ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ

| N/A | Published : Aug 03 2025, 07:39 AM IST

advertisement board
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನ ಸುಮಾರು 1,500 ಕಿ.ಮೀ ಉದ್ದದ 654 ಆರ್ಟಿರಿಯಲ್‌ ರಸ್ತೆ, ಸಬ್‌ ಆರ್ಟಿರಿಯಲ್‌ ರಸ್ತೆ, ಜಂಕ್ಷನ್‌, ವೃತ್ತ ಸೇರಿದಂತೆ ಬಹುತೇಕ ನಗರದ ಎಲ್ಲೆಡೆ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಅವಕಾಶ

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು : ರಾಜಧಾನಿ ಬೆಂಗಳೂರಿನ ಸುಮಾರು 1,500 ಕಿ.ಮೀ ಉದ್ದದ 654 ಆರ್ಟಿರಿಯಲ್‌ ರಸ್ತೆ, ಸಬ್‌ ಆರ್ಟಿರಿಯಲ್‌ ರಸ್ತೆ, ಜಂಕ್ಷನ್‌, ವೃತ್ತ ಸೇರಿದಂತೆ ಬಹುತೇಕ ನಗರದ ಎಲ್ಲೆಡೆ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವುದಕ್ಕೆ ಬಿಬಿಎಂಪಿ ಮುಂದಾಗಿದ್ದು, ಈ ಮೂಲಕ ವಾರ್ಷಿಕ 600 ಕೋಟಿ ರು. ಆದಾಯ ಗಳಿಸುವುದಕ್ಕೆ ಯೋಜನೆ ಹಾಕಿದೆ.

ನಗರದಲ್ಲಿ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ರೂಪಿಸಲಾದ ‘ಬಿಬಿಎಂಪಿ ಜಾಹೀರಾತು ಉಪ ವಿಧಿ-2024’ರ ಅಧಿಸೂಚನೆಗೆ ಹೈಕೋರ್ಟ್‌ ಜುಲೈ 2ನೇ ವಾರದಲ್ಲಿ ಸಮ್ಮತಿ ಸೂಚಿಸಿದ ಕೂಡಲೇ ಬಿಬಿಎಂಪಿಯು ತರಾತುರಿಯಲ್ಲಿ ರಸ್ತೆಗಳನ್ನು ಗುರುತಿಸಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವುದಕ್ಕೆ ಟೆಂಡರ್‌ (ಹರಾಜು) ಆಹ್ವಾನಿಸಿದೆ.

ವಲಯವಾರು ಟೆಂಡರ್‌ ಆಹ್ವಾನಿಸಿರುವ ಬಿಬಿಎಂಪಿ ಜಾಹೀರಾತು ವಿಭಾಗವು, ಮಾಸಿಕ ಎಂಟು ವಲಯದಿಂದ ಕನಿಷ್ಠ 43 ಕೋಟಿ ರು.ನಂತೆ ವಾರ್ಷಿಕ 515 ಕೋಟಿ ರು. ಆದಾಯ ನಿರೀಕ್ಷಿಸಿ ಗುತ್ತಿಗೆ ಕರೆದಿದೆ. ಆಗಸ್ಟ್‌ 25ರವರೆಗೆ ಟೆಂಡರ್‌ ಬಿಡ್‌ ಸಲ್ಲಿಸುವುದಕ್ಕೆ ಅವಕಾಶ ನೀಡಿದೆ.

ಎಲ್ಲೆಲ್ಲಿ ಜಾಹೀರಾತು ಪ್ರದರ್ಶನ ಅವಕಾಶ?:

ನಗರದಲ್ಲಿ 18 ಮೀಟರ್‌ಗಿಂತ ಕಡಿಮೆ ಇಲ್ಲದ ರಸ್ತೆಗಳು, ವಾಣಿಜ್ಯ ವ್ಯವಹಾರ ಅಥವಾ ಕೈಗಾರಿಕಾ ಪ್ರದೇಶ ಎಂದು ಘೋಷಿಸಲಾದ ಪ್ರದೇಶಗಳಲ್ಲಿ 6 ಮೀಟರ್‌ ಅಗಲಕ್ಕಿಂತ ಕಡಿಮೆ ಇಲ್ಲದ ರಸ್ತೆಗಳು ಹಾಗೂ ಜಂಕ್ಷನ್‌, ವೃತ್ತ ಸೇರಿ ಮೊದಲಾದ ಕಡೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವುದಕ್ಕೆ ಮುಂದಾಗಿದೆ.

ಮಾಸಿಕ ಚದರಡಿಗೆ 75 ರಿಂದ 90 ರು. ನಿಗದಿ?:

ರಸ್ತೆಯು 18 ಮೀಟರ್‌ನಿಂದ 24 ಮೀಟರ್‌ ಆಗಲ ಇರುವ ರಸ್ತೆಗೆ ಪ್ರತಿ ತಿಂಗಳಿಗೆ ಪ್ರತಿ ಚದರಡಿ ಜಾಹೀರಾತು ಪ್ರದರ್ಶನಕ್ಕೆ ಕನಿಷ್ಠ 75 ರು. ದರ ನಿಗದಿ ಪಡಿಸಲಾಗಿದೆ. 24 ರಿಂದ 30 ಮೀಟರ್‌ ಆಗಲ ಇರುವ ರಸ್ತೆಗೆ ಮಾಸಿಕ ಪ್ರತಿ ಚದರಡಿಗೆ 85 ರು. ಹಾಗೂ 30 ರಿಂದ 60 ಮೀಟರ್‌ ಇರುವ ರಸ್ತೆಗೆ ಮಾಸಿಕ 90 ರು. ದರ ನಿಗದಿ ಪಡಿಸಲಾಗಿದೆ. ರಸ್ತೆಯ ಅಗಲದ ಆಧಾರದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಇನ್ನೂ 18 ರಿಂದ 24 ಮೀಟರ್‌ ಅಗಲದ ರಸ್ತೆಯಲ್ಲಿ 800 ಚದರಡಿ ಮಾತ್ರ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಹೀಗೆ, 24 ರಿಂದ 30 ಮೀಟರ್‌ ರಸ್ತೆಯಲ್ಲಿ 1,000 ಚದರಡಿ, 30 ರಿಂದ 60 ಮೀಟರ್‌ ರಸ್ತೆಯಲ್ಲಿ 1,100 ಚದರಡಿ, 60 ಮೀಟರ್‌ ಗಿಂತ ಹೆಚ್ಚಿನ ಅಗಲ ಇರುವ ರಸ್ತೆಯಲ್ಲಿ 1200 ಚದರಡಿ, ವೃತ್ತದಲ್ಲಿ 3 ಸಾವಿರ ಚದರಡಿ, ವಾಣಿಜ್ಯ ಮತ್ತು ಕೈಗಾರಿಕೆ ಪ್ರದೇಶದ 12 ಮೀಟರ್‌ ಗಿಂತ ಕಡಿಮೆ ಅಗಲ ಇರುವ ರಸ್ತೆಯಲ್ಲಿ 600 ಚದರಡಿ, 6 ರಿಂದ 12 ಮೀಟರ್ ರಸ್ತೆಯಲ್ಲಿ 500 ಚದರಡಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

5 ತಿಂಗಳ ಶುಲ್ಕ ಮುಂಗಡ ಷರತ್ತು:

ಜಾಹೀರಾತು ಹರಾಜು(ಗುತ್ತಿಗೆ)ಯಲ್ಲಿ ಭಾಗವಹಿಸುವ ಗುತ್ತಿಗೆದಾರರು ಎಲ್ಲಾ ಎಂಟು ವಲಯದಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಬಿಬಿಎಂಪಿಯು ಗರಿಷ್ಠ 4 ವಲಯದ ಜಾಹೀರಾತು ಪ್ರದರ್ಶನದ ಗುತ್ತಿಗೆಯನ್ನು ಮಾತ್ರ ನೀಡುವುದಾಗಿ ಷರತ್ತು ವಿಧಿಸಿದೆ. ಗುತ್ತಿಗೆ ಪಡೆದವರು ಐದು ತಿಂಗಳ ಜಾಹೀರಾತು ಶುಲ್ಕವನ್ನು ಗುತ್ತಿಗೆ ಕರಾರು ಒಪ್ಪಂದಕ್ಕೆ ಮೊದಲೇ ಬಿಬಿಎಂಪಿಗೆ ಬಡ್ಡಿ ಇಲ್ಲದೇ ಪಾವತಿಗೆ ಸಿದ್ಧವಾಗಿರಬೇಕು.

ಬಿಬಿಎಂಪಿ ನಿಗದಿ ಪಡಿಸಿದ ದರಕ್ಕಿಂತ ಕಡಿಮೆ ದರ ಬಿಡ್‌ ಮಾಡುವಂತಿಲ್ಲ. ಗುತ್ತಿಗೆ ಪಡೆದವರು ಕನಿಷ್ಠ 10 ವರ್ಷ ಗುತ್ತಿಗೆ ನಿರ್ವಹಿಸಬೇಕು. ಮೂರು ವರ್ಷಕ್ಕೆ ಒಂದು ಬಾರಿ ಕಂದಾಯ ಇಲಾಖೆ ಮಾರ್ಗಸೂಚಿ ದರ ಆಧಾರಿಸಿ ಪರಿಷ್ಕರಣೆ ಮಾಡಲಾಗುವುದು ಎಂದು ಷರತ್ತು ವಿಧಿಸಲಾಗಿದೆ.

ಗೊಂದಲಗಳ ನಡುವೆ ಗುತ್ತಿಗೆ:

ನಗರದ ಪಾದಚಾರಿ ಮಾರ್ಗದಲ್ಲಿ ಜಾಹೀರಾತು ಫಲಕ ಅಳವಡಿಕೆ ಮಾಡುವುದಕ್ಕೆ ಅವಕಾಶವಿಲ್ಲ. ನಗರದ ಬಹುತೇಕ ರಸ್ತೆಯಲ್ಲಿ ಜಾಗವೇ ಇಲ್ಲ. ಇನ್ನೂ ಖಾಸಗಿ ಕಟ್ಟಡಗಳ ಮೇಲೆ ಅವಳಡಿಕೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಕೆಲವು ರಸ್ತೆಯಲ್ಲಿ ಸರ್ಕಾರಿ ಆಸ್ತಿ ಬಿಟ್ಟರೆ ಖಾಸಗಿ ಆಸ್ತಿಗಳೇ ಇಲ್ಲ. ಆ ರಸ್ತೆಗಳಲ್ಲಿ ಹೇಗೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ ಎಂಬ ಗೊಂದಲಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಈ ಪ್ರದೇಶದಲ್ಲಿ ಜಾಹೀರಾತು ನಿಷೇಧ:

ವಿಧಾನಸೌಧ ಮತ್ತು ಹೈಕೋರ್ಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಯಾವುದೇ ರೀತಿಯ ಜಾಹೀರಾತು ಅಳವಡಿಕೆಗೆ ಅವಕಾಶ ಇಲ್ಲ. ಕುಮಾರಕೃಪಾ ರಸ್ತೆ (ವಿಂಡ್ಸರ್ ಜಂಕ್ಷನ್‌ನಿಂದ ಶಿವಾನಂದ ವೃತ್ತ), ರಾಜಭವನ ರಸ್ತೆಯಲ್ಲಿ (ಹೈಗ್ರೌಂಡ್ಸ್‌ನಿಂದ ಮಿನ್ಸ್‌ ಸ್ಕ್ಯಾರ್‌), ಸ್ಯಾಂಕಿ ರಸ್ತೆಯಲ್ಲಿ (ಹೈಗ್ರೌಂಡ್ಸ್‌ನಿಂದ ವಿಂಡ್ಸರ್ ಸಿಗ್ನಲ್‌), ಅಂಬೇಡ್ಕರ್ ವೀಧಿ (ಕೆಆರ್ ವೃತ್ತದಿಂದ ಇನ್‌ಫೆಂಟ್ರಿ ರಸ್ತೆ), ಪೋಸ್ಟ್‌ ಆಪೀಸ್‌ ರಸ್ತೆ (ಕೆಆರ್‌ ಜಂಕ್ಷನ್‌ನಿಂದ ಎಸ್‌ಬಿಐ ಜಂಕ್ಷನ್‌), ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ (ಶೇಷಾದ್ರಿ ರಸ್ತೆ), ಕೆಆರ್ ವೃತ್ತ, ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಆವರಣ, ನೃಪತುಂಗ ರಸ್ತೆ (ಕೆಆರ್ ವೃತ್ತದಿಂದ ಹಡ್ಸನ್ ವೃತ್ತ) ಮತ್ತು ಅರಮನೆ ರಸ್ತೆ (ಎಸ್‌ಬಿಐ ವೃತ್ತದಿಂದ ಚಾಲುಕ್ಯ ವೃತ್ತ)ವರೆಗೆ ಹಾಗೂ ದೇವಸ್ಥಾನ, ಗುರುದ್ವಾರ, ಚರ್ಚು, ಮಸೀದಿಗೆ ಹೋಗುವ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ.

Read more Articles on