ಸಾರಾಂಶ
ಬಿಜೆಪಿ ಸದಸ್ಯರ ಆಕ್ಷೇಪ ಹಾಗೂ ಸಭಾತ್ಯಾಗದ ನಡುವೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸುತ್ತಿರುವ ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕೇಂದ್ರವನ್ನು ಆಗ್ರಹಿಸಲು ವಿಧಾನಸಭೆ ಬುಧವಾರ ನಿರ್ಣಯ ತೆಗೆದುಕೊಂಡಿದೆ.
ವಿಧಾನಸಭೆ : ಬಿಜೆಪಿ ಸದಸ್ಯರ ಆಕ್ಷೇಪ ಹಾಗೂ ಸಭಾತ್ಯಾಗದ ನಡುವೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸುತ್ತಿರುವ ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕೇಂದ್ರವನ್ನು ಆಗ್ರಹಿಸಲು ವಿಧಾನಸಭೆ ಬುಧವಾರ ನಿರ್ಣಯ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರ ಸಂವಿಧಾನದ ಮೂಲಭೂತ ತತ್ವಗಳನ್ನು ಉಲ್ಲಂಘಿಸಿ ವಕ್ಫ್ ತಿದ್ದುಪಡಿ ತರುತ್ತಿದೆ. ಇದು ಕೇಂದ್ರ ಹಾಗೂ ರಾಜ್ಯ ಎರಡಕ್ಕೂ ಸಂಬಂಧಿಸಿದ ವಿಷಯವಾಗಿದ್ದು, ಕೇಂದ್ರಕ್ಕೆ ರಾಜ್ಯಗಳ ಅಭಿಪ್ರಾಯವಿಲ್ಲದೆ ಕಾಯಿದೆ ತಿದ್ದುಪಡಿ ತರಲು ಅಧಿಕಾರವಿಲ್ಲ. ಇದು ಸಮಾನತೆಗೆ ವಿರುದ್ಧವಾಗಿದ್ದು, ಕರ್ನಾಟಕ ನಾಡಿನ ಜನತೆಯ ಜ್ಯಾತ್ಯತೀತ ತ್ವಗಳಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸುವ ಕಾಯಿದೆ. ಹೀಗಾಗಿ ಕರ್ನಾಟಕ ವಿಧಾನಸಭೆಯು ವಕ್ಫ್ ಕಾಯ್ದೆ ತಿದ್ದುಪಡಿಯನ್ನು ಸರ್ವಾನುಮತದಿಂದ ತಿರಸ್ಕರಿಸುತ್ತದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಸಚಿವ ಎಚ್.ಕೆ.ಪಾಟೀಲ್ ಅವರು ನಿರ್ಣಯ ಓದಲು ಶುರು ಮಾಡುತ್ತಿದ್ದಂತೆಯೇ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಸಲ್ಮಾನರ ತುಷ್ಟೀಕರಣಕ್ಕೆ ಸರ್ಕಾರ ಮುಂದಾಗಿದೆ. ಇದು ಸಾಬರ ಸರ್ಕಾರ, ಮುಸಲ್ಮಾನರ ತುಷ್ಟೀಕರಣದ ಸರ್ಕಾರ ಎಂದು ಘೋಷಣೇ ಕೂಗಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ‘ವಕ್ಫ್ ಮಂಡಳಿಯಿಂದ ರಾಜ್ಯದಲ್ಲಿ ಎಷ್ಟೆಲ್ಲ ಅನಾಹುತಗಳು ಆಗಿವೆ. ಎಷ್ಟೆಲ್ಲ ಬಡ ರೈತರು ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ ಎಂದು ನೋಡಿದ್ದೀರಿ. ಸರ್ ಎಂ. ವಿಶ್ವೇಶ್ವರಯ್ಯ ಅವರು ಓದಿದ ಶಾಲೆಗೆ ವಕ್ಫ್ ಆಸ್ತಿ ಎಂದು ಬೋರ್ಡ್ ಹಾಕಿದ್ದಾರೆ. ಬಸವಣ್ಣನವರ ದೇವಾಲಯ, ಪಾರಂಪರಿಕ ಸ್ಥಳಗಳು, ಬಡ ಕೃಷಿಕರ ಜಮೀನು ಎಲ್ಲವನ್ನೂ ಕಬಳಿಸುವ ವಕ್ಫ್ ಕಬಳಿಕೆ ಪರವಾದ ಈ ನಿರ್ಣಯಕ್ಕೆ ನಮ್ಮ ವಿರೋಧವಿದೆ. ಇದು ಸರ್ವಾನುಮತದ ನಿರ್ಣಯ ಅಲ್ಲ ಎಂದು ಕಿಡಿ ಕಾರಿದರು.
ಸಾಮಾನ್ಯ ಜ್ಞಾನ ಇಲ್ಲದೆ ನಿರ್ಣಯ: ಕೇಂದ್ರವು ಶೇ.50 ರಷ್ಟು ರಾಜ್ಯಗಳ ಅನುಮತಿ ಇದ್ದರೆ ಯಾವುದೇ ಕಾಯಿದೆ ಮಾಡಬಹುದು. 18 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಷ್ಟು ಸಾಮಾನ್ಯ ಜ್ಞಾನ ಇಲ್ಲದೆ ಈ ನಿರ್ಣಯ ಮಾಡುತ್ತಿದ್ದಾರೆ. ಇದು ಕೇವಲ ಮುಸಲ್ಮಾನರ ತುಷ್ಟೀಕರಣಕ್ಕಾಗಿ ಮಾಡುತ್ತಿರುವ ನಿರ್ಣಯ ಎಂದು ಕಿಡಿ ಕಾರಿದರು.
ಪ್ರತಿಪಕ್ಷ ಸದಸ್ಯರಾದ ಸುನಿಲ್‌ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್, ವೇದವ್ಯಾಸ ಕಾಮತ್ ಸೇರಿ ಎಲ್ಲರೂ ದನಿಗೂಡಿಸಿ ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಈ ನಿರ್ಣಯಕ್ಕೆ ನಮ್ಮ ಬೆಂಬಲವಿಲ್ಲ ಎಂದು ಕೂಗಿದರು. ಸದಸ್ಯರು ಸಭಾತ್ಯಾಗ ಮಾಡುವ ನಡುವೆಯೇ ನಿರ್ಣಯವನ್ನು ಸದನ ಅಂಗೀಕರಿಸಿತು.
ಸದನದಲ್ಲಿ ಕೈಗೊಂಡ ನಿರ್ಣಯವೇನು?:
ಕೇಂದ್ರ ಸರ್ಕಾರವು 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ. ಈ ತಿದ್ದುಪಡಿ ಮಾಡುವ ಸಲುವಾಗಿ 2024ರಲ್ಲಿ ರಚಿಸಿದ್ದ ಜಂಟಿ ಸದನ ಸಮಿತಿಯ ಸಂಸತ್ತಿನ ಉನ್ನತ ಸಂಪ್ರದಾಯಗಳನ್ನು ಬದಿಗೊತ್ತಿ ವಿರೋಧಪಕ್ಷದ ಸದಸ್ಯರ ಯಾವುದೇ ಅಭಿಪ್ರಾಯ ಪರಿಗಣಿಸದೆ, ಲೆಕ್ಕಿಸದೆ ಏಕಪಕ್ಷೀಯವಾಗಿ ಮನಬಂದಂತೆ ವರ್ತಿಸಿದೆ.
ಈ ಕಾಯ್ದೆ ತಿದ್ದುಪಡಿಗೆ ಕೆಲ ಬದಲಾವಣೆ ಶಿಫಾರಸು ಮಾಡಿ ಸಂಸತ್ತಿಗೆ ವರದಿ ಸಲ್ಲಿಸಿ ಈಗ ಮಸೂದೆಯನ್ನು ಸಂಸತ್ತಿನ ಅಂಗೀಕಾರಕ್ಕಾಗಿ ಮಂಡಿಸಿದೆ. ಜಂಟಿ ಸಂಸದೀಯ ಸಮಿತಿಯ ಆಹ್ವಾನದಂತೆ ವಿವಿಧ ಪಾಲುದಾರರು, ರಾಜ್ಯ ವಕ್ಫ್ ಮಂಡಳಿಗಳು ಮತ್ತು ವಿವಿಧ ಸಂಸ್ಥೆಗಳು ಅಭಿಪ್ರಾಯ ಮಂಡಿಸಿದ್ದರೂ ಅವುಗಳನ್ನು ಪರಿಗಣಿಸಿಲ್ಲ. ಹೀಗಾಗಿ ಈ ತಿದ್ದುಪಡಿ ಕಾಯ್ದೆ ಏಕಪಕ್ಷೀಯವಾಗಿ ಮಂಡಿಸಲಾಗಿದೆ ಎಂದು ನಿರ್ಣಯದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಕೇಂದ್ರಕ್ಕೆ ತಿದ್ದುಪಡಿ ಅಧಿಕಾರವಿಲ್ಲ: ದತ್ತಿ ಸಂಸ್ಥೆಗಳು, ದತ್ತಿ ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ಭಾರದ ಸಂವಿಧಾನದ ಪಟ್ಟಿಯಲ್ಲಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಸಮಾನ ಜವಾಬ್ದಾರಿಯ ಏಕಕಾಲಿಕ ಪಟ್ಟಿಯಡಿ ಬರುತ್ತವೆ. ಸಂವಿಧಾನದ 3ನೇ ಪಟ್ಟಿಯಲ್ಲಿ ವಕ್ಫ್ ವಿಷಯ ಉಲ್ಲೇಖ ಆಗಿಲ್ಲ. ವಕ್ಫ್ ಒಂದು ವಿಶೇಷ ಪರಿಕಲ್ಪನೆ.
ಅದು ಕೇಂದ್ರ ಸರ್ಕಾರದ ಪ್ರತ್ಯೇಕ ವ್ಯಾಪ್ತಿಗೆ ಒಳಪಡುವ ವಿಷಯವಲ್ಲ. ಬದಲಿಗೆ ರಾಜ್ಯ ಸರ್ಕಾರದ ಪ್ರತ್ಯೇಕ ಹಾಗೂ ವಿಶೇಷ ಅಧಿಕಾರಕ್ಕೆ ಒಳಪಡುವ 11ನೇ ಪಟ್ಟಿಯಲ್ಲಿ ನಮೂದು ಸಂಖ್ಯೆ 10ರಲ್ಲಿ ಸ್ಮಶಾನ, ಖರಸ್ಥಾನಗಳು ಹಾಗೂ ನಮೂದು ಸಂಖ್ಯೆ 45ರಲ್ಲಿ ಭೂಮಿ, ಭೂಮಿ ಅಳತೆ, ಭೂ ದಾಖಲೆಗಳು ವಿಷಯಕ್ಕೆ ಒಳಪಟ್ಟಿದೆ. ಹೀಗಾಗಿ ಈ ಕುರಿತು ತಿದ್ದುಪಡಿ ತರುವ ಅಧಿಕಾರಕ್ಕೆ ಕೇಂದ್ರ ಸರ್ಕಾರಕ್ಕೆ ಇರುವುದಿಲ್ಲ.
ಈ ತಿದ್ದುಪಡಿ ಮೂಲಕ ಉದ್ದೇಶಿತ ವಕ್ಫ್ ಕಾಯ್ದೆಯ ತಿದ್ದುಪಡಿಯು ರಾಜ್ಯ ಸರ್ಕಾರದ ಕಾರ್ಯಾಂಗ ಮತ್ತು ಶಾಸನಾತ್ಮಕ ಅಧಿಕಾರ ವ್ಯಾಪ್ತಿಯನ್ನು ಕಬಳಿಸುತ್ತಿದೆ ಮತ್ತು ಮೊಟಕುಗೊಳಿಸುತ್ತದೆ. ಈ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದ್ದು ಸಂವಿಧಾನ ಬಾಹಿರವಾಗಿದೆ. ಸಂವಿಧಾನದಲ್ಲಿ ಪ್ರದಿಪಾದಿಸಿರುವ ಜ್ಯಾತ್ಯತೀತ ತತ್ವಗಳಿಗೆ ವಿರುದ್ಧವಾದ ದೃಷ್ಟಿಕೋನ ಹೊಂದಿದೆ. ಹೀಗಾಗಿ ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ತಕ್ಷಣ ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿದೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))