ಹೊಸಪೇಟೆ : ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಜೀತ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ 37 ಕಾರ್ಮಿಕರನ್ನು ರಕ್ಷಿಸಿ ಮರಳಿ ಅವರ ತವರು ರಾಜ್ಯಕ್ಕೆ ಕಳುಹಿಸಿದ ಘಟನೆ ವಿಜಯನಗರ ಜಿಲ್ಲೆ ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸ್ಪಂದನ ಎಂಬ ಎನ್‌ಜಿಒ ಸಂಸ್ಥೆ ನೀಡಿದ ಖಚಿತ ಮಾಹಿತಿ ಮೇರೆಗೆ ವಿಜಯನಗರ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಸಹಾಯಕ ಆಯುಕ್ತರು ನಂದಿಬಂಡಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ್ದು, ಅಲ್ಲಿಯ ಇಟ್ಟಂಗಿ ಭಟ್ಟಿಯಲ್ಲಿ ಜೀತ ಪದ್ಧತಿಯಲ್ಲಿದ್ದ 37 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಒಬ್ಬರಿಗೆ ₹40000 ನಿಗದಿ:
ಕಳೆದ 6 ತಿಂಗಳ ಹಿಂದೆ ಪ್ರತಿ ವ್ಯಕ್ತಿಗೆ ₹40000 ಮುಂಗಡ ಹಣ ನೀಡಿ ಒಡಿಶಾದ ಬಲಂಗೀರ್, ನವರಂಗ್‌ಪುರ ಜಿಲ್ಲೆಗಳಿಂದ ಕಾರ್ಮಿಕರನ್ನು ನಂದಿಬಂಡಿಗೆ ಕರೆತರಲಾಗಿತ್ತು. ಆರಂಭದಲ್ಲಿ 6 ತಿಂಗಳು ಅಷ್ಟೇ ಕೆಲಸ ಮಾಡಿಸುವುದಾಗಿ ಹೇಳಿದ್ದ ಮಾಲೀಕರು, ಕೆಲಸದ ಆಧಾರದಲ್ಲಿ ಹಣ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಆದರೆ, ವಾರವಿಡೀ ಕೆಲಸ ಮಾಡಿದರೂ ಕೇವಲ ₹500 ಮಾತ್ರ ನೀಡುತ್ತಿದ್ದರು. ನಮ್ಮ ಅವಧಿ ಮುಗಿದಿದ್ದು, ವಾಪಸ್ ಹೋಗುತ್ತೇವೆ ಎಂದರೆ ಬೆದರಿಕೆ ಹಾಕುತ್ತಿದ್ದರು. ಹೊರ ಪ್ರಪಂಚದ ಸಂಪರ್ಕವಿಲ್ಲದಂತೆ ಸೆಕ್ಯೂರಿಟಿ ಗಾರ್ಡ್ ನೇಮಿಸಿದ್ದರು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಎನ್‌ಜಿಒ ಮಾಹಿತಿ ಮೇರೆಗೆ ಕಾರ್ಯಾಚರಣೆ
ಎನ್‌ಜಿಒ ಮಾಹಿತಿ ಮೇರೆಗೆ ಜಿಲ್ಲಾ ಸಹಾಯಕ ಆಯುಕ್ತ ವಿವೇಕಾನಂದ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ 4 ಅಡಿ ಅಗಲದ ಪುಟ್ಟ ಮನೆಗಳಲ್ಲಿ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದ 10 ಮಕ್ಕಳು, 11 ಮಹಿಳೆಯರು, 16 ಪುರುಷರು ಸೇರಿದಂತೆ ಒಟ್ಟು 37 ಮಂದಿಯನ್ನು ರಕ್ಷಿಸಿದೆ. ರಕ್ಷಿಸಲಾದ 37 ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಸ್ವಗ್ರಾಮಕ್ಕೆ ಕಳುಹಿಸಲಾಗಿದೆ. ಜೀತ ಪದ್ಧತಿಗೆ ಬೆಂಬಲಿಸುವವರ ವಿರುದ್ಧ ಈಗಾಗಲೇ ಮರಿಯಮ್ಮನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.
