ಬಿಪಿಎಲ್ ಪಡಿತರದಾರರಿಗೆ ವಿತರಿಸುವ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ, ಮಾರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 570 ಜನರನ್ನು ಬಂಧಿಸಲಾಗಿದ್ದು, 29,603.15 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಸುವರ್ಣ ಸೌಧ : ಬಿಪಿಎಲ್ ಪಡಿತರದಾರರಿಗೆ ವಿತರಿಸುವ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ, ಮಾರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 570 ಜನರನ್ನು ಬಂಧಿಸಲಾಗಿದ್ದು, 29,603.15 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಅಕ್ರಮಕ್ಕೆ ಬಳಸಿದ 314 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕಾರ್ಡ್ ರದ್ದು ಮಾಡಿ ಸೂಕ್ತ ಕ್ರಮ
ಬಿಜೆಪಿಯ ಸಿ.ಟಿ. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು,‘ಯಾದಗಿರಿ ಜಿಲ್ಲೆಯಲ್ಲಿ ಆಹಾರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನ್ಯ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಗಂಗಾವತಿ ತಾಲ್ಲೂಕಿನ ಕೆಎಫ್‌ಸಿಎಸ್‌ಸಿ ಗೋದಾಮು ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿದೆ. ಜತೆಗೆ ಇಂತಹ ಅಕ್ರಮ ತಡೆಗೆ ಪಡಿತರ ಚೀಟಿದಾರರು ಅಕ್ಕಿ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಲ್ಲಿ ಅಂತವರ ಕಾರ್ಡ್ ರದ್ದು ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು. ನ್ಯಾಯಬೆಲೆ ಅಂಗಡಿ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಿ ಪಡಿತರ ವಿತರಣೆ ಪರಿಶೀಲಿಸಲಾಗುತ್ತಿದೆ’ ಎಂದರು.
ಅಕ್ರಮ ತಡೆಗೆ ಇಂದಿರಾ ಕಿಟ್ - ಮುನಿಯಪ್ಪ:
ಉತ್ತರ ಕರ್ನಾಟಕ ಸೇರಿದಂತೆ ಕೆಲವೆಡೆ ಅಕ್ಕಿ ಬಳಕೆ ಕಡಿಮೆ, ಹೀಗಾಗಿ ಅದರ ದುರ್ಬಳಕೆಯಾಗುತ್ತಿತ್ತು. ಇದನ್ನು ತಡೆಯುವ ಜೊತೆಗೆ ಪೌಷ್ಠಿಕ ಆಹಾರ ನೀಡಲು ತೊಗರಿ ಬೆಳೆ, ಎಣ್ಣೆ ಮತ್ತಿತರವನ್ನು ಒಳಗೊಂಡ ಇಂದಿರಾ ಕಿಟ್ ಅನ್ನು ಜನವರಿಯಿಂದ ವಿತರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಸಿ.ಟಿ.ರವಿ,‘ಪಡಿತರ ಅಕ್ಕಿ ಅಕ್ರಮ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನಡೆದಿದೆ. ಅಕ್ಕಿ ಸಾಗಾಟ ಬೇರೆ ರಾಜ್ಯ, ಬೇರೆ ದೇಶಗಳಿಗೂ ರವಾನೆಯಾಗಿರುವುದರಿಂದ ಎಸ್‌ಐಟಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
