ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಭಗವದ್ಗೀತೆಯ ಹದಿನೈದನೇಯ ಅಧ್ಯಾಯವಾದ ಪುರುಷೋತ್ತಮ ಯೋಗವು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗಗಳನ್ನು ಹೇಳುತ್ತದೆ. ಇದು ಸಕಲ ಶಾಸ್ತ್ರಗಳ ಸಾರವಾಗಿದ್ದು ಭಕ್ತಿಮಾರ್ಗಕ್ಕೆ ಪ್ರೇರಕವಾಗಿದೆ ಎಂದು ಪಂ.ಪ್ರಮೋದಾಚಾರ್ಯ ಪೂಜಾರ ಹೇಳಿದರು.ಇಳಕಲ್ಲಿನ ವೆಂಕಟೇಶ ದೇವಸ್ಥಾನದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಎಂಟನೆಯ ಸಂಚಿಕೆಗೆ ಅವರು ಪ್ರವಚನಕಾರರಾಗಿ ಮಾತನಾಡಿದರು. ಇಳಕಲ್ಲ ಬ್ರಾಹ್ಮಣ ಸಮಾಜ, ಉತ್ತರಾದಿ ಮಠದ ಧರ್ಮಜ್ಞಾನವಾಹಿನಿ ಹಾಗೂ ಬಾಗಲಕೋಟೆಯ ವಿಶ್ವಮಾಧ್ವ ಪರಿಷದ್ ಸಂಸ್ಥೆಗಳು ಸಂಯುಕ್ತವಾಗಿ ಏರ್ಪಡಿಸಿದ್ದವು. ನೇತೃತ್ವವನ್ನು ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪಾಂಡುರಂಗ ಕುಲಕರ್ಣಿ ವಹಿಸಿದ್ದರು. ಸೌರಭ ದಾಸಸಾಹಿತ್ಯ ವಿದ್ಯಾಲಯದ ಅಧ್ಯಕ್ಷರಾದ ಪಂ. ಪ್ರಮೋದಾಚಾರ್ಯರ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿ ಸಮೂಹವನ್ನು ಹೊಂದಿದ್ದಾರೆ. ನೂರಾರು ಕೇಂದ್ರಗಳಲ್ಲಿ ದಾಸಸಾಹಿತ್ಯದ ಅಧ್ಯಯನಕ್ಕಾಗಿ ಈ ಸಂಸ್ಥೆಯು ಪ್ರೋತ್ಸಾಹ ನೀಡುತ್ತಲಿದೆ. ಇಳಕಲ್ಲನಲ್ಲಿ ಈ ವಿದ್ಯಾಲಯದ ಕೇಂದ್ರ ಆರಂಭವಾಗಿದ್ದು , ಲಕ್ಷ್ಮೀ ಮಹಿಳಾ ಮಂಡಳದ ಅಧ್ಯಕ್ಷೆ ಸಾವಿತ್ರಿ ಕುಲಕರ್ಣಿ ಅವರು ಸೌರಭ ವಿದ್ಯಾಲಯಕ್ಕೆ ಹೊಸ ವಿದ್ಯಾರ್ಥಿಗಳ ವಿವರವನ್ನು ಗುರುಗಳಿಗೆ ಹಸ್ತಾಂತರಿಸಿದರು.ಶ್ರೀಹರಿ ಪೂಜಾರ, ಸುರೇಶ ಪೂಜಾರ, ವಿರುಪಾಕ್ಷ ಭಟ್ಟ ವೇದಪಾಠವನ್ನು ಹೇಳಿದರು. ಬಂಡು ಕಟ್ಟಿ ನಿರೂಪಿಸಿದರು. ಪದಾಧಿಕಾರಿಗಳಾದ ವಿಜಯ ಕಾರ್ಕಳ, ಕಾಶೀನಾಥ ದೇಶಪಾಂಡೆ, ಗಿರಿಧರ ದೇಸಾಯಿ ವ್ಯವಸ್ಥೆಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ನಾರಾಯಣಾಚಾರ್ಯ ಪೂಜಾರ, ವೆಂಕಟೇಶ ಪೂಜಾರ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು.ಅಭಿಯಾನದ ಎಂಟನೆಯ ಸಂಚಿಕೆಯ ಪ್ರಾಯೋಜಕತ್ವವನ್ನು ಡಾ.ಗುರುರಾಜ ಕಾಖಂಡಕಿ ವಹಿಸಿದ್ದರು. ಕೊನೆಯ ದಿನದ ಪ್ರಸಾದಸೇವೆಯನ್ನು ಸತ್ಯನಾರಾಯಣ ಕರವಾ ಅವರು ಕೈಗೊಂಡರು. ಲಕ್ಷ್ಮೀ ಮಹಿಳಾ ಮಂಡಳಿ ಹಾಗೂ ಬ್ರಾಹ್ಮಣ ಯುವಕ ಸಂಘಗಳು ವ್ಯವಸ್ಥೆಯನ್ನು ರೂಪಿಸಿದ್ದವು. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಸೇವೆಯೂ ನಡೆಯಿತು.