ಆರ್‌ಟಿಇ ಮೊದಲ ಬ್ಯಾಚಿನ ಮಕ್ಕಳಿಗೆ 75% ಫಲಿತಾಂಶ

| N/A | Published : May 03 2025, 10:21 AM IST

Madhu Bangarappa Karnataka

ಸಾರಾಂಶ

ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಕೋಟಾದಡಿ ಉಚಿತ ಸೀಟು ಪಡೆದು ವ್ಯಾಸಂಗ ಮಾಡಿದ ಮೊದಲ ಬ್ಯಾಚ್‌ 25 ಸಾವಿರ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಈ ಪೈಕಿ 19,235 ಮಂದಿ(ಶೇ.75) ಉತ್ತೀರ್ಣಗೊಂಡಿದ್ದಾರೆ

ಬೆಂಗಳೂರು : ರಾಜ್ಯದ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಕೋಟಾದಡಿ ಉಚಿತ ಸೀಟು ಪಡೆದು ವ್ಯಾಸಂಗ ಮಾಡಿದ ಮೊದಲ ಬ್ಯಾಚ್‌ 25 ಸಾವಿರ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಈ ಪೈಕಿ 19,235 ಮಂದಿ(ಶೇ.75) ಉತ್ತೀರ್ಣಗೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಬಿಡುಗಡೆ ಮಾಡಿದ ವೇಳೆ ಈ ಮಾಹಿತಿ ನೀಡಿದ ಅವರು, ಶಿಕ್ಷಣ ಹಕ್ಕು ಕಾಯ್ದೆ-2009 ರಾಜ್ಯದಲ್ಲಿ ಕೆಲ ವರ್ಷ ತಡವಾಗಿ ಜಾರಿಯಾಯಿತು. ಅಂದು ಆರ್‌ಟಿಇ ಕೋಟಾದಡಿ ಲಭ್ಯವಿದ್ದ ಶೇ.25 ರಷ್ಟು ಎಲ್‌ಕೆಜಿ ಸೀಟು ಹಾಗೂ ನೇರವಾಗಿ 1ನೇ ತರಗತಿಗೆ ದಾಖಲಾಗಿದ್ದ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ತಲುಪಿ ಪರೀಕ್ಷೆ ಬರೆದಿದ್ದರು. 25 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ 19000ಕ್ಕೂ ಹೆಚ್ಚು ಮಕ್ಕಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 8857 ಗಂಡು ಮಕ್ಕಳು, 10,378 ಹೆಣ್ಣು ಮಕ್ಕಳಿದ್ದಾರೆ. ಐದಾರು ಮಕ್ಕಳು 625ಕ್ಕೆ 624 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಂದಿ 620ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಎಂದು ತಿಳಿಸಿದರು.

ಆರ್‌ಟಿಇ ಮಕ್ಕಳ ಫಲಿತಾಂಶವನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿ ಆ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕೆಂದು ರಾಜ್ಯ ಆರ್‌ಟಿಇ ಸ್ಟೂಟೆಂಟ್ಸ್‌ ಮತ್ತು ಪೇರೆಂಟ್ಸ್‌ ಅಸೋಸಿಯೇಷನ್‌ ಮತ್ತು ವಿವಿಧ ಖಾಸಗಿ ಶಾಲಾ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು.