ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಯಾವುದೇ ಭಾಗದಲ್ಲಿ ಜೀತ ಪದ್ಧತಿಯ ಪ್ರಸಂಗಗಳು ಕಂಡುಬಂದಲ್ಲಿ ಸಹಾಯವಾಣಿ 1552 ಗೆ ಕರೆ ಮಾಡಿ ಮಾಹಿತಿ ನೀಡಿ ಸಾಮಾಜಿಕ ಜವಾಬ್ದಾರಿ ಮೆರೆಯಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ. ನವೀನ್ ಭಟ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಜಿಪಂ ಸಭಾಂಗಣದಲ್ಲಿ ನಡೆದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಹಾಗೂ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶೇ. 85ರಷ್ಟು ಕುಟುಂಬಗಳು ಇಂದು ಸ್ಮಾರ್ಟ್ ಪೋನ್‌ಗಳನ್ನು ಬಳಸುವ ಬಗ್ಗೆ ಅಂಕಿ ಅಂಶಗಳು ಹೇಳುತ್ತವೆ. ಆದ್ದರಿಂದ ಯಾವುದೇ ಹಳ್ಳಿಯಲ್ಲಾಗಲಿ, ನಗರ ಪ್ರದೇಶದಲ್ಲಿ ಆಗಲಿ ಯಾರಿಗೂ ಗೊತ್ತಿಲ್ಲದ ಹಾಗೆ ಯಾರಿಂದಲೂ ಬಲವಂತದ ಹಾಗೂ ಬಂಧನದ ದುಡಿಮೆಯನ್ನು ಮಾಡಿಸಲು ಸಾಧ್ಯವಿಲ್ಲ. ಅಕ್ಕ ಪಕ್ಕದ ವಾಸಿಗಳಿಗೆ ಈ ಮಾಹಿತಿ ಗೊತ್ತಿರುತ್ತದೆ. ಅಂತಹವರು ದೊಡ್ಡ ಮನಸ್ಸು ಮಾಡಿ ಸಹಾಯವಾಣಿಗೆ ಕರೆ ಮಾಡಿದರೆ ಸಕ್ಷಮ ಪ್ರಾಧಿಕಾರಗಳು ಜೀತ ವಿಮುಕ್ತಿ ಕಾರ್ಯ ಹಾಗೂ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಜೀತ ಪದ್ಧತಿಗೆ ದೂಡಿದ ಹಾಗೂ ಸಹಕಾರ ನೀಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ತಿಳಿಸಿದರು.ಜೀತ ವಿಮೋಚನೆಗಾಗಿ ಜಿಲ್ಲೆಯಲ್ಲಿ ಪ್ರಯತ್ನ ಮಾಡುತ್ತಿರುವ ಕೆಲವು ಸಂಘಟನೆಗಳು ಜೀತ ವಿಮುಕ್ತಿ ಪ್ರಕ್ರಿಯೆಯನ್ನು ನಡೆಸುವ ಪ್ರಸ್ತುತ ಚಾಲನೆಯಲ್ಲಿ ಮಾರ್ಗಸೂಚಿಯಲ್ಲಿ ಹಲವು ಸುಧಾರಣೆಗಳನ್ನು ತರಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯ ಮಟ್ಟಕ್ಕೆ ಸಲ್ಲಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿರುವ ಇಟ್ಟಿಗೆ ಫ್ಯಾಕ್ಟರಿಗಳಲ್ಲಿ, ಕೋಳಿ ಫಾರಂಗಳಲ್ಲಿ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಮಾಹಿತಿಯನ್ನು ತೆಗೆದುಕೊಂಡು ಯಾರೋಬ್ಬರು ಜೀತ ಪದ್ಧತಿಗೆ ಸಿಲುಕಿಕೊಳ್ಳದಂತೆ ಕ್ರಮವಹಿಸಲಾಗುವುದು ಹಾಗೂ ಅರಿವು ಮೂಡಿಸಲಾಗುವುದು. ಇನ್ನೂ ಮುಂದೆ ಇಂತಹ ದುಡಿಮೆಗೆ ಯಾರೋಬ್ಬರೂ ಮುಂದಾಗಬಾರದು ಎಂದು ಮನವಿ ಮಾಡಿದರು.ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ ಇದೆ ಎಂದರೆ ಎಲ್ಲರೂ ನಾಚಿಕೆಪಟ್ಟುಕೊಳ್ಳಬೇಕು. ನಗರ ಪ್ರದೇಶದಲ್ಲಿ ಮನೆ ಕೆಲಸ, ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ಬಲವಂತದ ದುಡಿಮೆ ಮಾಡಿಸುತ್ತಿರುವುದು ಇನ್ನೂ ಜೀವಂತವಾಗಿದೆ. ಅಂತಹ ಪ್ರಸಂಗಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿ ತಡೆಗಟ್ಟಬೇಕು ಎಂದು ತಿಳಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ಉಳಿಗಮಾನ್ಯ ಪದ್ಧತಿಯಿಂದ ಆರಂಭವಾದ ಜೀತಪದ್ಧತಿ ಇಂದು ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡು ಸಮಾಜದಲ್ಲಿ ಅಲ್ಲಲ್ಲಿ ಕಂಡು ಬರುತ್ತಿದೆ. ಕಾರ್ಪೋರೇಟ್ ಜಗತ್ತಿನಲ್ಲೂ ಜೀತ ಪದ್ಧತಿ ಕಾಣಿಸಿಕೊಳ್ಳುತ್ತಿದೆ. ರೂಪಾಂತರಗೊಂಡಿರುವ ಜೀತಪದ್ಧತಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಆಡಳಿತ ವರ್ಗ ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್ ಅವರು ಜೀತ ವಿಮುಕ್ತಿಯ ಬಗ್ಗೆ ಅರಿವು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷಾ, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಜೀತ ವಿಮುಕ್ತಿಗೆ ಪ್ರಯತ್ನ ಮಾಡುತ್ತಿರುವ ಮುಖಂಡರಾದ ಕಿರಣ್ ಕಮಲ್ ಪ್ರಸಾದ್, ನಾರಾಯಸ್ವಾಮಿ, ರತ್ನಮ್ಮ, ಗಂಗಾಧರ್ ಇದ್ದರು.ಸಿಕೆಬಿ-1 ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಹಾಗೂ ಅರಿವು ಕಾರ್ಯಕ್ರಮಕ್ಕೆ ಸಿಇಒ ಡಾ. ವೈ.ನವೀನ್ ಭಟ್ ಚಾಲನೆ ನೀಡಿದರು.