ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಜೈಲಿನಲ್ಲಿ ತಮಗೆ ಹೆಚ್ಚುವರಿಯಾಗಿ ಹಾಸಿಗೆ-ದಿಂಬು ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಸೆಷೆನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಜೈಲಿನಲ್ಲಿ ತಮಗೆ ಹೆಚ್ಚುವರಿಯಾಗಿ ಹಾಸಿಗೆ-ದಿಂಬು ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಸೆಷೆನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್ ಸೇರಿ ಪ್ರಕರಣದ ಉಳಿದ ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ರದ್ದುಗೊಂಡ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆರೋಪಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಿದರೆ ಸಂಬಂಧಿಸಿದ ಜೈಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಜೈಲಿನಲ್ಲಿ ಎಲ್ಲ ಕೈದಿಗಳಂತೆ ಪರಿಗಣಿಸಲಾಗುತ್ತಿದೆ.
ದರ್ಶನ್‌ಗೆ ಮನೆ ಊಟ, ಪಂಚತಾರಾ ಸೌಲಭ್ಯಗಳನ್ನು ಕೇಳುತ್ತಿಲ್ಲ. ಹೆಚ್ಚುವರಿಯಾಗಿ ಹಾಸಿಗೆ ದಿಂಬು ಪಡೆಯಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೆ.2ಕ್ಕೆ ಮುಂದೂಡಿದೆ.
ಇದೇ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಹಾಗೂ ತಾಂತ್ರಿಕ ಕಾರಣಗಳಿಂದ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜಾಮೀನು ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನೂ ನ್ಯಾಯಾಲಯ ಸೆ.2ಕ್ಕೆ ಮುಂದೂಡಿದೆ.