ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿತು.
ಅಲ್ಲದೆ, ತೀರ್ಪು ಪ್ರಕಟಿಸುವವರೆಗೂ ಪ್ರಕರಣ ಕುರಿತ ತನಿಖೆಯ ಅಂತಿಮ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ಲೋಕಾಯುಕ್ತ ಪೊಲೀಸರಿಗೆ ನ್ಯಾಯಪೀಠ ನಿರ್ದೇಶಿಸಿ, ಲೋಕಾಯುಕ್ತ ವಿಚಾರಣಾ ಪ್ರಕ್ರಿಯೆಯನ್ನೂ ಮುಂದೂಡಿದೆ.
ಇದಕ್ಕೂ ಮುನ್ನ ಅರ್ಜಿದಾರ ಸ್ನೇಹಮಯಿ ಕೃಷ್ಣ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಂಡಿಸಿ, ಮುಖ್ಯಮಂತ್ರಿ ಅವರ ಪತ್ನಿಗೆ ನಿವೇಶನ ಮಂಜೂರು ಮಾಡಿರುವಂಥ ಅಕ್ರಮದ ಕುರಿತು ಸಿಬಿಐನಂಥ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ. ಸಿಬಿಐಗೆ ತನಿಖೆ ವಹಿಸುವುದಕ್ಕೆ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಆರೋಪಿಗಳಿಗೆ ತನಿಖಾ ಸಂಸ್ಥೆಯನ್ನು ಆಯ್ಕೆಮಾಡಿಕೊಳ್ಳಲು ಅವಕಾಶವಿಲ್ಲ. ಸರ್ಕಾರದ ಉನ್ನತ ಸ್ಥಾನದಲ್ಲಿರುವವರ ವಿರುದ್ಧ ತನಿಖೆ ನಡೆಸಬೇಕಾದಲ್ಲಿ ಸ್ವತಂತ್ರ ಸಂಸ್ಥೆಯಿಂದಲೇ ತನಿಖೆ ನಡೆಸಬೇಕು. ಉನ್ನತ ಹುದ್ದೆಯಲ್ಲಿರುವವರ ವಿರುದ್ಧ ಪ್ರಕರಣಗಳನ್ನು ಅವರ ಅಧೀನ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದರು.
ರಾಜ್ಯ ಸರ್ಕಾರ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿ, ಪ್ರಕರಣದಲ್ಲಿ ಮುಖ್ಯಮಂತ್ರಿ ಆರೋಪಿಯಾಗಿರುವ ಕಾರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರು ಕೋರುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆ ಮುಖ್ಯಮಂತ್ರಿಗಳನ್ನು ವಿಚಾರಣೆ ನಡೆಸಬಹುದು. ಅಲ್ಲದೆ, ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತಾದರೆ ಅವರಿಗೆ ಶಿಕ್ಷೆಯೂ ವಿಧಿಸಬಹುದು. ಲೋಕಾಯುಕ್ತ ಕಾಯ್ದೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆ ಮಾಡುವುದಕ್ಕೆ ಅವಕಾಶವಿದೆ. ಆದರೆ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಅಗತ್ಯವಾದ ಅಂಶಗಳೇ ಇಲ್ಲ ಎಂದು ವಿವರಿಸಿದರು.
ಅಲ್ಲದೆ, ಲೋಕಾಯುಕ್ತ ತನಿಖಾ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯ ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಅಗತ್ಯವೆನಿಸಿದರೆ ಹೆಚ್ಚಿನ ತನಿಖೆ ನಡೆಸಲು ನಿರ್ದೇಶಿಸಬಹುದು. ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರದ ಅಧೀನದಲ್ಲಿರುವುದರಿಂದ ಕಳಂಕದಿಂದ ಕೂಡಿದೆ ಎನ್ನುವುದಾದರೆ ಸಿಬಿಐ ಸಹ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದು ಹೇಳಬೇಕಾಗುತ್ತದೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಡಾ। ಅಭಿಷೇಕ ಮನು ಸಿಂಘ್ವಿ, ಪ್ರಕರಣವನ್ನು ಯಾವ ತನಿಖಾ ಸಂಸ್ಥೆ ತನಿಖೆ ನಡೆಸಬೇಕು ಎಂಬುದನ್ನು ಆರೋಪಿಗಳು ನಿರ್ಧರಿಸಲು ಸಾಧ್ಯವಿಲ್ಲ ಎಂದಾದರೆ, ದೂರುದಾರರು ಸಹ ನಿರ್ದಿಷ್ಟ ಸಂಸ್ಥೆಯಿಂದ ತನಿಖೆ ನಡೆಸಲು ಕೋರಲು ಅವಕಾಶವಿಲ್ಲ. ಅರ್ಜಿದಾರರೇ ಪ್ರಕರಣ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಇದೀಗ ಸಿಬಿಐ ತನಿಖೆಗೆ ಕೋರುತ್ತಿದ್ದಾರೆ. ಅಂದರೆ ಅವರಿಗೆ ಯಾರು ತನಿಖೆ ನಡೆಸಬೇಕು ಎಂಬ ಬಗ್ಗೆಯೇ ಗೊಂದಲವಿದೆ. ಅಸಾಧಾರಣ ಸಂದರ್ಭಗಳಿದ್ದಲ್ಲಿ ಮಾತ್ರ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಬಹುದು. ಆದರೆ, ಪ್ರಕರಣದಲ್ಲಿ ಅಂಥ ಅಸಾಧಾರಣ ಸಂದರ್ಭಗಳು ಇಲ್ಲವಾಗಿದ್ದು, ಅರ್ಜಿದಾರರ ಮನವಿ ತಿರಸ್ಕರಿಸಬೇಕು ಎಂದು ಕೋರಿದರು.
ಸಿದ್ದರಾಮಯ್ಯ ಪತ್ನಿ ಪಾರ್ವತಿ ಪರ ಹಿರಿಯ ವಕೀಲರ ರವಿವರ್ಮ ಕುಮಾರ್, ಸಿಬಿಐ ಪ್ರಧಾನಮಂತ್ರಿಗಳ ಅಧಿಕಾರದ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಪ್ರಧಾನ ಮಂತ್ರಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ನನ್ನ ಉದ್ದೇಶ ಎಂಬುದಾಗಿ ಘೋಷಣೆ ಮಾಡಿದ್ದಾರೆ. ರಾಜಕೀಯ ಉದ್ದೇಶದಿಂದ ಲೋಕಾಯುಕ್ತ ತನಿಖೆಯಿಂದ ತಪ್ಪಿಸಿ ಸಿಬಿಐಗೆ ವಹಿಸಲು ಶ್ರಮಿಸಲಾಗುತ್ತಿದೆ. ಇನ್ನೂ ಪಾರ್ವತಿ ಅವರು ಪ್ರಕರಣದಲ್ಲಿ ಎಲ್ಲೂ ಭಾಗಿಯಾಗಿಲ್ಲ. ಆದರೂ ಅವರನ್ನು ಪ್ರಕರಣದಲ್ಲಿ ಅನಗತ್ಯವಾಗಿ ಸೇರಿಸಲಾಗಿದೆ. ಹೀಗಾಗಿ, ಪಾರ್ವತಿ ಅವರ ವಿರುದ್ಧದ ಆರೋಪಗಳನ್ನು ಕೈಬಿಡಬೇಕು. ಪ್ರಕರಣವನ್ನು ಸಿಬಿಐಗೆ ವಹಿಸದೆ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಬಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ಆರೋಪಿ ಮುಖ್ಯಮಂತ್ರಿ ಆಗಿರುವ ಕಾರಣ ಲೋಕಾಯುಕ್ತ ಪೊಲೀಸರಿಂದ ನಿಷ್ಪಕ್ಷಪಾತದ ತನಿಖೆ ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದ ಕಪೋಲಕಲ್ಪಿತ. ಈ ಹಿಂದೆ ಲೋಕಾಯುಕ್ತ ತನಿಖೆಗೆ ಕೋರಿದ್ದ ಅರ್ಜಿದಾರರು ಇದೀಗ ಸಿಬಿಐ ತನಿಖೆಗೆ ಕೋರುತ್ತಿದ್ದಾರೆ. ಅಲ್ಲದೆ, ಜಾರಿ ನಿರ್ದೇಶನಾಲಯವನ್ನು ಪ್ರತಿವಾದಿಯನ್ನಾಗಿಸುವಂತೆ ಕೋರಿದ್ದಾರೆ. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.
ವಿವಾದಿತ ಜಮೀನಿನ ಮೂಲ ಮಾಲೀಕರಾದ ದೇವರಾಜು ಪರ ವಕೀಲರು, ನಮ್ಮ ಕಕ್ಷಿದಾರರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಪ್ರಕರಣದಲ್ಲಿ ಅವರನ್ನು ಎಳೆದು ತರಲಾಗುತ್ತಿದೆ. ನಿವೇಶನ ಹಂಚಿಕೆಯಾಗಿ 15 ವರ್ಷಗಳ ಬಳಿಕ ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿದ್ದಾರೆ. ಪ್ರಕರಣದ ಮೊದಲ (ಸಿದ್ದರಾಮಯ್ಯ) ಆರೋಪಿಯೊಂದಿಗೆ ತಮ್ಮ ಕಕ್ಷಿದಾರರಿಗೆ ನಮಗೆ ಯಾವುದೇ ಸಂಬಂಧವಿಲ್ಲ. ಹಾಲಿ ಮುಖ್ಯಮಂತ್ರಿಗಳನ್ನು ಮುಜುಗರಕ್ಕೀಡು ಮಾಡುವ ದುರುದ್ದೇಶದಿಂದಲೇ ಅರ್ಜಿದಾರರು ಈ ಅರ್ಜಿ ಸಲ್ಲಿಸಿದ್ದು, ಅವರ ಮನವಿ ಪುರಸ್ಕರಿಸಬಾರದು ಎಂದು ಕೋರಿದರು.
ಮುಡಾ ಮಾಜಿ ಆಯುಕ್ತ ನಟೇಶ್ ವಿರುದ್ಧದ ಇ.ಡಿ ನೋಟಿಸ್ ರದ್ದು
ಬೆಂಗಳೂರು : ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣಕ್ಕೆ ಸಂಬಂಧಿಸಿ ಮುಡಾ ಮಾಜಿ ಆಯುಕ್ತ ಡಾ.ಡಿ.ಬಿ.ನಟೇಶ್ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ) ನೀಡಿದ್ದ ನೋಟಿಸ್ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಪ್ರಕರಣ ಸಂಬಂಧ ತನ್ನ ವಿರುದ್ಧದ ಇ.ಡಿ. ನೋಟಿಸ್ ರದ್ದುಪಡಿಸುವಂತೆ ಕೋರಿ ನಟೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ಸೋಮವಾರ ಈ ಆದೇಶ ಮಾಡಿದೆ. ವಿಸ್ತೃತ ಆದೇಶ ಲಭ್ಯವಾಗಿಲ್ಲ.
ಮುಡಾ ಪ್ರಕರಣದಲ್ಲಿ ತಮ್ಮನ್ನು ಎಲ್ಲೂ ಆರೋಪಿಯಾಗಿ ತೋರಿಸಿಲ್ಲ. ಆದರೂ ತಮ್ಮ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ವಶಪಡಿಸಿಕೊಳ್ಳಲಾಗಿದೆ. ಜತೆಗೆ ಇ.ಡಿ ನಿರ್ದೇಶನದಂತೆ ತಾನು ಹೇಳಿಕೆ ನೀಡಿದ್ದೇನೆ. ಆದರೆ ಮತ್ತೆ ಇ.ಡಿ ತಮಗೆ ನೋಟಿಸ್ ಜಾರಿಗೊಳಿಸಿದೆ. ಆದ್ದರಿಂದ ನೋಟಿಸ್ ರದ್ದುಗೊಳಿಸಬೇಕು. ಪ್ರಕರಣದಲ್ಲಿ 2024ರ ಅ.28 ಹಾಗೂ 29 ರಂದು ಇ.ಡಿ ತಮ್ಮ ಹೇಳಿಕೆ ಪಡೆದಿರುವುದು ಕಾನೂನುಬಾಹಿರ ಎಂಬುದಾಗಿ ಘೋಷಿಸಬೇಕು ಎಂದು ನಟೇಶ್ ಅರ್ಜಿಯಲ್ಲಿ ಕೋರಿದ್ದರು.