ಸಾರಾಂಶ
ರಾಜು ಕಾಂಬಳೆ
ಬೆಂಗಳೂರು : ಕೆ.ಆರ್.ಮಾರುಕಟ್ಟೆ, ರಾಜಭವನ ರಸ್ತೆ ಮತ್ತು ಅರಮನೆ ರಸ್ತೆಯಲ್ಲಿರುವ ಪಾದಚಾರಿ ಸುರಂಗ ಮಾರ್ಗಗಳು(ಸಬ್‌ವೇ) ಅವ್ಯವಸ್ಥೆಯಿಂದ ಕೂಡಿದ್ದು ಕೇಳುವವರೇ ಇಲ್ಲದಂತಾಗಿದೆ.ಸದಾ ತೀವ್ರ ವಾಹನಗಳ ಸಂಚಾರವಿರುವ ಈ ರಸ್ತೆಗಳಲ್ಲಿ ಪಾದಚಾರಿಗಳು ರಸ್ತೆ ದಾಟುವುದನ್ನು ತಡೆಯಲು ಕೋಟ್ಯಂತರ ರು.ಗಳಲ್ಲಿ ನಿರ್ಮಿಸಿರುವ ಪಾದಚಾರಿ ಸುರಂಗ ಮಾರ್ಗಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಕೆಲವು ಸಬ್‌ವೇಗಳಲ್ಲಿ ಮಳೆ ಬಂದರೆ ನೀರು ಹರಿದು ಬರುತ್ತದೆ. ಇಂತಹ ಸ್ಥಿತಿಯ ನಡುವೆ ಜನರು ಅನಿವಾರ್ಯವಾಗಿ ಓಡಾಡತೊಡಗಿದ್ದಾರೆ.
ಚಾಲನೆಯಿಲ್ಲದ ಎಸ್ಕಲೇಟರ್:
ದಿನವಿಡೀ ಸಾವಿರಾರು ವ್ಯಾಪಾರಿಗಳು, ಲಕ್ಷಾಂತರ ಗ್ರಾಹಕರು, ಪ್ರಯಾಣಿಕರಿಂದ ತುಂಬಿ ತುಳುಕುವ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ನಿತ್ಯವೂ ಸಾವಿರಾರು ಬಸ್‌ಗಳು, ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಆದ್ದರಿಂದ ಪಾದಾಚಾರಿಗಳಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಸುರಂಗ ಮಾರ್ಗದ ಎಸ್ಕಲೇಟರ್ ಕೆಟ್ಟು ಮೂರು ತಿಂಗಳು ಕಳೆದಿದೆ. ಆದರೆ, ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಇತ್ತ ಗಮನ ಹರಿಸಿಲ್ಲ. ಹೀಗಾಗಿ ಮಾರುಕಟ್ಟೆ, ಬಸ್ ನಿಲ್ದಾಣ, ವಿಕ್ಟೋರಿಯಾ ಆಸ್ಪತ್ರೆಗೆ ಬರುವ ರೋಗಿಗಳು ಪ್ರತಿದಿನವೂ ಯಾತನೆ ಅನುಭವಿಸುವಂತಾಗಿದೆ.
ಪಾಲಿಕೆ ಸುಮಾರು 18 ಕೋಟಿ ರು. ವೆಚ್ಚದಲ್ಲಿ ಕೆ.ಆರ್. ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಪಾದಾಚಾರಿ ಸುರಂಗ ಮಾರ್ಗವು ಆರು ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಹೊಂದಿದೆ. ಅವುಗಳಲ್ಲಿ ಇಂದಿರಾ ಕ್ಯಾಂಟೀನ್ ಕಡೆಯಿಂದ ಸಾಗುವಾಗ ಸಿಗುವ ದ್ವಾರದಲ್ಲಿ ಅಳವಡಿಸಿರುವ ಎಸ್ಕಲೇಟರ್ ಕಳೆದ ಮೂರು ತಿಂಗಳಿನಿಂದ ಕೆಟ್ಟು ನಿಂತಿದ್ದರೂ ಸರಿಪಡಿಸುವ ಗೋಜಿಗೆ ಬಿಬಿಎಂಪಿ ಹೋಗಿಲ್ಲ.
ವಿಕ್ಟೋರಿಯಾ, ವಾಣಿವಿಲಾಸ್ ಆಸ್ಪತ್ರೆಗಳಿಗೆ ಬರುವ ರೋಗಿಗಳು, ನಗರದ ವಿವಿಧೆಡೆ ತೆರಳಲು ಬಸ್‌ಗಳಿಗಾಗಿ ಬರುವ ವೃದ್ಧ ಪ್ರಯಾಣಿಕರು, ರೈತರು, ಗ್ರಾಹಕರು ನಿತ್ಯವೂ ಸಂಚಾರಿ ದಟ್ಟಣೆಯಿಂದ ತುಂಬಿರುವ ರಸ್ತೆ ದಾಟಿ ಹೋಗಬೇಕಾದ ಪರಿಸ್ಥಿತಿ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸಿ ಪ್ರಾಣ ಹಾನಿಯಾಗುವ ಸಾಧ್ಯತೆಯೂ ಹೆಚ್ಚಿದ್ದರೂ, ಸಬ್‌ವೇ ಎಸ್ಕಲೇಟರ್ ಸರಿಪಡಿಸುವಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ತೋರುತ್ತಿದೆ. ಇಷ್ಟೇ ಅಲ್ಲ, ಸಬ್‌ವೇ ಪ್ರವೇಶ ದ್ವಾರದಲ್ಲಿಯೇ ಮಳೆ ನೀರಿನಿಂದ ಸಂಗ್ರಹವಾಗಿರುವ ಕಸದ ರಾಶಿ ತೆರವುಗೊಳಿಸದ ಕಾರಣ ಸುತ್ತಮುತ್ತ ದುರ್ವಾಸನೆ ಬರುತ್ತಿದೆ. ಹೀಗಾಗಿ, ಸಾರ್ವಜನಿಕರು ಪಾದಾಚಾರಿ ಸುರಂಗ ಮಾರ್ಗದ ಕಡೆ ಬರುವುದನ್ನೇ ಬಿಟ್ಟಿದ್ದಾರೆ.
ಸೋರುತಿಹದು ಅರಮನೆ ರಸ್ತೆ ಸಬ್‌ವೇ:
ಬಸವೇಶ್ವರ ವೃತ್ತದ ಬಳಿಯ ಅರಮನೆ ರಸ್ತೆಯಲ್ಲಿರುವ ಪಾದಚಾರಿ ಸುರಂಗ ಮಾರ್ಗ ಮೇಲ್ಛಾವಣಿ ಶಿಥಿಲಗೊಂಡಿದ್ದು, ಮಳೆಗೆ ಸೋರುತ್ತದೆ. ಇದು ಜವಾಹರ್ ಲಾಲ್ ನೆಹರು ತಾರಾಲಯ, ರಾಜಭವನ ಹಾಗೂ ಆರ್.ಸಿ. ಕಾಲೇಜು ಸಮೀಪದಲ್ಲಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಾರೆ. ಮಳೆ ಬಂದಾಗೆಲ್ಲ ಕೆರೆಯಂತಾಗುತ್ತದೆ. ಇದರಿಂದ ಯಾರು ಈ ರಸ್ತೆಯಲ್ಲಿ ಸಂಚರಿಸದೇ ನೇರವಾಗಿ ವಾಹನ ದಟ್ಟಣೆ ಇರುವ ಜಾಗದಲ್ಲಿ ರಸ್ತೆ ದಾಟಬೇಕಾದ ಪರಿಸ್ಥಿತಿ ಇದೆ.
ತೆರೆಯದ ಸಬ್‌ವೇ ಗೇಟ್:
ವಿಧಾನಸೌಧದ ಕೂಗಳತೆ ದೂರದಲ್ಲಿರುವ ರಾಜಭವನ ರಸ್ತೆಯಲ್ಲಿರುವ ಸಬ್ ವೇ ಒಂದು ಬದಿಯ ಗೇಟ್ ಸದಾ ಮುಚ್ಚಿರುತ್ತದೆ. ಹೀಗಾಗಿ ತೆರೆದ ಮತ್ತೊಂದು ಬದಿಯ ಗೇಟ್ ಮೂಲಕ ಒಳಗೆ ಪ್ರವೇಶಿಸುವ ಪಾದಾಚಾರಿಗಳು ಇನ್ನೊಂದೆಡೆ ಮುಚ್ಚಿರುವ ಗೇಟ್‌ನೋಡಿ ಗೊಂದಲಕ್ಕೀಡಾಗುತ್ತಿದ್ದಾರೆ. ಯಾವಾಗಲೋ ಮಳೆ ನೀರು ಹೊರಹಾಕಲು ಮೋಟರ್ ಅಳವಡಿಸಿದ್ದ ವಿದ್ಯುತ್ ತಂತಿ ಮೆಟ್ಟಿಲುಗಳಲ್ಲಿ ಹಾಗೇ ಬಿಡಲಾಗಿದೆ. ಇದರಿಂದ ಭೀತರಾಗುತ್ತಿರುವ ಪಾದಾಚಾರಿಗಳು ಸಬ್ ವೇ ಸಹವಾಸವೇ ಬೇಡ ಎಂದು ಪರ್ಯಾಯ ಮಾರ್ಗ ಹುಡುಕಿಕೊಳ್ಳುತ್ತಿದ್ದಾರೆ.