ಬೆಂಗಳೂರು: ಕುಡಿಯುವ ನೀರಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ!

| Published : Jun 08 2024, 09:55 AM IST

Water glass photo
ಬೆಂಗಳೂರು: ಕುಡಿಯುವ ನೀರಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನ 10 ಶುದ್ಧಕುಡಿಯುವ ನೀರಿನ ಘಟಕ ಹಾಗೂ ಕೊಳವೆ ಬಾವಿಯಿಂದ ಪೂರೈಕೆ ಆಗುವ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯ ಪತ್ತೆಯಾಗಿರುವ ಆತಂಕಕಾರಿ ವರದಿ ಬಂದ ಹಿನ್ನೆಲೆಯಲ್ಲಿ ಆ ಘಟಕಗಳು ಮತ್ತು ಕೊಳವೆ ಬಾವಿಯಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ರಾಜಧಾನಿ ಬೆಂಗಳೂರಿನ 10 ಶುದ್ಧಕುಡಿಯುವ ನೀರಿನ ಘಟಕ ಹಾಗೂ ಕೊಳವೆ ಬಾವಿಯಿಂದ ಪೂರೈಕೆ ಆಗುವ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯ ಪತ್ತೆಯಾಗಿರುವ ಆತಂಕಕಾರಿ ವರದಿ ಬಂದ ಹಿನ್ನೆಲೆಯಲ್ಲಿ ಆ ಘಟಕಗಳು ಮತ್ತು ಕೊಳವೆ ಬಾವಿಯಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.

ಬೊಮ್ಮನಹಳ್ಳಿಯಲ್ಲಿ 5, ಪೂರ್ವ ಹಾಗೂ ದಕ್ಷಿಣ ವಲಯದ ತಲಾ 2 ಹಾಗೂ ಮಹದೇವಪುರ ವಲಯದ ಒಂದು ಕಡೆ ಬ್ಯಾಕ್ಟೀರಿಯಾ ಕಂಡು ಬಂದಿದೆ. ಈ ನೀರಿನ ಘಟಕ ಹಾಗೂ ಕೊಳವೆ ಬಾವಿಗಳನ್ನು ಬಿಬಿಎಂಪಿಯಿಂದ ಕ್ಲೋರಿನೇಷನ್‌ ಮಾಡಿ ಅಪಾಯಕಾರಿ ಬ್ಯಾಕ್ಟೀರಿಯಗಳನ್ನು ನಾಶ ಪಡಿಸಲಾಗಿದೆ.

ಕಳೆದ ಮೇ ನಲ್ಲಿ ರಾಜ್ಯದ ಕೆಲವು ಕಡೆ ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಮಿಶ್ರಣಗೊಂಡ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಗಳು, ಬೆಂಗಳೂರಿಗೆ ಪೂರೈಕೆ ಆಗುವ ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು. ಜತೆಗೆ, ನೀರಿನಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ, ಬಿಬಿಎಂಪಿ ವ್ಯಾಪ್ತಿಯ ಕೊಳವೆ ಬಾವಿಯಿಂದ ಪೂರೈಕೆಯಾಗುವ ನೀರು, ಶುದ್ಧಕುಡಿಯುವ ನೀರಿನ ಘಟಕದ ನೀರು ಹಾಗೂ ಬೆಂಗಳೂರು ಜಲಮಂಡಳಿಯಿಂದ ಸರಬರಾಜು ಮಾಡುವ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಮಧ್ಯಂತರ ವರದಿಯಲ್ಲಿ ಕಲುಷಿತ ಪತ್ತೆ:

ನಗರದಲ್ಲಿ 1,696 ಕೊಳವೆ ಬಾವಿ ಹಾಗೂ 1384 ಶುದ್ಧಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 217 ಕೊಳವೆ ಬಾವಿ ಹಾಗೂ 1218 ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಇದರಲ್ಲಿ 474 ಲ್ಯಾಬ್‌ನ ಪರೀಕ್ಷೆ ವರದಿ ಲಭ್ಯವಾಗಿದ್ದು, ಈ ಪೈಕಿ 10 ಮೂಲಗಳ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಗಳು ಇರುವುದು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇನ್ನೂ 805 ಕಡೆಯ ನೀರಿನ ಪರೀಕ್ಷಾ ವರದಿ ಬರಬೇಕಿದೆ. ಇನ್ನಷ್ಟು ಕೊಳವೆ ಬಾವಿ ಹಾಗೂ ಶುದ್ಧಕುಡಿಯುವ ನೀರಿನ ಘಟಕದ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ವರದಿ ಬರುವ ಆತಂಕ ಇದೆ.

ಮೈಕ್ರೋ ಬಯೋಲಾಜಿಕಲ್‌ ಟೆಸ್ಟ್‌:

ನೀರಿನ ಗುಣಮಟ್ಟ ಪರೀಕ್ಷೆಗೆ ಸಲ್ಲಿಕೆಯಾದ ಮಾದರಿಯ ವರದಿ ಲಭ್ಯವಾಗುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ, ಜತೆಗೆ, ತ್ವರಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಲು ಬಿಬಿಎಂಪಿ ಆರೋಗ್ಯ ವಿಭಾಗವೂ ‘ಎಚ್‌ 2 ಎಸ್‌’ ಕಿಟ್‌ ಬಳಕೆ ಮಾಡಿ ಮೈಕ್ರೋ ಬಯೋಲಾಜಿಕಲ್‌ ಟೆಸ್ಟ್‌ ನಡೆಸಲು ಮುಂದಾಗಿದೆ. ಈ ಪರೀಕ್ಷೆಯಲ್ಲಿ ನೀರಿನ ಗುಣಮಟ್ಟದಲ್ಲಿ ಲೋಪ ಕಂಡು ಬಂದರೆ ನಂತರ ಲ್ಯಾಬ್‌ ಗೆ ನೀರಿನ ಮಾದರಿ ಕಳುಹಿಸುವುದಕ್ಕೆ ತೀರ್ಮಾನಿಸಲಾಗಿದೆ.

3 ಸಾವಿರ ಪರೀಕ್ಷೆ

ಕೊಳವೆ ಬಾವಿ ಹಾಗೂ ಶುದ್ಧಕುಡಿಯುವ ನೀರಿನ ಘಟಕಗಳು, ನೀರು ಶೇಖರಣೆ ಕೇಂದ್ರಗಳು ಸೇರಿದಂತೆ ಸುಮಾರು ಮೂರು ಸಾವಿರ ಮೈಕ್ರೋ ಬಯೋಲಾಜಿಕಲ್‌ ಟೆಸ್ಟ್‌ ನಡೆಸಲು ತೀರ್ಮಾನಿಸಲಾಗಿದೆ. ವಲಯ ಮಟ್ಟದಲ್ಲಿ ಕಿಟ್‌ ಖರೀದಿಗೆ ಸೂಚಿಸಲಾಗಿದೆ. ಒಂದು ಕಿಟ್‌ಗೆ 50 ರು, ಆಗಬಹುದು ಎಂದು ಅಂದಾಜಿಸಲಾಗಿದೆ. ಒಂದು ವಾರದಲ್ಲಿ ಪರೀಕ್ಷೆ ನಡೆಸುವುದಕ್ಕೆ ಸಮಯ ನೀಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.

---ನೀರು ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದ್ದು, ಸಮಸ್ಯೆ ಕಂಡು ಬಂದರೆ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇದೀಗ ಮುಂಗಾರು ಮಳೆ ಆರಂಭಗೊಂಡಿದ್ದು, ನೀರು ಪೂರೈಕೆಯ ಮೂಲಗಳಿಗೆ ಕಲುಷಿತ ನೀರು ಸೇರುವ ಸಾಧ್ಯತೆ ಇದೆ. ಹೀಗಾಗಿ, ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ಕುದಿಸಿ ಕುಡಿಯುವುದು ಉತ್ತಮ.

-ಸುರಲ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತ, ಬಿಬಿಎಂಪಿ ಆರೋಗ್ಯ ವಿಭಾಗ.