ಬೆಂಗಳೂರಿನಲ್ಲಿ ಸಂಚಾರ ಪೊಲೀಸರ ಸಮಯ ಪ್ರಜ್ಞೆ: ಬಿಎಂಟಿಸಿ ಚಾಲಕ ಸೇರಿ 40 ಜನರ ಪ್ರಾಣ ರಕ್ಷಣೆ

| Published : Sep 21 2024, 02:07 AM IST / Updated: Sep 21 2024, 10:16 AM IST

ಬೆಂಗಳೂರಿನಲ್ಲಿ ಸಂಚಾರ ಪೊಲೀಸರ ಸಮಯ ಪ್ರಜ್ಞೆ: ಬಿಎಂಟಿಸಿ ಚಾಲಕ ಸೇರಿ 40 ಜನರ ಪ್ರಾಣ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಕರ್ತವ್ಯ ನಿರತ ಸಂಚಾರ ಪೊಲೀಸರ ಸಮಯಪ್ರಜ್ಞೆಯಿಂದ ಬಿಎಂಟಿಸಿ ಬಸ್ ಚಾಲಕರೊಬ್ಬರ ಜೀವವನ್ನು ಸಕಾಲದಲ್ಲಿ ರಕ್ಷಿಸಲಾಗಿದೆ. ಚಾಲಕನಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 40 ಪ್ರಯಾಣಿಕರೂ ಸಹ ಅಪಾಯದಿಂದ ಪಾರಾಗಿದ್ದಾರೆ.

 ಬೆಂಗಳೂರು :  ಇಬ್ಬರು ಕರ್ತವ್ಯ ನಿರತ ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕ ಸೇರಿ ಬಸ್ಸಿನೊಳಗಿದ್ದ 40 ಪ್ರಯಾಣಿಕರ ಪ್ರಾಣ ಉಳಿದಿದೆ.

ಹಲಸೂರು ಗೇಟ್ ಸಂಚಾರ ಠಾಣೆಯ ಎಎಸ್‌ಐ ರಘುಕುಮಾರ್‌ ಮತ್ತು ಅಶೋಕನಗರ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಪ್ರಸನ್ನ ಕುಮಾರ್‌ ಅವರ ಸಮಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಏನಿದು ಘಟನೆ?:

ಬುಧವಾರ ಮಧ್ಯಾಹ್ನ ಸುಮಾರು 3.45ಕ್ಕೆ ಸಂಚಾರ ಎಎಸ್‌ಐ ರಘು ಕುಮಾರ್ ಶಾಂತಿನಗರ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಶಾಂತಿನಗರ ಬಸ್‌ ನಿಲ್ದಾಣದ ಕಡೆಗೆ ಜೋಡಿ ರಸ್ತೆ ಕಡೆಗೆ ಕೆ.ಎ.51 ಎಜೆ 6905 ನೋಂದಣಿ ಸಂಖ್ಯೆಯ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಬಂದಿದೆ. ಈ ವೇಳೆ ಬಸ್‌ನ ಚಾಲಕ ವೀರೇಶ್‌ಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿ ಒಂದು ಕಡೆಗೆ ವಾಲಿಕೊಂಡಿದ್ದಾರೆ.

ಸಕಾಲಕ್ಕೆ ಆಸ್ಪತ್ರೆಗೆ:

ಇದನ್ನು ಗಮನಿಸಿದ ಕರ್ತವ್ಯನಿರತ ಎಎಸ್‌ಐ ರಘು ತಕ್ಷಣ ನೆರವಿಗೆ ಧಾವಿಸಿದ್ದು, ಬಸ್‌ ಏರಿ ಹ್ಯಾಂಡ್‌ ಬ್ರೇಕ್‌ ಹಾಕಿ ಬಸ್‌ ನಿಲ್ಲಿಸಿದ್ದಾರೆ. ಬಳಿಕ ನಿರ್ವಾಹಕನ ಸಹಾಯದಿಂದ ಚಾಲಕ ವೀರೇಶ್‌ ಅವರನ್ನು ಬಸ್‌ನಿಂದ ಕೆಳಗೆ ಇಳಿಸಿಕೊಂಡು ಆ್ಯಂಬುಲೆನ್ಸ್‌ಗಾಗಿ ಕಾಯದೆ ಮುಂದಿನ ಸಿಗ್ನಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್‌ ಕಾನ್‌ಸ್ಟೇಬಲ್‌ ಪ್ರಸನ್ನ ಕುಮಾರ್‌ ಅವರನ್ನು ಕರೆಸಿಕೊಂಡು ಆಟೋ ರಿಕ್ಷಾದಲ್ಲಿ ವೀರೇಶ್ ಅವರನ್ನು ಕೂರಿಸಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರಿಂದ ಬಿಎಂಟಿಸಿ ಬಸ್‌ ಚಾಲಕ ವೀರೇಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂಚಾರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಚಲಿಸುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರು ಇದ್ದರು. ಈ ವೇಳೆ ಚಾಲಕ ವೀರೇಶ್‌ಗೆ ಎದೆ ನೋವು ಕಾಣಿಸಿಕೊಂಡಿದೆ. ಎಎಸ್‌ಐ ರಘು ಅವರ ಸಮಯ ಪ್ರಜ್ಞೆಯಿಂದ ಬಸ್‌ನ ಚಾಲಕ ಹಾಗೂ ಬಸ್‌ನಲ್ಲಿದ್ದ ಸುಮಾರು 40 ಪ್ರಯಾಣಿಕರ ಪ್ರಾಣ ಉಳಿದಿದೆ. ಈ ಇಬ್ಬರು ಸಂಚಾರ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ನಾಗರಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಆಗಿದ್ದು ಏನು?

*ಶಾಂತಿನಗರ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ರಘು

*ಜೋಡಿ ರಸ್ತೆ ಕಡೆಗೆ ಬಂದ ಬಿಎಂಟಿಸಿ ಬಸ್‌ ಚಾಲಕನಿಗೆ ಎದೆನೋವು

*ಇದನ್ನು ಗಮನಿಸಿ ತಕ್ಷಣ ಬಸ್‌ ಏರಿ ಹ್ಯಾಂಡ್‌ ಬ್ರೇಕ್‌ ಹಾಕಿದ ರಘು

*ಸಿಗ್ನಲ್‌ನಲ್ಲಿದ್ದ ಮುಖ್ಯ ಪೇದೆನ ಕರೆಸಿ ಚಾಲಕ ಜತೆ ಕಳಿಸಿದ ಎಎಸ್‌ಐ