದರು.ರೈಲಿನ ವೇಳಾಪಟ್ಟಿ
ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 2.20 ಕ್ಕೆ ಹೊರಟು ಸಂಜೆ 5.48ಕ್ಕೆ ದಾವಣಗೆರೆಗೆ ತಲುಪಿ ಇಲ್ಲಿಂದ ಹೊರಟು ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ. ಮಾರನೆಯ ದಿನದ ಬೆಳಗಾವಿಯಿಂದ ಬೆಳಗ್ಗೆ 5.20 ಕ್ಕೆ ಹೊರಟು ದಾವಣಗೆರೆಗೆ ಬೆಳಿಗ್ಗೆ 9.25 ಕ್ಕೆ ತಲುಪಿ ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಲುಪಲಿದೆ.