ಸಾರಾಂಶ
ಕೇಂದ್ರ ಸರ್ಕಾರವು ಕರ್ನಾಟಕ ರೈಲ್ವೆಗೆ ಹೆಚ್ಚಿನ ಅನುದಾನ ನೀಡಿದೆ. ಯುಪಿಎ ಅವಧಿಗಿಂತ ಒಂಬತ್ತು ಪಟ್ಟು ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಹೇಳಿದ್ದಾರೆ.
ಬೆಂಗಳೂರು : ಕೇಂದ್ರ ಸರ್ಕಾರವು ಕರ್ನಾಟಕ ರೈಲ್ವೆಗೆ ಹೆಚ್ಚಿನ ಅನುದಾನ ನೀಡಿದೆ. ಯುಪಿಎ ಅವಧಿಗಿಂತ ಒಂಬತ್ತು ಪಟ್ಟು ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕಕ್ಕೆ ರೈಲ್ವೆ ಅನುದಾನ ಹೆಚ್ಚಿಸಿದ್ದು, 7,564 ಕೋಟಿ ರು. ನೀಡಲಾಗಿದೆ. ಯುಪಿಎ ಅವಧಿಯಲ್ಲಿ 850 ಕೋಟಿ ರು. ನೀಡಲಾಗಿತ್ತು. ರೈಲ್ವೆ ವಲಯದಲ್ಲಿ 51,479 ಕೋಟಿ ರು. ಬಂಡವಾಳ ಹೂಡಲಾಗಿದೆ. ಅಮೃತ್ ಸ್ಟೇಷನ್ ಯೋಜನೆಯಡಿ 61 ರೈಲ್ವೆ ನಿಲ್ದಾಣಗಳ ಮರು ನಿರ್ಮಾಣವಾಗಿದೆ. 1,652 ಕಿ.ಮೀ. ಹೊಸ ರೈಲ್ವೆ ಮಾರ್ಗ ನಿರ್ಮಿಸಲಾಗಿದೆ. 10 ವಂದೇ ಭಾರತ ರೈಲುಗಳು ಕರ್ನಾಟಕದಲ್ಲಿ ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳು ಸಂಚರಿಸಲಿವೆ ಎಂದರು.
ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗದ ಬೇಡಿಕೆ ಅನುಸಾರ 12 ಲಕ್ಷ ರು. ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ದೇಶದಲ್ಲಿ ಕಳೆದ 60-70 ವರ್ಷಗಳಲ್ಲಿ ನೋಡದಷ್ಟು ಉತ್ತಮ ಅಭಿವೃದ್ಧಿ ಕಾರ್ಯಗಳು ಕಳೆದ 10 ವರ್ಷಗಳಲ್ಲಿ ಕಾಣುತ್ತಿವೆ ಎಂದು ಜನ ಹೇಳುತ್ತಿದ್ದಾರೆ. ಇದೆಲ್ಲದಕ್ಕೂ ಎನ್‌ಡಿಎ ಚಿಂತನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯೇ ಕಾರಣ ಎಂದು ಹೇಳಿದರು.
ಅತ್ಯುತ್ತಮ ಎಂಎಸ್‌ಪಿ:
ದೇಶದ ಬಜೆಟ್ ಗಾತ್ರ 50 ಲಕ್ಷ ಕೋಟಿ ರು. ಇದ್ದು, ಆರ್ಥಿಕ ಕ್ಷೇತ್ರದ ಕೊರತೆ ಶೇ.4.8ರಷ್ಟಿದೆ. ಇದೀಗ ಅದು ಶೇ.4ಕ್ಕೆ ತಲುಪುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕ ಕ್ಷೇತ್ರದ ಕೊರತೆ ಶೇ.7ರಷ್ಟಿದ್ದು, ನಾವು ಆರೋಗ್ಯಕರ ಸ್ಥಿತಿಯಲ್ಲಿದ್ದೇವೆ. ಕೃಷಿ ಉತ್ಪನ್ನಗಳಿಗೆ ಅತ್ಯುತ್ತಮ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿದೆ. ಉತ್ಪಾದಕತೆ, ಕೃಷಿ ತಂತ್ರಜ್ಞಾನಕ್ಕೆ ಒತ್ತು ನೀಡಲಾಗುತ್ತಿದೆ. ಮಧ್ಯಮ ವರ್ಗಗಳಿಗೆ ನೆರವಾಗುವ ಮೆಟ್ರೋ, ಹೊಸ ವಿಮಾನ ನಿಲ್ದಾಣಗಳು, 10 ವರ್ಷಗಳಲ್ಲಿ 390 ಹೊಸ ವಿಶ್ವವಿದ್ಯಾಲಯಗಳ ನಿರ್ಮಾಣ, ಹೊಸ ಐಐಟಿ, ಐಐಎಂಗಳಿಂದ ಜೀವನದಲ್ಲಿ ಮಹತ್ವದ ಬಲಾವಣೆ ಸಾಧ್ಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ.ಮೋಹನ್, ಡಾ. ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ ಮತ್ತಿತರರಿದ್ದರು.
ಬೆಲೆ ಏರಿಕೆ ನಿಯಂತ್ರಣದಲ್ಲಿದೆ:
ದೇಶದಲ್ಲಿ ಎಂಎಸ್‌ಎಂಇಗಳ ಸ್ಥಿತಿಯೂ ಗರಿಷ್ಠ ಸುಧಾರಣೆ ಕಂಡಿದೆ. ಕೋವಿಡ್ ಅವಧಿ ನಡುವೆಯೂ ಉತ್ತಮ ಸಾಲ ವ್ಯವಸ್ಥೆ, ದೊಡ್ಡ ಕೈಗಾರಿಕೆಗಳಿಂದ ಬೆಂಬಲದಿಂದ ಎಂಎಸ್‍ಎಂಇಗಳೂ ಉತ್ತಮ ಸ್ಥಿತಿಯಲ್ಲಿವೆ. ಬೆಲೆ ಏರಿಕೆ ನಿಯಂತ್ರಣದಲ್ಲಿದೆ. ನಾವು ಭವಿಷ್ಯದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿ ಇಟ್ಟುಕೊಂಡು ಶೇ.6ರಿಂದ 8ರಷ್ಟು ಬೆಳವಣಿಗೆ ದರವನ್ನು ಕಾಪಾಡುವ ಸ್ಥಿತಿಯಲ್ಲಿದ್ದೇವೆ ಎಂದರು.
ಬಂಡವಾಳ ಹೂಡಿಕೆಯಿಂದ ಉದ್ಯೋಗ ಸೃಷ್ಟಿ:
ಹೊಸ ಬಂಡವಾಳ ಹೂಡಿಕೆಯಿಂದ ಹೊಸ ಉದ್ಯೋಗ ಸೃಷ್ಟಿ ಹಾಗೂ ಬೆಳವಣಿಗೆಗೆ ಅವಕಾಶ ಸಿಗಲಿದೆ. ಬೆಂಗಳೂರು ಹೊಸ ಏರ್‌ಪೋರ್ಟ್ ಟರ್ಮಿನಲ್ ಪಡೆದರೆ, ಹೆಚ್ಚು ಜನರು ಅಲ್ಲಿ ಕೆಲಸ ಮಾಡುವಂತಾಗುತ್ತದೆ. ಹೆಚ್ಚು ಅಂಗಡಿಗಳಿಗೆ ಅವಕಾಶ ಲಭಿಸುತ್ತದೆ. ಹೊಸ ರೈಲ್ವೆ ನಿಲ್ದಾಣ ನಿರ್ಮಾಣವಾದರೆ, ಸಹಜವಾಗಿ ಹೆಚ್ಚು ಉದ್ಯೋಗ ಲಭಿಸಲಿದೆ.
ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯ ಬಂಡವಾಳ ಹೂಡಲು ಆದ್ಯತೆ ಕೊಡಲಾಗಿದೆ. ಭಾರತವು ಪ್ರಮುಖ ಸೇವಾ ಕ್ಷೇತ್ರದ ದೇಶವಾಗಿದೆ. ದೊಡ್ಡ ಪ್ರಮಾಣದ ಐ.ಟಿ. ಸರ್ವಿಸಸ್ ಹೊಂದಿದ ಬೆಂಗಳೂರು ಇದಕ್ಕೆ ಸಮರ್ಥ ಉದಾಹರಣೆ ಎಂದು ಹೇಳಿದರು.
ಮೇಕ್ ಇನ್ ಇಂಡಿಯ ಯೋಜನೆ ಜಾರಿಯಿಂದ ನಾವು ಇದೀಗ ಗರಿಷ್ಠ ಪ್ರಮಾಣದ ಮೊಬೈಲ್ ಉತ್ಪಾದಿಸುವ ದೇಶವಾಗಿದ್ದೇವೆ. ರಕ್ಷಣಾ ಸಾಮಗ್ರಿ ಉತ್ಪಾದನೆಯಲ್ಲೂ ದೇಶದ ಕೊಡುಗೆ ಗಮನಾರ್ಹ. ಸೆಮಿ ಕಂಡಕ್ಟರ್ ಉತ್ಪಾದನೆಯೂ ಆರಂಭವಾಗಿದೆ.
ಬೆಂಗಳೂರಿನಲ್ಲಿ 40ರಿಂದ 50 ಸಾವಿರ ಜನರಿಗೆ ಉದ್ಯೋಗ ಕೊಡುವ ಮೊಬೈಲ್ ತಯಾರಿಕಾ ಘಟಕ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ತಿಳಿಸಿದರು.