32 ಲಕ್ಷ ಅನಧಿಕೃತ ನಿವೇಶನಗಳಿಗೆ ಬಿ ಖಾತಾ - ಮಹತ್ವದ ನಿರ್ಧಾರ : ಕಂದಾಯ ಸಚಿವ ಕೃಷ್ಣ ಬೈರೇಗೌಡ

| N/A | Published : Jan 28 2025, 09:59 AM IST

Krishna Byre Gowda

ಸಾರಾಂಶ

 30 ರಿಂದ 32 ಲಕ್ಷ ನಿವೇಶನ-ಅಸ್ತಿಗಳಿಗೆ ಯಾವುದೇ ಎಲೆಕ್ಟ್ರಾನಿಕ್‌ ದಾಖಲೆ (ಇ-ದಾಖಲೆ) ಇಲ್ಲ. ಈ ಎಲ್ಲಾ ಆಸ್ತಿಗಳಿಗೂ ಒಂದು ಬಾರಿಯ ಪರಿಹಾರವಾಗಿ ಎಲೆಕ್ಟ್ರಾನಿಕ್‌ ಬಿ-ಖಾತಾ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

 ಬೆಂಗಳೂರು : ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ರಾಜ್ಯದ ಇತರೆ ನಗರ ಪ್ರದೇಶ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 30 ರಿಂದ 32 ಲಕ್ಷ ನಿವೇಶನ-ಅಸ್ತಿಗಳಿಗೆ ಯಾವುದೇ ಎಲೆಕ್ಟ್ರಾನಿಕ್‌ ದಾಖಲೆ (ಇ-ದಾಖಲೆ) ಇಲ್ಲ. ಈ ಎಲ್ಲಾ ಆಸ್ತಿಗಳಿಗೂ ಒಂದು ಬಾರಿಯ ಪರಿಹಾರವಾಗಿ ಎಲೆಕ್ಟ್ರಾನಿಕ್‌ ಬಿ-ಖಾತಾ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಫೆ.10ರ ಒಳಗಾಗಿ ಈ ಬಗ್ಗೆ ಸುತ್ತೋಲೆ ಹೊರಡಿಸಲಿದ್ದು, ಮೂರು ತಿಂಗಳಲ್ಲಿ ಅಭಿಯಾನ ರೂಪದಲ್ಲಿ ಖಾತಾ ವಿತರಣೆ ಮಾಡಬೇಕು. ನಗರಸಭೆ, ಪುರಸಭೆ ಅಧಿಕಾರಿಗಳೇ ಮನೆ-ಮನೆಗೂ ಹೋಗಿ ಬಿ ಖಾತಾ ನೀಡಬೇಕು. ಇದೆಲ್ಲದರ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ ಎಂದು ಹೇಳಿದರು.

ಬಳಿಕ ಸುದ್ದಿಗೋಷ್ಠಿ ನಡೆಸಿದ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.7ರಂದು ಸಭೆ ನಡೆಸಿ ಫೆ.10 ರಿಂದ ದಾಖಲೆ ಇಲ್ಲದ ನಿವೇಶನಗಳ ಮಾಲೀಕರಿಗೆ ಒಮ್ಮೆ ಇ-ಆಸ್ತಿ ನಮೂದಿಸಿ ಬಿ-ಖಾತಾ ಅಥವಾ ಸಮಾನಾಂತರ ದಾಖಲೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಹೀಗಾಗಿ ಸೋಮವಾರ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸರ್ಕಾರ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಫೆ.10ರೊಳಗೆ ಸುತ್ತೋಲೆ ಹೊರಡಿಸಿ ಗರಿಷ್ಠ ಮೂರು ತಿಂಗಳೊಳಗೆ ಅಭಿಯಾನ ಮಾದರಿಯಲ್ಲಿ ಬಾಕಿ ಇರುವ ಎಲ್ಲಾ ಆಸ್ತಿಗಳಿಗೆ ಬಿ-ಖಾತಾ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿ-ಖಾತಾ ಇರುವುದಿಲ್ಲ: ಅನಧಿಕೃತ ನಿವೇಶನಗಳ ಬಗ್ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಹೀಗಾಗಿ ನಾವು ಅದನ್ನು ಪಾಲಿಸಲೇಕಾದ ತುರ್ತು ಎದುರಾಗಿದೆ. ಹೀಗಾಗಿ ಎಷ್ಟು ನಿವೇಶನ ಇವೆ ಎಂದು ಗುರುತಿಸಿ ಸರ್ಕಾರವೇ ಬಿ-ಖಾತಾ ಮಾಡಿಕೊಡಲಿದೆ. ಬಳಿಕ ರಾಜ್ಯದಲ್ಲಿ ಬಿ-ಖಾತಾ ಇರುವುದಿಲ್ಲ. ಎ-ಖಾತಾ ಮಾತ್ರ ಇರಲಿದ್ದು, ಮುಂದಿನ ದಿನಗಳಲ್ಲಿ ಅನಧಿಕೃತ ನಿವೇಶನಗಳಿಗೆ ಅವಕಾಶವೇ ಇಲ್ಲ. ನಗರ ವ್ಯಾಪ್ತಿಯಲ್ಲಿ ಈ ಅಭಿಯಾನ ಮುಗಿಯುತ್ತಿದ್ದಂತೆ ಗ್ರಾಪಂ ವ್ಯಾಪ್ತಿಯಲ್ಲೂ ಇದೇ ಮಾದರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯಕ್ಕಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯಕ್ಕೆ ಕಂದಾಯ ನಿವೇಶನಗಳಿಗೆ ಇ-ಖಾತಾ (ಬಿ ನಮೂನೆ) ನೀಡಲಾಗುವುದಿಲ್ಲ. ನಗರ ಪ್ರದೇಶ, ಗ್ರಾಪಂ ಮಟ್ಟದಲ್ಲಿನ ಅಭಿಯಾನ ಪೂರ್ಣಗೊಂಡ ಬಳಿಕ ಬಿಬಿಎಂಪಿಯಲ್ಲಿ ಯಾವ ರೀತಿಯಲ್ಲಿ ಮಾಡಬೇಕೆಂಬ ಬಗ್ಗೆ ಚರ್ಚಿಸಲಾಗುವುದು. ಸದ್ಯಕ್ಕೆ ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದರ್ಖಾಸ್ತು ಪೋಡಿ ಅಭಿಯಾನ: ದಶಕಗಳ ಹಿಂದೆ ಜಮೀನು ಮಂಜೂರು ಆಗಿದ್ದರೂ ಸರಿಯಾದ ದಾಖಲೆ ಇಲ್ಲದವರಿಗಾಗಿ ಡಿಸೆಂಬರ್ ಮೊದಲ ವಾರದಿಂದಲೇ ದರ್ಖಾಸ್ತು ಪೋಡಿ ಅಭಿಯಾನ ಶುರುವಾಗಿದ್ದು, 26 ಸಾವಿರ ಮಂಜೂರಿದಾರರ ಜಮೀನುಗಳನ್ನು ಸರ್ವೇಗೆ ಅನುಮತಿ ನೀಡಲಾಗಿದೆ. ಈ ಪೈಕಿ 5 ಸಾವಿರ ಜನರಿಗೆ ಈಗಾಗಲೇ ಸರ್ವೇ ಮುಗಿಸಿದ್ದೇವೆ. ಈ ಎಲ್ಲರಿಗೂ ಹೊಸ ಪಹಣಿ ಹಾಗೂ ನಕ್ಷೆ ನೀಡಲಾಗುವುದು. ಇದು ಜಮೀನಿನ ಮಾಲೀಕತ್ವದ ಗ್ಯಾರಂಟಿಯಾಗಿದ್ದು, ಈ ಅಭಿಯಾನಕ್ಕೆ ನನ್ನ ಭೂಮಿ ಎಂದು ಹೆಸರಿಡಲಾಗಿದೆ ಎಂದು ಮಾಹಿತಿ ನೀಡಿದರು.

4.5 ಕೋಟಿ ರು. ಪ್ರೋತ್ಸಾಹ ಧನ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆಧಾರ್ ಸೀಡಿಂಗ್ ಕಾರ್ಯಕ್ರಮದ ಅಡಿ ರಾಜ್ಯದಲ್ಲಿ 2.12 ಕೋಟಿ ಜಮೀನುಗಳನ್ನು ಆರ್‌ಟಿಸಿ ಜೊತೆಗೆ ಆಧಾರ್ ಜೋಡಿಸಲಾಗಿದೆ. ಇದನ್ನೆಲ್ಲಾ ಮಾಡಿದ್ದು ಗ್ರಾಮ ಸಹಾಯಕರು ಮತ್ತು ಗ್ರಾಮ ಲೆಕ್ಕಿಗರು. ಹೀಗಾಗಿ ಗ್ರಾಮ ಸಹಾಯಕರು ಹಾಗೂ ಗ್ರಾಮ ಲೆಕ್ಕಿಗರಿಗೆ 4.5 ಕೋಟಿ ರೂ. ಪ್ರೊತ್ಸಾಹ ಧನ ನೀಡಬೇಕು ಎಂದು ತೀರ್ಮಾನಿಸಲಾಗಿದೆ ಎಂದರು.

ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಹಾಗೂ ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಸೇರಿ ಹಲವರು ಹಾಜರಿದ್ದರು.

ಡಿಸಿಗಳ ಬಗ್ಗೆ ಸಚಿವ ಬೇಸರ

ವಿವಿಧ ಯೋಜನೆಗಳ ಅನುಷ್ಠಾನ ಕುರಿತ ನಿಧಾನಗತಿಗೆ ಬೇಸರ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ, ಕಂದಾಯ ಇಲಾಖೆ ಕೆಲಸಗಳನ್ನು ಜಿಲ್ಲಾಧಿಕಾರಿಗಳೇ ನಿರ್ವಹಿಸದಿದ್ದರೆ ಯಾರನ್ನು ಕೇಳಬೇಕು. ನನ್ನನ್ನು ಕೇರ್‌ ಮಾಡದಿದ್ದರೂ ಪರವಾಗಿಲ್ಲ, ಬಡ ಜನರ ಕೆಲಸ ಮಾಡಿ ಎಂದು ಹೇಳಿದರು.