ಇಡೀ ದಿನ ಕುಟುಂಬದ ಜೊತೆ ಕಾಲ ಕಳೆದ ಚಿತ್ರ ನಟ ದರ್ಶನ್‌ - ಮಗನ ಹುಟ್ಟುಹಬ್ಬ ಆಚರಣೆ

| Published : Nov 01 2024, 10:20 AM IST

kannada actor darshan thoogudeepa

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರು ಜಾಮೀನು ಪಡೆದು ಬಿಡುಗಡೆಯಾದ ಮರುದಿನವಾದ ಗುರುವಾರ ತಮ್ಮ ಪತ್ನಿ, ಪುತ್ರ ಹಾಗೂ ಆತ್ಮೀಯರೊಂದಿಗೆ ರಾಜ್ಯ ರಾಜಧಾನಿಯ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲೇ ಕಾಲ ಕಳೆದರು.

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರು ಜಾಮೀನು ಪಡೆದು ಬಿಡುಗಡೆಯಾದ ಮರುದಿನವಾದ ಗುರುವಾರ ತಮ್ಮ ಪತ್ನಿ, ಪುತ್ರ ಹಾಗೂ ಆತ್ಮೀಯರೊಂದಿಗೆ ರಾಜ್ಯ ರಾಜಧಾನಿಯ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲೇ ಕಾಲ ಕಳೆದರು.

ಬುಧವಾರ ಬೆಳಗ್ಗೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಜಾಮೀನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದರು. ಬಳಿಕ ತಮ್ಮ ಪತ್ನಿ ವಿಜಯಲಕ್ಷ್ಮೀ ಜತೆಗೆ ಕಾರಿನಲ್ಲಿ ಬಳ್ಳಾರಿಯಿಂದ ನೇರವಾಗಿ ಮಧ್ಯರಾತ್ರಿ ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್‌ಗೆ ಬಂದರು.

ಐಷಾರಾಮಿ ಕಾರುಗಳಿಗೆ ಪೂಜೆ:

ಗುರುವಾರ ಬೆಳಗ್ಗೆ ದರ್ಶನ್‌ ಅವರ ಸಿಬ್ಬಂದಿ ರಾಜರಾಜೇಶ್ವರಿನಗರ ನಗರದ ನಿವಾಸದಲ್ಲಿ ನಿಲುಗಡೆ ಮಾಡಿದ್ದ ಐಷಾರಾಮಿ ಕಾರುಗಳನ್ನು ತೊಳೆದು ಒಂದೊಂದೇ ಕಾರನ್ನು ಹೊಸಕೆರೆಹಳ್ಳಿ ಫ್ಲ್ಯಾಟ್‌ ಬಳಿಗೆ ತಂದರು. ಈ ಬಾರಿ ಆಯುಧ ಪೂಜೆ ದಿನ ದರ್ಶನ್‌ ಜೈಲಿನಲ್ಲಿ ಇದ್ದ ಕಾರಣ ಕಾರುಗಳಿಗೆ ಪೂಜೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬೆಳಗ್ಗೆ ಸಿಬ್ಬಂದಿ ಮುಖಾಂತರ ತಮ್ಮ ಕಾರುಗಳನ್ನುರಾಜರಾಜೇಶ್ವರಿ ನಗರದ ಸ್ವಂತ ಮನೆಯಿಂದ, ಫ್ಲ್ಯಾಟ್‌ ಬಳಿಗೆ ತರಿಸಿಕೊಂಡು ಕುಟುಂಬದ ಸದಸ್ಯರು ಹಾಗೂ ಆತ್ಮೀಯರ ಜತೆಗೆ ಪೂಜೆ ಸಲ್ಲಿಸಿದರು. ಬಳಿಕ ಆ ಕಾರುಗಳನ್ನು ಸಿಬ್ಬಂದಿ ರಾಜರಾಜೇಶ್ವರಿನಗರದ ನಿವಾಸಕ್ಕೆ ಮರಳಿ ತೆಗೆದುಕೊಂಡು ಹೋದರು.

ಇಡೀ ದಿನ ಕುಟುಂಬದ ಜತೆಗೆ ಕಾಲ ಕಳೆದ ದರ್ಶನ್‌:

ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್‌ ಹಾಗೂ ಆತ್ಮೀಯರೊಂದಿಗೆ ಇಡೀ ದಿನ ಫ್ಲ್ಯಾಟ್‌ನಲ್ಲೇ ಕಾಲ ಕಳೆದರು. ಗುರುವಾರ ಮಗ ವಿನೀಶ್‌ನ ಹುಟ್ಟುಹಬ್ಬ ಇದ್ದ ಹಿನ್ನೆಲೆಯಲ್ಲಿ ಸಂಜೆ ಕುಟುಂಬದ ಸದಸ್ಯರ ಜತೆಗೆ ಕೇಕ್‌ ಕತ್ತರಿಸಿ ಮಗನಿಗೆ ಶುಭ ಹಾರೈಸಿದರು. ಮನೆ ಬಳಿ ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ದರ್ಶನ್‌ ಮಾತ್ರ ಅಪಾರ್ಟ್‌ಮೆಂಟ್‌ ಆವರಣದಿಂದ ಹೊರಗೆ ಬರಲಿಲ್ಲ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬುಧವಾರ ಮಧ್ಯರಾತ್ರಿಯಿಂದಲೂ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಇಂದು ಆಸ್ಪತ್ರೆಗೆ ದಾಖಲು ಸಾಧ್ಯತೆ?

ಬೆನ್ನುನೋವು ಸಮಸ್ಯೆ ಮುಂದಿಟ್ಟು ಚಿಕಿತ್ಸೆ ಕಾರಣ ನೀಡಿ ನ್ಯಾಯಾಲಯದಿಂದ ಆರು ವಾರಗಳ ಕಾಲ ಷರತ್ತು ಬದ್ಧ ಜಾಮೀನು ಪಡೆದು ಬಿಡುಗಡೆಯಾಗಿರುವ ದರ್ಶನ್‌, ಶನಿವಾರ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ. ಗುರುವಾರ ಮತ್ತು ಶುಕ್ರವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಸಿಗದ ಕಾರಣ ಶನಿವಾರ ಆಸ್ಪತ್ರೆಗೆ ದಾಖಲಾಗಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.