ಸಾರಾಂಶ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಅಕಾಡೆಮಿಗಳ ಕಾರ್ಯ ಯೋಜನೆಗೆ ಅನುಕೂಲವಾಗುವಂತೆ ಪ್ರತಿಯೊಂದು ಅಕಾಡೆಮಿಗಳಿಗೆ ತಲಾ ಒಂದು ಕೋಟಿ ರು.ಅನುದಾನ ನೀಡಲು ಕ್ರಮಕೈಗೊಳ್ಳಲಾಗಿದೆ
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಅಕಾಡೆಮಿಗಳ ಕಾರ್ಯ ಯೋಜನೆಗೆ ಅನುಕೂಲವಾಗುವಂತೆ ಪ್ರತಿಯೊಂದು ಅಕಾಡೆಮಿಗಳಿಗೆ ತಲಾ ಒಂದು ಕೋಟಿ ರು.ಅನುದಾನ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಲಲಿತಕಲಾ ಅಕಾಡೆಮಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022 ಮತ್ತು 23ನೇ ಸಾಲಿನ ಗೌರವ ಪ್ರಶಸ್ತಿ, 2021 ಹಾಗೂ 22ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಹಿಂದಿನ ಸರ್ಕಾರ ಸುಮಾರು ಎರಡೂವರೆ ವರ್ಷಗಳ ಕಾಲ ಅಕಾಡೆಮಿ ಮತ್ತು ಪ್ರಾಧಿಕಾರಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿಲ್ಲ. ಜೊತೆಗೆ ಪ್ರಶಸ್ತಿಗಳನ್ನು ನೀಡಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಧಿಕಾರಕ್ಕೆ ಬಂದ ಕೂಡಲೇ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೇಮಿಸಿದ್ದು, ಬಾಕಿ ಉಳಿಸಿಕೊಂಡಿದ್ದ ಪ್ರಶಸ್ತಿಗಳನ್ನು ಸಂಪೂರ್ಣವಾಗಿ ನೀಡಲಾಗಿದೆ. ಜೊತೆಗೆ ಅಕಾಡೆಮಿ, ಪ್ರಾಧಿಕಾರಗಳ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಕ್ರಮಕೈಗೊಂಡಿದೆ ಎಂದರು.
ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಎಲ್ಲಾ ಕಲಾಪ್ರಕಾರಗಳಿಗೆ ಪ್ರತ್ಯೇಕವಾದ ಅಕಾಡೆಮಿಗಳು ಇವೆ. ಆದ್ದರಿಂದ ಚಿತ್ರಕಲೆಯ ಅನನ್ಯತೆಗೆ ಒಂದು ನಿರ್ದಿಷ್ಟವಾದ ಗುರುತು ಬೇಕಾದರೆ ಲಲಿತಕಲಾ ಅಕಾಡೆಮಿ ಹೆಸರನ್ನು ಬದಲಿಸಿ ಚಿತ್ರಕಲಾ ಅಕಾಡೆಮಿ ಎಂದು ನಾಮಕರಣ ಮಾಡಬೇಕು. ಸರ್ಕಾರ ಇದನ್ನು ಮಾಡಬೇಕು. ಈ ಕುರಿತು ಕಲಾವಿದರು, ತಜ್ಞರೊಂದಿಗೆ ಸಮಾಲೋಚಿಸುವ ಅಗತ್ಯ ಇದೆ. ಈ ಮೂಲಕ ಲಲಿತ ಕಲಾ ಅಕಾಡೆಮಿ ಎಂಬ ಹೆಸರನ್ನು ಬದಲಾಯಿಸುವ ಒಂದು ಪ್ರಕ್ರಿಯೆ ಆರಂಭವಾಗಬೇಕು ಎಂದು ಮನವಿ ಮಾಡಿದರು.
ಅನೇಕ ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಚಿತ್ರಕಲೆಗೆ ಸಂಬಂಧಿಸಿದ ಕಲಾಕೃತಿಗಳನ್ನು ತಮ್ಮ ಕಚೇರಿಗಳಲ್ಲಿ ಹಾಕಿಕೊಳ್ಳಬೇಕು ಎಂಬ ಆದೇಶ ಮಾಡಿತ್ತು. ಆ ಆದೇಶವನ್ನು ರಾಜ್ಯ ಸರ್ಕಾರವೂ ಅನುಸರಿಸಬೇಕು. ಕಚೇರಿಗಳಲ್ಲದೆ ಶಾಲಾ, ಕಾಲೇಜುಗಳಲ್ಲಿ ಮತ್ತು ಸರ್ಕಾರಕ್ಕೆ ಸಂಬಂಧಪಟ್ಟ ಕಚೇರಿಗಳಲ್ಲಿ ಕಲಾಕೃತಿಗಳನ್ನು ಹಾಕಿಕೊಳ್ಳಬೇಕು. ಇದರಿಂದ ಗೋಡೆಯ ಅಂದವೂ ಹೆಚ್ಚುತ್ತದೆ. ಕಲಾವಿದರಿಗೂ ನೆರವಾದಂತಾಗುತ್ತದೆ. ಜೊತೆಗೆ ರಾಜ್ಯದ ಪ್ರಮುಖ ನಗರದಲ್ಲಿ ಚಿತ್ರಗ್ಯಾಲರಿಗಳನ್ನು ತೆರೆದರೆ ಕಲಾವಿದರಿಗೆ, ಕಲಾ ಆಸಕ್ತರಿಗೆ ಪ್ರದರ್ಶನಕ್ಕೆ ಒಂದು ವೇದಿಕೆ ಸಿಕ್ಕಿದಂತಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್, ಇಲಾಖೆ ಕಾರ್ಯದರ್ಶಿ ಡಾ.ಎಂ.ವಿ.ವೆಂಕಟೇಶ್, ನಿರ್ದೇಶಕಿ ಕೆ.ಎಂ.ಗಾಯಿತ್ರಿ ಮತ್ತು ಅಕಾಡೆಮಿ ರಿಜಿಸ್ಟ್ರಾರ್ ನೀಲಮ್ಮ ಉಪಸ್ಥಿತರಿದ್ದರು.