ಬೆಂಗಳೂರು-ತುಮಕೂರು ದಶಪಥ ರಸ್ತೆಗೆ ಹತ್ತಾರು ವಿಘ್ನ: ಭೂಸ್ವಾಧೀನ ವಿಳಂಬದಿಂದ ಕಾಮಗಾರಿಗೆ ಅಡ್ಡಿ

| N/A | Published : Jul 18 2025, 12:45 AM IST / Updated: Jul 18 2025, 10:21 AM IST

ಬೆಂಗಳೂರು-ತುಮಕೂರು ದಶಪಥ ರಸ್ತೆಗೆ ಹತ್ತಾರು ವಿಘ್ನ: ಭೂಸ್ವಾಧೀನ ವಿಳಂಬದಿಂದ ಕಾಮಗಾರಿಗೆ ಅಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಭೂಸ್ವಾಧೀನದಲ್ಲಿ ಉಂಟಾದ ವಿಘ್ನಗಳು ಬಹುನಿರೀಕ್ಷಿತ ಬೆಂಗಳೂರು-ತುಮಕೂರು ನಡುವಿನ ಹತ್ತು ಪಥಗಳ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಮತ್ತೊಂದೆಡೆ, ನಿಧಾನಗತಿಯ ಕಾಮಗಾರಿಯೂ ವಾಹನ ಸವಾರರ ತಾಳ್ಮೆ ಪರೀಕ್ಷಿಸುತ್ತಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ಭೂಸ್ವಾಧೀನದಲ್ಲಿ ಉಂಟಾದ ವಿಘ್ನಗಳು ಬಹುನಿರೀಕ್ಷಿತ ಬೆಂಗಳೂರು-ತುಮಕೂರು ನಡುವಿನ ಹತ್ತು ಪಥಗಳ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಮತ್ತೊಂದೆಡೆ, ನಿಧಾನಗತಿಯ ಕಾಮಗಾರಿಯೂ ವಾಹನ ಸವಾರರ ತಾಳ್ಮೆ ಪರೀಕ್ಷಿಸುತ್ತಿದೆ.

ನೆಲಮಂಗಲ ಟೋಲ್‌ಗೇಟ್‌ನಿಂದ ತುಮಕೂರುವರೆಗಿನ 44.04 ಕಿ.ಮೀ. ವ್ಯಾಪ್ತಿಯಲ್ಲಿ ಎರಡೂ ಬದಿ ತಲಾ ಎರಡು ಪಥದ ಸರ್ವೀಸ್‌ ರಸ್ತೆ ಮತ್ತು ತಲಾ ಮೂರು ಪಥದ ಮುಖ್ಯ ರಸ್ತೆ ಹೊಂದಿರುವ ಈ ಯೋಜನೆಯ ಆರಂಭಿಕ ಲೆಕ್ಕಾಚಾರದ ಪ್ರಕಾರ ಆಗಸ್ಟ್‌ 2025ಕ್ಕೇ ಸರ್ವೀಸ್‌ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂಸ್ವಾಧೀನ ವಿವಾದಗಳು ಕಾಡಿದ್ದರಿಂದ ಯೋಜನೆಗೆ ಹಿನ್ನಡೆ ಉಂಟಾಗಿದೆ.

ಮತ್ತೊಂದೆಡೆ, ‘ಗುತ್ತಿಗೆದಾರರೂ ಸಮರೋಪಾದಿಯಲ್ಲಿ ಕಾಮಗಾರಿ ನಿರ್ವಹಿಸದಿರುವುದರಿಂದ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಇದರಿಂದಾಗಿ ವರ್ಷಗಟ್ಟಲೆ ಜನ ಸಂಕಷ್ಟ ಅನುಭವಿಸಬೇಕಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ತ್ವರಿತ ಕಾಮಗಾರಿಗೆ ಮುಂದಾಗಬೇಕು’ ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.

‘ಸುಮಾರು 30ಕ್ಕೂ ಅಧಿಕ ಸ್ಥಳಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿ ಅಡಚಣೆ ಉಂಟಾಗಿತ್ತು. ಇವುಗಳನ್ನೆಲ್ಲ ಪರಿಹರಿಸುವಷ್ಟರಲ್ಲಿ ಬಹಳ ಸಮಯ ವ್ಯರ್ಥವಾಯಿತು. ಈ ಯೋಜನೆಯು ರೈಲ್ವೇ ಮೇಲ್ಸೇತುವೆ ಸೇರಿ 17ಕ್ಕೂ ಅಧಿಕ ಮೇಲ್ಸೇತುವೆ ಯೋಜನೆ ಒಳಗೊಂಡಿದೆ. ಇದರಲ್ಲಿ ಮೂರ್ನಾಲ್ಕು ಮೇಲ್ಸೇತುವೆಗಳ ಕಾಮಗಾರಿ ಮಾತ್ರ ಆರಂಭವಾಗಿದೆ’ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸಂಪರ್ಕಿಸುವ ಪ್ರಮುಖ ರಸ್ತೆ:

ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುವ, ಗೋವಾ, ಮಹಾರಾಷ್ಟ್ರ, ತೆಲಂಗಾಣಕ್ಕೂ ಸಂಪರ್ಕ ಸೇತುವೆಯಾಗಿರುವ ಬೆಂಗಳೂರು-ತುಮಕೂರು ರಸ್ತೆ ಕಾಮಗಾರಿ ನಿಧಾನವಾಗಿ ಸಾಗುತ್ತಿರುವುದರಿಂದ ವಾಹನಗಳ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿನಿತ್ಯ ಇಲ್ಲಿ ಲಕ್ಷಾಂತರ ವಾಹನಗಳು ಸಂಚರಿಸಲಿದ್ದು, ಇವರ ಗೋಳು ಹೇಳತೀರದಾಗಿದೆ.

ಈ ಭಾಗದಲ್ಲಿ ನೂರಾರು ಕೈಗಾರಿಕೆ ಹೊಂದಿರುವ ಸೋಂಪುರ ಕೈಗಾರಿಕಾ ಪ್ರದೇಶವಿದ್ದು, ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿರುವುದು ವಾಹನಗಳಲ್ಲಿ ಸಂಚರಿಸುವ ಕಾರ್ಮಿಕರ ಸಮಯವನ್ನೂ ‘ಕೊಲ್ಲು’ತ್ತಿದೆ. ಕಾರ್ಯನಿಮಿತ್ತ ದಿನವೂ ತುಮಕೂರಿನಿಂದ ಬೆಂಗಳೂರಿಗೆ ಬಂದು ಹೋಗುವವರಿಗಂತು ಈ ರಸ್ತೆ ವಾಹನ ದಟ್ಟಣೆಯಿಂದಾಗಿ ರೇಜಿಗೆ ಹುಟ್ಟಿಸುತ್ತಿದೆ.

ಸರ್ವೀಸ್‌ ರಸ್ತೆ 2026 ಜೂನ್‌ಗೆ ಲೋಕಾರ್ಪಣೆ:

‘2026 ಜೂನ್‌ ತಿಂಗಳಿನಲ್ಲಿ ಬೆಂಗಳೂರು-ತುಮಕೂರು ದಶಪಥ ರಸ್ತೆ ನಿರ್ಮಾಣ ಯೋಜನೆಯ ಸರ್ವೀಸ್‌ ರಸ್ತೆ ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಯಾಗಲಿದೆ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತುಮಕೂರು ಯೋಜನಾ ನಿರ್ದೇಶಕ ಅನೂಪ್‌ ಅಯ್ಯರ್‌ ಸ್ಪಷ್ಟಪಡಿಸಿದ್ದಾರೆ.

‘ಕನ್ನಡ ಪ್ರಭ’ದೊಂದಿಗೆ ಮಾತನಾಡಿದ ಅವರು, ‘2026 ಮಾರ್ಚ್‌ನಲ್ಲೇ ಸವೀರ್ಸ್‌ ರಸ್ತೆ ಉದ್ಘಾಟನೆ ಆಗಬೇಕಿತ್ತಾದರೂ 26 ಪ್ರದೇಶಗಳಲ್ಲಿ ಭೂಸ್ವಾಧೀನಕ್ಕೆ ಅಡೆತಡೆ ಉಂಟಾಗಿತ್ತು. ಆದ್ದರಿಂದ ಕಾಮಗಾರಿಗೆ ವಿಳಂಬವಾಗಿತ್ತು. ಇದೀಗ ಇದರ ಸಂಖ್ಯೆ ಕೇವಲ ಎಂಟೊಂಬ್ಹತ್ತಕ್ಕೆ ಇಳಿದಿದ್ದು ಕಾಮಗಾರಿಗೆ ವೇಗ ಸಿಕ್ಕಿದೆ. 2027 ಮಾರ್ಚ್‌ಗೆ ಮುಖ್ಯ ರಸ್ತೆಯೂ ಸಿದ್ಧವಾಗಲಿದೆ’ ಎಂದು ಅವರು ವಿವರಿಸಿದರು.

Read more Articles on