ಮೊರಾರ್ಜಿ, ಚೆನ್ನಮ್ಮ ಸೇರಿ 61 ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ₹1293 ಕೋಟಿ ನೆರವು

| N/A | Published : Feb 21 2025, 11:21 AM IST

Dodda Jala Govt School

ಸಾರಾಂಶ

61 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 1,292.50 ಕೋಟಿ ರು. ವೆಚ್ಚದಲ್ಲಿ ಶಾಲಾ ಸಂಕೀರ್ಣ ನಿರ್ಮಿಸುವುದು, 63 ಡಾ.ಬಿ.ಆರ್‌.ಅಂಬೇಡ್ಕರ್‌ ವಿದ್ಯಾರ್ಥಿನಿಲಯಗಳಿಗೆ   ಸ್ವಂತ ಕಟ್ಟಡ ನಿರ್ಮಾಣ ಸೇರಿ ಹಲವು ಯೋಜನೆಗಳಿಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

 ಬೆಂಗಳೂರು : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌) ವ್ಯಾಪ್ತಿಯಲ್ಲಿನ 61 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 1,292.50 ಕೋಟಿ ರು. ವೆಚ್ಚದಲ್ಲಿ ಶಾಲಾ ಸಂಕೀರ್ಣ ನಿರ್ಮಿಸುವುದು, 63 ಡಾ.ಬಿ.ಆರ್‌.ಅಂಬೇಡ್ಕರ್‌ ವಿದ್ಯಾರ್ಥಿನಿಲಯಗಳಿಗೆ 441 ಕೋಟಿ ರು. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಸೇರಿ ಹಲವು ಯೋಜನೆಗಳಿಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಕ್ರೈಸ್‌ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಸದೃಢ ಶಾಲಾ ಸಂಕೀರ್ಣ ಹೊಂದುವಂತೆ ಮಾಡಲು ಸರ್ಕಾರ ಮುಂದಾಗಿದೆ. ಅದರಲ್ಲಿ ನಿವೇಶನ ಲಭ್ಯವಿರುವ 56 ವಸತಿ ಶಾಲೆಗಳಿಗೆ ಹಾಗೂ ಬಹುತೇಕ ಕಟ್ಟಡ ನಿರ್ಮಾಣವಾಗಿ ಸ್ಥಗಿತಗೊಂಡಿರುವ 5 ವಸತಿ ಶಾಲೆಗಳಿಗೆ ಹೊಸದಾಗಿ ಕಟ್ಟಡ ನಿರ್ಮಿಸಲಾಗುತ್ತದೆ. ಈ ಯೋಜನೆಗಾಗಿ 1,292.50 ಕೋಟಿ ರು. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. 2025-26 ಮತ್ತು 2026-27ನೇ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಗೆ ಒದಗಿಸಲಾಗುವ ಅನುದಾನವನ್ನು ಬಳಸಿಕೊಳ್ಳುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು.

ಅದರ ಜತೆಗೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 63 ಡಾ.ಬಿ.ಆರ್‌.ಅಂಬೇಡ್ಕರ್‌ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸುವುದು ಮತ್ತು ಅದಕ್ಕಾಗಿ 441 ಕೋಟಿ ರು. ವೆಚ್ಚ ಮಾಡಲೂ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಯಿತು. ಇದರಲ್ಲಿ 32 ಮೆಟ್ರಿಕ್‌ ಪೂರ್ವ ಮತ್ತು 31 ಮೆಟ್ರಿಕ್‌ ನಂತದ ವಿದ್ಯಾರ್ಥಿ ನಿಲಯಗಳಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕ್ರೈಸ್‌ ಮೂಲಕ ಟೆಂಡರ್‌ ಪ್ರಕ್ರಿಯೆ ನಡೆಸಲು ಸಚಿವ ಸಂಪುಟ ಅನುಮೋದಿಸಿತು.

ಇನ್ನು ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೇ ಕಟ್ಟಡವನ್ನು ಕೆಡವಿ 25 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ ವಸತಿ ಶಾಲಾ ಕಟ್ಟಡ ನಿರ್ಮಿಸಲೂ ಸಚಿವ ಸಂಪುಟ ಸಭೆ ನಿರ್ಧರಿಸಿತು.

ಕನ್ನಡ ಪಾಸಾದವರಿಗೆ ಸ್ಪರ್ಧಾತ್ಮಕ

ಪರೀಕ್ಷೆಯಲ್ಲಿ ಕನ್ನಡ ಕಡ್ಡಾಯವಲ್ಲ

ಎಸ್ಸೆಸ್ಸೆಲ್ಸಿ ಮತ್ತು ಅದಕ್ಕೆ ತತ್ಸಮಾನ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೆಪಿಎಸ್ಸಿ ಮತ್ತು ಇತರ ಆಯ್ಕೆ ಪ್ರಾಧಿಕಾರಿಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡುವ ಸಂಬಂಧ ನಿಯಮ ರೂಪಿಸಲು ಸಚಿವ ಸಂಪುಟ ನಿರ್ಧರಿಸಿತು.

ಇದಕ್ಕೆ ಸಂಬಂಧಿಸಿ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ)(3ನೇ ತಿದ್ದುಪಡಿ) ನಿಯಮಗಳು 2025ನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ, ನಂತರ 15 ದಿನಗಳ ಆಕ್ಷೇಪಣೆ ಅಥವಾ ಸಲಹೆ ಆಹ್ವಾನಿಸಿ, ಅದನ್ನು ಪರಿಗಣಿಸಿ ಕರಡು ನಿಯಮಗಳನ್ನು ರೂಪಿಸಿದ ನಂತರ ಸಚಿವ ಸಂಪುಟಕ್ಕೆ ಅನುಮೋದನೆಗಾಗಿ ಮಂಡಿಸದೇ ಅಂತಿಮ ನಿಯಮಗಳನ್ನು ಪ್ರಕಟಿಸಲು ಸಚಿವ ಸಂಪುಟ ಅನುಮೋದಿಸಲಾಯಿತು.

ಕೆಪಿಸಿಸಿ ಕಚೇರಿ ಭೂಮಿಗೆ ಶೇ. 5ರಷ್ಟು ದರ ನಿಗದಿ

ಧಾರವಾಡದಲ್ಲಿ ಕಾಂಗ್ರೆಸ್‌ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಡೆತನದಲ್ಲಿನ 2,988.29 ಚದರ ಮೀ. ವಿಸ್ತೀರ್ಣದ ಭೂಮಿಯನ್ನು ಪ್ರಸ್ತುತ ಮಾರ್ಗಸೂಚಿ ದರದ ಶೇ.5ರಷ್ಟನ್ನು ದರವನ್ನಾಗಿ ವಿಧಿಸಿ ಭೂಮಿಯನ್ನು ಧಾರವಾಡ ಕೆಪಿಸಿಸಿಗೆ ಹಸ್ತಾಂತರಿಸುವ ಕುರಿತು ಸಚಿವ ಸಂಪುಟದಲ್ಲಿ ನಿರ್ಣಯಿಸಲಾಯಿತು. ಅದರಂತೆ ಪ್ರಸ್ತುತ ಮಾರ್ಗಸೂಚಿ ದರವು ಪ್ರತಿ ಚದರ ಮೀ.ಗೆ 19 ಸಾವಿರ ರು.ಗಳಾಗಿದ್ದು, ಕೆಪಿಸಿಸಿಗೆ ಪ್ರತಿ ಚದರ ಮೀ.ಗೆ 950 ರು. ದರದಂತೆ ನೀಡಲು ನಿರ್ಧರಿಸಲಾಗಿದೆ.

5 ಸಾವಿರ ಜಿಎನ್ಎಸ್‌ಎಸ್‌ ರೋವರ್‌ ಖರೀದಿ

ಕೇಂದ್ರ ಸರ್ಕಾರದ ಡಿಜಿಟಲ್‌ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದಡಿ ಕಂದಾಯ ಇಲಾಖೆ ಅವ್ಯಶ್ಯಕತೆಗನುಗುಣವಾಗಿ ಹಂತಹಂತವಾಗಿ 175 ಕೋಟಿ ರು. ವೆಚ್ಚದಲ್ಲಿ 5 ಸಾವಿರ ಜಿಎನ್ಎಸ್‌ಎಸ್‌ ರೋವರ್‌ ಖರೀದಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ವಸತಿ ರಹಿತ ಮೀನುಗಾರರಿಗೆ ಮನೆ

ವಸತಿ ರಹಿತ ಮೀನುಗಾರರಿಗೆ ವಸತ ಕಲ್ಪಿಸುವ ಉದ್ದೇಶದೊಂದಿಗೆ 10 ಸಾವಿರ ಮೀನುಗಾರರಿಗೆ ಮನೆಗಳನ್ನು ಮಂಜೂರು ಮಾಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ರಾಜೀವ್‌ಗಾಂಧಿ ವಸತಿ ನಿಗಮ ಅನುಸರಿಸುವ ಫಲಾನುಭವಿ ಆಧಾರಿತ ವಿಧಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡು ಫಲಾನುಭವಿಗಳ ಆಯ್ಕೆ ಸೇರಿ ಮನೆ ಹಂಚಿಕೆ ಕಾರ್ಯ ಕೈಗೊಳ್ಳಲು ನಿರ್ಣಯಿಸಲಾಯಿತು.

-ಬಿಯಾಂಡ್‌ ಬೆಂಗಳೂರು ಸೀಡ್‌ ಫಂಡ್‌ ಸ್ಥಾಪನೆ

ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ನಗರಗಳಲ್ಲಿ ನವೋದ್ಯಮಗಳ ಸ್ಥಾಪನೆಗೆ ಉತ್ತೇಜಿಸಲು 75 ಕೋಟಿ ರು. ವೆಚ್ಚದ ಬಿಯಾಂಡ್‌ ಬೆಂಗಳೂರು ಕ್ಲಸ್ಟರ್‌ ಸೀಡ್‌ ಫಂಡ್‌ ಸ್ಥಾಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದರಲ್ಲಿ ಸರ್ಕಾರದ ಪಾಲು 20 ಕೋಟಿ ರು.ಗಳಾಗಿದ್ದರೆ, ಉಳಿದ 55 ಕೋಟಿ ರು. ಇತರ ಮೂಲಗಳಿಂದ ಬರಲಿದೆ. ಹಾಗೆಯೇ, ಐಐಐಟಿ-ಬಿ ಮೂಲಸೌಕರ್ಯ ವಿಸ್ತರಣೆಗೆ ಸಂಬಂಧಿಸಿ ರೂಪಿಸಲಾಗಿರುವ 817 ಕೋಟ ರು. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಹಂತಹಂತವಾಗಿ 285.95 ಕೋಟಿ ರು. ನೀಡುವುದು, ಕಲಬುರಗಿಯಲ್ಲಿ 16 ಕೋಟಿ ರು. ವೆಚ್ಚದಲ್ಲಿ ಇಂಡಸ್ಟ್ರಿ 4.0 ಬೆಂಬಲಿತ ಸಿಎನ್‌ಸಿ ಮೆಷಿನಿಂಗ್‌ ಸೆಟ್‌ಅಪ್‌ ಒಳಗೊಂಡ ಸಿಎನ್‌ಸಿ ತಂತ್ರಜ್ಞಾನ ಕ್ಷೇತ್ರದ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲು ಸಚಿವ ಸಂಪುಟದಲ್ಲಿ ಅನುಮೊದಿಸಲಾಯಿತು.