ಸಾರಾಂಶ
ರಾಜ್ಯ ಸರ್ಕಾರ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳ ಅಭಿವೃದ್ಧಿಗೆ ಗ್ರಾಮೀಣ ಪ್ರದೇಶವಾರು 189 ವಿಧಾನಸಭೆ ಕ್ಷೇತ್ರಗಳಿಗೆ ತಲಾ 10 ಕೋಟಿ ರು.ನಂತೆ 1,890 ಕೋಟಿ ರು. ಬಿಡುಗಡೆ ಮಾಡಿದೆ.
ಬೆಂಗಳೂರು : ರಾಜ್ಯ ಸರ್ಕಾರ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳ ಅಭಿವೃದ್ಧಿಗೆ ಗ್ರಾಮೀಣ ಪ್ರದೇಶವಾರು 189 ವಿಧಾನಸಭೆ ಕ್ಷೇತ್ರಗಳಿಗೆ ತಲಾ 10 ಕೋಟಿ ರು.ನಂತೆ 1,890 ಕೋಟಿ ರು. ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿಗೆ ಕ್ಷೇತ್ರವಾರು ಕ್ರಿಯಾಯೋಜನೆ ಸಲ್ಲಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ.
ಶಾಸಕರು ಅನುದಾನ ಕೊರತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುನ್ನ 224 ಕ್ಷೇತ್ರಗಳಿಗೂ ತಲಾ 10 ಕೋಟಿ ರು.ನಂತೆ 2,240 ಕೋಟಿ ರು. ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಆದೇಶ ಮಾಡಿತ್ತು. ಈ ಕುರಿತ ಕಡತಕ್ಕೆ ಸಹಿ ಹಾಕಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು. ಈ ಪೈಕಿ ಗ್ರಾಮೀಣ ಪ್ರದೇಶಗಳಿರುವ 189 ಕ್ಷೇತ್ರಗಳಿಗೆ 1,890 ಕೋಟಿ ರು. ಬಿಡುಗಡೆಯಾಗಿದೆ. ಈ ಅನುದಾನ ಬಳಸಿಕೊಂಡು ಕ್ಷೇತ್ರವಾರು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸಂಬಂಧಿಸಿದ ಶಾಸಕರೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ.
ಮಳೆಯಿಂದ ಹಾನಿಗೀಡಾದ ರಸ್ತೆ ದುರಸ್ತಿ:
ಇನ್ನು ಕ್ರಿಯಾಯೋಜನೆ ಸಿದ್ಧಪಡಿಸುವ ವೇಳೆ ಇತ್ತೀಚೆಗೆ ಮಳೆಯಿಂದ ಹಾನಿಗೊಳಗಾದ ರಸ್ತೆ ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕು. ಈ ರಸ್ತೆಗಳು ಗ್ರಾಮೀಣಾಭಿವೃದ್ಧಿ ಇಲಾಖೆಯ ರಸ್ತೆ ಜಾಲದಲ್ಲಿರಬೇಕು. ರಸ್ತೆಗಳನ್ನು ಆಯ್ಕೆ ಮಾಡುವಾಗ ನ್ಯಾಯಾಲಯದಲ್ಲಿ ಪ್ರಕರಣ, ಲೋಕಾಯುಕ್ತ, ಉಭಯ ವಿಧಾನಮಂಡಲಗಳ ವಿವಿಧ ಸಮಿತಿ ಸೂಚನೆ ಇರುವ ರಸ್ತೆ ಮತ್ತು ಸೇತುವೆ ಕಾಮಗಾರಿಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಆಯ್ಕೆ ಮಾಡುವ ರಸ್ತೆಗಳನ್ನು ಡಾಂಬರು ಅಥವಾ ಸಿಸಿ ರಸ್ತೆಯನ್ನಾಗಿಯಷ್ಟೇ ಅಭಿವೃದ್ಧಿಪಡಿಸಬೇಕು ಎಂದು ಷರತ್ತುಗಳನ್ನು ವಿಧಿಸಲಾಗಿದೆ.
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!
ಶಾಸಕರಿಗೆ ಅನುದಾನ ಬಿಡುಗಡೆ ಕುರಿತು ‘ಕನ್ನಡಪ್ರಭ’ ಮಾತ್ರ ಜ.14ರಂದೇ ವರದಿ ಮಾಡಿತ್ತು.