ನಗರದಲ್ಲಿ ಜಾಹೀರಾತು ಉಪ ವಿಧಿ ಶೀಘ್ರದಲ್ಲಿ ಜಾರಿ : ಬಿಬಿಎಂಪಿ ಅಧಿಸೂಚನೆಗೆ ಹೈಕೋರ್ಟ್‌ ಸಮ್ಮತಿ

| N/A | Published : Jul 18 2025, 01:45 AM IST / Updated: Jul 18 2025, 10:12 AM IST

BBMP latest news today photo
ನಗರದಲ್ಲಿ ಜಾಹೀರಾತು ಉಪ ವಿಧಿ ಶೀಘ್ರದಲ್ಲಿ ಜಾರಿ : ಬಿಬಿಎಂಪಿ ಅಧಿಸೂಚನೆಗೆ ಹೈಕೋರ್ಟ್‌ ಸಮ್ಮತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ರೂಪಿಸಲಾದ ‘ಬಿಬಿಎಂಪಿ ಜಾಹೀರಾತು ಉಪ ವಿಧಿ-2024’ರ ಅಧಿಸೂಚನೆಗೆ ಹೈಕೋರ್ಟ್‌ ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಜಾರಿಗೆ ಸಿದ್ಧತೆ ನಡೆಸಲಾಗುತ್ತಿದೆ.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ರೂಪಿಸಲಾದ ‘ಬಿಬಿಎಂಪಿ ಜಾಹೀರಾತು ಉಪ ವಿಧಿ-2024’ರ ಅಧಿಸೂಚನೆಗೆ ಹೈಕೋರ್ಟ್‌ ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಜಾರಿಗೆ ಸಿದ್ಧತೆ ನಡೆಸಲಾಗುತ್ತಿದೆ.

ಹೈಕೋರ್ಟ್‌ ಸೂಚನೆ ಮೇರೆಗೆ ಸರ್ಕಾರ ಸಲ್ಲಿಸಿದ್ದ ಕರಡು ಜಾಹೀರಾತು ಉಪ ವಿಧಿಯನ್ನು ಪರಿಶೀಲಿಸಿರುವ ಹೈಕೋರ್ಟ್‌, ಅಂತಿಮ ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲು ಅನುಮತಿ ನೀಡಿದೆ. ಈ ನಡುವೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿಗೆ ಬಂದಿರುವುದರಿಂದ ಈ ಬಗ್ಗೆ ಪರಿಷ್ಕರಣೆ ಮಾಡಿ ಪ್ರಕಟಿಸಲು ತೀರ್ಮಾನಿಸಲಾಗಿದೆ.

ಜಾಹೀರಾತು ಉಪ ವಿಧಿಯ ವಿವರ:

ಮಾರ್ಗಸೂಚಿ ದರದ ಮೇಲೆ ಜಾಹೀರಾತು ಶುಲ್ಕ ನಿಗದಿ, ರಸ್ತೆ, ವೃತ್ತ ಮತ್ತು ವಲಯವಾರು ಟೆಂಡರ್‌ ಮೂಲಕ ಜಾಹಿರಾತು ಪ್ರದರ್ಶನಕ್ಕೆ ಅವಕಾಶ, ಟೆಂಡರ್‌ನಲ್ಲಿ ಭಾಗವಹಿಸಲು ಕಡ್ಡಾಯ ₹5 ಲಕ್ಷ ಶುಲ್ಕ ಪಾವತಿಸಿ ನೋಂದಣಿ ಸೇರಿದಂತೆ ಹಲವು ಅಂಶಗಳನ್ನು ಬಿಬಿಎಂಪಿಯು ‘ಜಾಹೀರಾತು ಉಪ ವಿಧಿ-2024’ ಒಳಗೊಂಡಿದೆ. ಜಾಹೀರಾತು ಪ್ರದರ್ಶನಕ್ಕೆ ಮುಖ್ಯವಾಗಿ ಪರಿಸರ ಸ್ನೇಹಿ ಇರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು.

ದುಪ್ಪಟ್ಟು ದಂಡ:

ಅನಧಿಕೃತ ಜಾಹೀರಾತು ಪ್ರದರ್ಶನಕ್ಕೆ ರಸ್ತೆ, ವೃತ್ತದಲ್ಲಿ ಗುತ್ತಿಗೆ ಪಡೆದ ದರದ ಎರಡು ಪಟ್ಟು ದಂಡ ವಿಧಿಸಲಾಗುತ್ತದೆ. ಅನಧಿಕೃತ ಜಾಹೀರಾತು ತೆರವು ಜವಾಬ್ದಾರಿಯನ್ನು ವಲಯ ಆಯುಕ್ತರಿಗೆ ನೀಡಲಾಗಿದೆ. ನಗರದಲ್ಲಿರುವ ಅಂಗಡಿ- ಮಳಿಗೆಗಳು 150 ಚದರಡಿವರೆಗೆ ಉಚಿತವಾಗಿ ಜಾಹೀರಾತು ಫಲಕ ಅಳವಡಿಸಬಹುದು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಫಲಕ ಅಳವಡಿಕೆ ಮಾಡಿದರೆ ಶುಲ್ಕ ಪಾವತಿಸಿ ಕ್ರಮಬದ್ಧಗೊಳಿಸಬಹುದು. ಇಲ್ಲವಾದರೆ ಪಾಲಿಕೆ ತೆರವುಗೊಳಿಸಲಿದೆ.

ಬಸ್‌, ಆಟೋ ಜಾಹೀರಾತಿಗೂ ಶುಲ್ಕ:

ಬಿಎಂಟಿಸಿ ಹಾಗೂ ಖಾಸಗಿ ಬಸ್‌, ಆಟೋ ಸೇರಿದಂತೆ ಇತರೆ ವಾಹನಗಳ ಮೇಲೆ ಪ್ರದರ್ಶಿಸುವ ಜಾಹೀರಾತುಗಳಿಗೆ ಬಿಬಿಎಂಪಿಯಿಂದ ಅನುಮೋದನೆ ಪಡೆದು ಶುಲ್ಕ ಪಾವತಿಸಬೇಕಿದೆ. ನಗರದಲ್ಲಿ ಜಾಹೀರಾತು ನಿಯಂತ್ರಣಕ್ಕೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.

ಜಾಹೀರಾತು ನಿಷೇಧಿತ ಪ್ರದೇಶಗಳು:

ವಿಧಾನಸೌಧ ಮತ್ತು ಹೈಕೋರ್ಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಯಾವುದೇ ರೀತಿಯ ಜಾಹೀರಾತು ಅಳವಡಿಕೆಗೆ ಅವಕಾಶ ಇಲ್ಲ. ಕುಮಾರ ಕೃಪಾ ರಸ್ತೆ (ವಿಂಡ್ಸರ್ ಜಂಕ್ಷನ್‌ನಿಂದ ಶಿವಾನಂದ ವೃತ್ತ), ರಾಜಭವನ ರಸ್ತೆಯಲ್ಲಿ (ಹೈಗ್ರೌಂಡ್ಸ್‌ನಿಂದ ಮಿನ್ಸ್‌ ಸ್ಕ್ಯಾರ್‌), ಸ್ಯಾಂಕಿ ರಸ್ತೆಯಲ್ಲಿ (ಹೈ ಗ್ರೌಂಡ್ಸ್‌ನಿಂದ ವಿಂಡ್ಸರ್ ಸಿಗ್ನಲ್‌), ಅಂಬೇಡ್ಕರ್ ವೀಧಿ (ಕೆಆರ್ ವೃತ್ತದಿಂದ ಇನ್‌ಫೆಂಟ್ರಿ ರಸ್ತೆ), ಪೋಸ್ಟ್‌ ಆಪೀಸ್‌ ರಸ್ತೆ (ಕೆಆರ್‌ ಜಂಕ್ಷನ್‌ನಿಂದ ಎಸ್‌ಬಿಐ ಜಂಕ್ಷನ್‌), ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ (ಶೇಷಾದ್ರಿ ರಸ್ತೆ), ಕೆಆರ್ ವೃತ್ತ, ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಆವರಣ, ನೃಪತುಂಗ ರಸ್ತೆ (ಕೆಆರ್ ವೃತ್ತದಿಂದ ಹಡ್ಸನ್ ವೃತ್ತ) ಮತ್ತು ಅರಮನೆ ರಸ್ತೆ (ಎಸ್‌ಬಿಐ ವೃತ್ತದಿಂದ ಚಾಲುಕ್ಯ ವೃತ್ತ)ವರೆಗೆ ಹಾಗೂ ದೇವಸ್ಥಾನ, ಗುರುದ್ವಾರ, ಚರ್ಚು, ಮಸೀದಿಗೆ ಹೋಗುವ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ.

ಯಾವ ರಸ್ತೆಯಲ್ಲಿ ಎಷ್ಟು ಅಡಿ ಪ್ರದರ್ಶನಕ್ಕೆ ಅವಕಾಶ?

ರಸ್ತೆಪ್ರದರ್ಶನ ವಿಸ್ತೀರ್ಣ (ಚದರಡಿ)

60ಅಡಿ800

80 ಅಡಿ1000

100 ಅಡಿ1100

200 ಅಡಿ1200

1 ಲಕ್ಷ (ಚದರಡಿ ವೃತ್ತ)3000

ಪ್ರತಿ ಚದರಡಿ ಮಾರ್ಗಸೂಚಿ ದರ ಆಧಾರಿಸಿದ ಜಾಹೀರಾತು ದರ ಪಟ್ಟಿ

ಮಾರ್ಗಸೂಚಿದರದ ರಸ್ತೆ/ವೃತ್ತಪ್ರತಿ ಚದರಡಿದರ (ತಿಂಗಳಿಗೆ₹)

₹3,000 ಕ್ಕಿಂತ ಕಡಿಮೆ₹40

₹3,000 ದಿಂದ 5,000₹50

₹5,000 ದಿಂದ 10,000 ₹60

₹10,000 ದಿಂದ 20,000₹70

₹20,000 ದಿಂದ 50,000 ₹80

₹50,000 ದಿಂದ 1 ಲಕ್ಷ₹90

₹1 ಲಕ್ಷದಿಂದ 2 ಲಕ್ಷ₹100

₹2 ಲಕ್ಷಕ್ಕಿಂತ ಹೆಚ್ಚು₹110

ಬಾಕ್ಸ್)))))

ವಿವಿಧ ಬಗೆಯ ಬಾಹೀರಾತು ಪ್ರದರ್ಶನದ ದರ

*ಖಾಸಗಿ ಮತ್ತು ಸಾರ್ವಜನಿಕ ಬಸ್‌ನಲ್ಲಿ 10 ಅಡಿ ಮಾತ್ರ ಜಾಹೀರಾತು ಪ್ರದರ್ಶನ. ಪ್ರತಿ ಚದರಡಿಗೆ ₹50 ಅಥವಾ ಮಾಸಿಕ ₹500

*ಮೆಟ್ರೋ ರೈಲು ಜಾಹೀರಾತಿನ ಪ್ರತಿ ಚದರಡಿಗೆ ₹50 ಅಥವಾ ಇಡೀ ಬೋಗಿಗೆ ಮಾಸಿಕ ₹750

*ವಿತರಣಾ ವಾಹನ ಮತ್ತು ಸೇವಾ ವಾಹನ 6 ಅಡಿ ಪ್ರದರ್ಶನ.ಪ್ರತಿ ಚದರಡಿಗೆ 75 ರು. ಅಥವಾ ಮಾಸಿಕ 750 ರು.

*ಟ್ಯಾಕ್ಸಿ, ಆಟೋ, ಸಾರ್ವಜನಿಕ ಸಂಚಾರಿ ವಾಹನದಲ್ಲಿ 6 ಅಡಿ ಪ್ರದರ್ಶನ. ಪ್ರತಿ ಚದರಡಿಗೆ ಮಾಸಿಕ ₹50 ಅಥವಾ ಮಾಸಿಕ ₹500

ಜಾಹೀರಾತು ಉಪವಿಧಿ ಬಳಿಕ ಮುಂದೇನು?

ರಾಜಪತ್ರ ಪ್ರಕಟಿಸಿದ ಬಳಿಕ ಗುತ್ತಿಗೆದಾರರು ತಲಾ 5 ಲಕ್ಷ ರು. ಶುಲ್ಕ ಪಾವತಿಸಿ ಬಿಬಿಎಂಪಿಯ ಜಾಹೀರಾತು ವಿಭಾಗದಲ್ಲಿ ಗುತ್ತಿಗೆ ಸಂಸ್ಥೆಯ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಜಾಹೀರಾತು ವಿಭಾಗವೂ ನಗರದಲ್ಲಿ ಜಾಹೀರಾತು ಪ್ರದರ್ಶನ ಮಾಡುವ ಸ್ಥಳ ಗುರುತಿಸುವ ಕಾರ್ಯ ಆರಂಭಿಸಲಿದೆ. ಬಳಿಕ ಹರಾಜು ಪ್ರಕ್ರಿಯೆ ಮೂಲಕ ಜಾಹೀರಾತು ಪ್ರದರ್ಶನಕ್ಕೆ ಗುತ್ತಿಗೆ ನೀಡುವ ಪ್ರಕ್ರಿಯೆ ನಡೆಸಲಿದೆ. ಜಾಹೀರಾತಿನಿಂದ ಸುಮಾರು ₹500 ರಿಂದ ₹750 ಕೋಟಿ ವಾರ್ಷಿಕ ಆದಾಯ ಬರುವ ನಿರೀಕ್ಷೆ ಇದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read more Articles on