ಸಾರಾಂಶ
ಬೆಂಗಳೂರು : ನಗರದಾದ್ಯಂತ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿರುವುದರಿಂದ ಬೆಂಗಳೂರು ಗಾರ್ಡನ್ ಸಿಟಿ ಅಲ್ಲ, ಹೋರ್ಡಿಂಗ್ ಸಿಟಿ ಆಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಹೈಕೋರ್ಟ್ ಆದೇಶದ ಹೊರತು ನಗರದಲ್ಲಿ ರಾಜಕೀಯ ನಾಯಕರ ಫ್ಲೆಕ್ಸ್ ಮತ್ತು ಹೋರ್ಡಿಂಗ್ಸ್ ತೆರವಿಗೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎಸ್.ಮುದ್ಗಲ್ ಅವರ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಸುನೀಲ್ ಪ್ರಸಾದ್, ನಗರದ ಹಲವೆಡೆ ರಾಜಕಾರಣಿಗಳ ಫ್ಲೆಕ್ಸ್-ಹೋಲ್ಡಿಂಗ್‌ಗಳು ರಾರಾಜಿಸುತ್ತಿವೆ. ಅವುಗಳ ತೆರವಿಗೆ ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ನಗರದಲ್ಲಿ ಫ್ಲೆಕ್ಸ್ ಹಾವಳಿ ಮೀತಿ ಮೀರುತ್ತಿದೆ ಎಂದು ತಿಳಿಸಿ ನಗರದ ವಿವಿಧ ಪ್ರದೇಶದಲ್ಲಿ ಕಂಡು ಬಂದ ರಾಜಕಾರಣಿಗಳ ಫ್ಲೆಕ್ಸ್‌ಗಳಿರುವ ಪೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಬಿಬಿಎಂಪಿ ವಕೀಲರು ಉತ್ತರಿಸಿ, ಸಾರ್ವಜನಿಕ ಜಾಗಗಳಲ್ಲಿ ಯಾವುದೇ ರಾಜಕೀಯ ನಾಯಕರು ಫ್ಲೆಕ್ಸ್ ಅಥವಾ ಹೋರ್ಡಿಂಗ್ ಹಾಕಿದರೂ ಆ ಕುರಿತು ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ. ಅಂತಹ ನಾಯಕರ ವಿರುದ್ಧ ಎಫ್‌ಐಆರ್ ಸಹ ದಾಖಲಾಗುತ್ತಿದೆ. ಪಾಲಿಕೆಯು ಫ್ಲೆಕ್ಸ್ ಗಳನ್ನು ತೆಗೆಯುತ್ತಿದ್ದರೂ ಮತ್ತೆ ಮತ್ತೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ದೇವಸ್ಥಾನಗಳನ್ನು ಬಿಡದೆ ರಾಜಕೀಯ ನಾಯಕರ ಫ್ಲೆಕ್ಸ್ ಗಳನ್ನು ಹಾಕಲಾಗುತ್ತಿದೆ. ಅವುಗಳನ್ನು ಯಾವಾಗ ತೆರವುಗೊಳಿಸುತ್ತೀರಿ? ಮತ್ತು ಅಂತಹವರ ವಿರುದ್ಧ ಬಿಬಿಎಂಪಿ ಏನು ಕ್ರಮ ಕೈ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಜು.23ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಿರುವ ಯೋಜನೆಗಳಲ್ಲಿ ಶಾಸಕರು ಮತ್ತು ಸಚಿವರ ಹೆಸರು ಮತ್ತು ಛಾಯಾಚಿತ್ರ ತೆರವುಗೊಳಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು 2021ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹಾಕಲಾಗುವ ಜಾಹೀರಾತು/ಫ್ಲೆಕ್ಸ್‌ಗಳಲ್ಲಿ ರಾಜಕೀಯ ನಾಯಕರ ಫೋಟೋ/ಹೆಸರು ಹಾಕಬಾರದು ಎಂದು ಬಿಬಿಎಂಪಿಗೆ ಸೂಚಿಸಿತ್ತು. ಈ ಆದೇಶ ಪಾಲಿಸಲಾಗುತ್ತಿಲ್ಲ ಎಂದು ಆಕ್ಷೇಪಿಸಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.