ಸಾರಾಂಶ
ಬಿಜೆಪಿಯ ಭಿನ್ನಮತೀಯ ಮುಖಂಡರ ಬಣ, ಇದೀಗ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಪ್ರಜೆಗಳ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಬೆಂಗಳೂರು : ವಕ್ಫ್ ಆಸ್ತಿ ವಿವಾದವನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿ ಯಶಸ್ವಿಯಾಗಿದ್ದ ರಾಜ್ಯ ಬಿಜೆಪಿಯ ಭಿನ್ನಮತೀಯ ಮುಖಂಡರ ಬಣ, ಇದೀಗ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಪ್ರಜೆಗಳ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಇದು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನಡೆಸುತ್ತಿರುವ ಪರೋಕ್ಷ ಹೋರಾಟದ ಒಂದು ಭಾಗವೇ. ರಾಜ್ಯ ಬಿಜೆಪಿ ನಾಯಕತ್ವ ನಿಜವಾದ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡುತ್ತಿಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶವಿದೆ ಎನ್ನಲಾಗಿದೆ.
ಪಾಕಿಸ್ತಾನದ ನಿವಾಸಿಗಳನ್ನು ಭಾರತದಿಂದ ಖಾಲಿ ಮಾಡಿಸಲು ತೀರ್ಮಾನಿಸಿರುವ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವ ಸಲುವಾಗಿ ರಾಜ್ಯದಲ್ಲಿ ವಾರ್ ರೂಂ ಆರಂಭಿಸಲು ಬಿಜೆಪಿ ಭಿನ್ನಮತೀಯ ಮುಖಂಡರ ಬಣ ತೀರ್ಮಾನಿಸಿದೆ.
ಬಿಜೆಪಿ ಚಿಹ್ನೆಯಡಿ ಹೋರಾಟ ನಡೆಸಲು ಮುಂದಾಗಿದ್ದು, ವಾರ್ ರೂಂ ಮೂಲಕ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವವರು, ಪಾಕಿಸ್ತಾನ ಪ್ರಜೆಗಳು, ಬಾಂಗ್ಲಾದೇಶದವರ ಬಗ್ಗೆ ಸಮಗ್ರ ಮಾಹಿತಿ ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಒದಗಿಸಲು ನಿರ್ಧರಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಜತೆ ಕೈಬಲಪಡಿಸಲು ಬಿಜೆಪಿ ಬಂಡಾಯ ನಾಯಕರ ಪಡೆ ಮುಂದಾಗಿದೆ.
ಗುರುವಾರ ನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹುಟ್ಟುಹಬ್ಬದ ಅಂಗವಾಗಿ ಒಂದೆಡೆ ಸೇರಿದ ಬಿಜೆಪಿ ಬಂಡಾಯ ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್‌ಸಿಂಹ ಸೇರಿ ಇತರೆ ಮುಖಂಡರು ಭಾಗವಹಿಸಿದ್ದರು. ಇದೇ ವೇಳೆ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಮತ್ತು ಕೇಂದ್ರದ ನಿಲುವಿನ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಸಂಖ್ಯೆಗೆ ಕರೆಮಾಡಿ
ರಾಜ್ಯದಲ್ಲಿ ನೆಲೆಸಿರುವ ಪಾಕ್ ಮತ್ತು ಬಾಂಗ್ಲಾದ ಅಕ್ರಮ ವಲಸಿಗರ ವಿರುದ್ಧ ಮಾಹಿತಿ ಇದ್ದರೆ 9035675734 ಮತ್ತು 8217686764 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಬಿಜೆಪಿ ಚಿಹ್ನೆಯಲ್ಲೇ ಹೋರಾಟ-ಲಿಂಬಾವಳಿ:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ಕಾಶ್ಮೀರದಲ್ಲಿ ನಡೆದ ದಾಳಿ ವಿಚಾರದಲ್ಲಿ ದೇಶದ ಜನರ ಆಕ್ರೋಶ ಹೆಚ್ಚಾಗಿದೆ. ಕೇಂದ್ರದ ಎಲ್ಲಾ ನಿರ್ಧಾರಕ್ಕೆ ಪ್ರತಿಪಕ್ಷಗಳು ಸಹ ಬೆಂಬಲ ನೀಡುತ್ತಿದೆ. ಇದು ಒಗ್ಗಟ್ಟಿನ ಸಂಕೇತ. ಪಾಕಿಸ್ತಾನದವರು ದೇಶದಲ್ಲಿದ್ದರೆ ಹಿಂತಿರುಗುವಂತೆ ಕೇಂದ್ರ ಹೇಳಿದೆ. ರಾಜ್ಯದಲ್ಲಿಯೂ ಪಾಕಿಸ್ತಾನಿ, ಬಾಂಗ್ಲಾದೇಶಿಗರು ಇದ್ದಾರೆ. ಇವರ ಬಗ್ಗೆ ಮಾಹಿತಿ ಪಡೆಯಲು ವಾರ್ ರೂಂ ಆರಂಭಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಈಗಾಗಲೇ ವಕ್ಫ್ ಹೋರಾಟ ಮಾಡಿದ್ದೇವೆ. ಅದೇ ರೀತಿ ಅಕ್ರಮ ಪಾಕಿಸ್ತಾನ ಮತ್ತು ಬಾಂಗ್ಲಾ ವಲಸಿಗರ ಹೊರ ಹಾಕಲು ನಮ್ಮ ಅಳಿಲು ಸೇವೆ ಮಾಡುತ್ತೇವೆ. ಬಂದ ಮಾಹಿತಿ ಆಧರಿಸಿ ಸ್ಥಳಕ್ಕೆ ಮುಖಂಡರು ಭೇಟಿ ನೀಡಿ ಸ್ಥಳೀಯರ ಜೊತೆ ಚರ್ಚೆ ಮಾಡುತ್ತೇವೆ. ಯಾರು ರಾಷ್ಟ್ರಭಕ್ತರಿದ್ದಾರೋ ಅವರು, ನಮ್ಮ ಜತೆ ಕೈ ಜೋಡಿಸಬಹುದು. ನಮ್ಮ ತಂಡ ಸಂಗ್ರಹಿಸುವ ಮಾಹಿತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೀಡುತ್ತೇವೆ. ಉಗ್ರ ಚಟುವಟಿಕೆಗೆ ಬೆಂಬಲ ನೀಡುವವರ ಬಗ್ಗೆ ಮಾಹಿತಿ ಇದ್ದರೂ ಮಾಹಿತಿ ನೀಡಬಹುದು. 9035675734 ಮತ್ತು 8217686764 ಸಂಖ್ಯೆ ವಾರ್ ರೂಂ ನಂಬರ್ ಆಗಿದ್ದು, ಅಕ್ರಮ ವಲಸಿಗರ ಕುರಿತು ಈ ಸಂಖ್ಯೆಗೆ ಮಾಹಿತಿ ನೀಡಬಹುದು. ಈ ಹೋರಾಟವನ್ನು ಬಿಜೆಪಿ ಚಿಹ್ನೆಯಡಿಯಲ್ಲಿಯೇ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿಗರು, ಬಾಂಗ್ಲಾದವರನ್ನು ರಾಜ್ಯದಿಂದ ಹೊರಹಾಕಬೇಕು. ಹೋಟೆಲ್, ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಸೇರಿ ವಿವಿಧ ಕೆಲಸಗಳನ್ನು ಮಾಡಿಕೊಂಡು ಅವರು ರಾಜ್ಯದಲ್ಲಿ ನೆಲೆಸಿದ್ದಾರೆ. ಇಂತಹವರನ್ನೆಲ್ಲಾ ಪತ್ತೆ ಮಾಡಿ ಹೊರಹಾಕಬೇಕಿದೆ ಎಂದು ಹೇಳಿದ ಅವರು, ಢಾಕಾದಲ್ಲಿ ಹಿಂದುಗಳ ಮೇಲೆ ದಾಳಿ ನಡೆಸಿದ ಬಳಿಕ ಪೆಹಲ್ಗಾಂನಲ್ಲಿ ಧರ್ಮ ಕೇಳಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಾರೆ. ಆದರೆ, ಹತ್ಯೆ ಮಾಡಿದವರೆಲ್ಲ ಮತ್ತೊಂದು ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂದರು.