ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ಆಟ್ರಿಯಾ ಪವರ್‌ನಿಂದ ಮೇಲ್ಛಾವಣಿ ಸೌರ ಅಭಿಯಾನ ಪ್ರಾರಂಭಿಸಲಾಗುತ್ತಿದೆ ಎಂದು ಆಟ್ರಿಯಾ ಗ್ರೂಪ್‌ ಅಧ್ಯಕ್ಷ ಸಿ.ಎಸ್.ಸುಂದರ್ ರಾಜು ತಿಳಿಸಿದರು.

ಬೆಂಗಳೂರು : ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ಆಟ್ರಿಯಾ ಪವರ್‌ನಿಂದ ಮೇಲ್ಛಾವಣಿ ಸೌರ ಅಭಿಯಾನ ಪ್ರಾರಂಭಿಸಲಾಗುತ್ತಿದೆ ಎಂದು ಆಟ್ರಿಯಾ ಗ್ರೂಪ್‌ ಅಧ್ಯಕ್ಷ ಸಿ.ಎಸ್.ಸುಂದರ್ ರಾಜು ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2050ರ ವೇಳೆ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕಕಾರಿ ಅಂಶಗಳು ಹಲವು ಸಂಶೋಧನೆಗಳಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನವೀಕರಿಸಬಹುದಾದ ಇಂಧನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸೌರ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಅಭಿಯಾನದಡಿ ಮುಂದಿನ 2027ರ ವೇಳೆಗೆ ಬೆಂಗಳೂರಿನಲ್ಲಿ ಸುಮಾರು ಎರಡು ಲಕ್ಷ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಕೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಇದು ಕೇವಲ ಅಟ್ರಿಯಾ ಪವರ್‌ನಿಂದ ಮಾತ್ರ ಸಾಧ್ಯವಿಲ್ಲ. ಎಲ್ಲ ಸೌರ ಫಲಕ ಅಳವಡಿಕೆ ಸಂಸ್ಥೆಗಳ ಸಹಯೋಗದಲ್ಲಿ ಮಾಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಸೌರ ಅಭಿಯಾನವನ್ನು ರಾಜ್ಯದ ಬೇರೆ ಬೇರೆ ನಗರಗಳಿಗೆ ವಿಸ್ತರಿಸಲಾಗುವುದು. ಇದರೊಂದಿಗೆ ನಿರುಪಯುಕ್ತ ಕೃಷಿ ಭೂಮಿಯಲ್ಲಿ ಸೌರ ಫಲಕ ಅಳವಡಿಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುತ್ತಿದೆ. ಅದಕ್ಕೆ ಸಾಕಷ್ಟು ಕಾಯ್ದೆ, ಕಾನೂನುಗಳ ಬದಲಾವಣೆ ಅಗತ್ಯವಿದೆ ಎಂದು ತಿಳಿಸಿದರು.

ಆಟ್ರಿಯಾ ಪವರ್‌ ಸಂಸ್ಥೆಯಿಂದ ರಾಜ್ಯದ 10 ಗ್ರಾಮದಲ್ಲಿ ಸೋಲಾರ್‌ ಫಲಕ ಅಳಡಿಕೆ ಮಾಡಿ ಇಡೀ ಗ್ರಾಮದ ಎಲ್ಲ ಮನೆಗೆ ಸೌರ ವಿದ್ಯುತ್‌ ನೀಡುವ ಯೋಜನೆ ರೂಪಿಸಿಕೊಳ್ಳಲಾಗಿದೆ. ಗ್ರಾಮಗಳನ್ನು ಗುರುತಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಆಟ್ರಿಯಾ ಪವರ್‌ ವ್ಯವಸ್ಥಾಪಕ ನಿರ್ದೇಶಕ ಕಾರ್ತಿಕ್‌ ಉಪಸ್ಥಿತರಿದ್ದರು.