ಧರ್ಮಸ್ಥಳ ಗ್ರಾಮ ಉತ್ಖನನಕ್ಕೆ ಬಿಜೆಪಿ ಕಿಡಿ

| N/A | Published : Aug 18 2025, 06:35 AM IST

Dharmasthala

ಸಾರಾಂಶ

‘ಧರ್ಮಸ್ಥಳ ಗ್ರಾಮದಲ್ಲಿ  ನೂರಾರು ಶವಗಳನ್ನು ಹೂತಿದ್ದೇನೆ’ ಎಂದು ಅನಾಮಿಕ ವ್ಯಕ್ತಿ ನೀಡಿದ ದೂರಿನ ಮೇರೆಗೆ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ಧರ್ಮಸ್ಥಳ ಗ್ರಾಮದಲ್ಲಿ ಅಸ್ಥಿಪಂಜರಗಳಿಗಾಗಿ ನಡೆದಿರುವ ಉತ್ಖನನ ಖಂಡಿಸಿ ಬಿಜೆಪಿ ನಾಯಕರು ಭಾನುವಾರ ಧರ್ಮಸ್ಥಳ ಚಲೋ ನಡೆಸಿದರು.

  ಬೆಳ್ತಂಗಡಿ/ಸಕಲೇಶಪುರ :  ‘ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ’ ಎಂದು ಅನಾಮಿಕ ವ್ಯಕ್ತಿ ನೀಡಿದ ದೂರಿನ ಮೇರೆಗೆ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ಧರ್ಮಸ್ಥಳ ಗ್ರಾಮದಲ್ಲಿ ಅಸ್ಥಿಪಂಜರಗಳಿಗಾಗಿ ನಡೆದಿರುವ ಉತ್ಖನನ ಖಂಡಿಸಿ ಬಿಜೆಪಿ ನಾಯಕರು ಭಾನುವಾರ ಧರ್ಮಸ್ಥಳ ಚಲೋ ನಡೆಸಿದರು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಶಾಸಕರು, ನಾಯಕರು, ಕಾರ್ಯಕರ್ತರು ಮಂಜುನಾಥೇಶ್ವರನಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ, ನಂತರ ಧರ್ಮಸ್ಥಳ ಧರ್ಮಾದಿಕಾರಿ ಡಾ। ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ವಿಜಯೇಂದ್ರ ‘ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಬಗ್ಗೆ ಕಳೆದ ಕೆಲವು ದಿನಗಳಿಂದ ಎಸ್‌ಐಟಿ ತನಿಖೆಯ ನೆಪದಲ್ಲಿ ನಡೆಯುತ್ತಿರುವ ಅಪಪ್ರಚಾರಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು. ವೃಥಾ ದೂರು ನೀಡಿರುವ ಮಾಸ್ಕ್ ಮ್ಯಾನ್‌ಗೆ ಶಿಕ್ಷೆ ವಿಧಿಸಬೇಕು. ಹಾಗೂ ಇತನ ಬೆನ್ನ ಹಿಂದಿರುವ ವ್ಯಕ್ತಿಗಳನ್ನು ಸರ್ಕಾರ ಪತ್ತೆಹಚ್ಚಬೇಕು’ ಎಂದು ಆಗ್ರಹಿಸಿದರು.

ಹೋರಾಟಕ್ಕೆ ಕಿಚ್ಚು:

ಶ್ರೀ ಕ್ಷೇತ್ರದ ತೇಜೋವಧೆ ನಡೆಯುತ್ತಿದೆ ಎಂದು ಆರೋಪಿಸಿ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಶನಿವಾರ 400 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿದ್ದರು. ಭಾನುವಾರ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಬಂದ ಬಿಜೆಪಿ ನಾಯಕರು ಹೋರಾಟಕ್ಕೆ ಕಿಚ್ಚು ಹಚ್ಚಿದರು. ಕ್ಷೇತ್ರದ ಮುಂಭಾಗ ಭಿತ್ತಿಪತ್ರ ಹಿಡಿದ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಯ ಮುಖಂಡರು ‘ನಮ್ಮ ಧರ್ಮ, ನಮ್ಮ ಹಕ್ಕು’, ‘ಶಿಕ್ಷಿಸಿ ಶಿಕ್ಷಿಸಿ ಹಿಂದೂ ವಿರೋಧಗಳನ್ನು ಶಿಕ್ಷಿಸಿ’ ಎನ್ನುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ಬಿವೈವಿ ಆಕ್ರೋಶ:

ದೇವರ ದರ್ಶನದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಜಯೇಂದ್ರ, ‘ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ಪ್ರಕರಣ ಕಪೋಲಕಲ್ಪಿತ ವಿಚಾರ. 17 ಕಡೆಗಳಲ್ಲಿ ಹೊಂಡ ತೋಡಿದರೂ ಸಾಕ್ಷಿ, ಪುರಾವೆ ಏನೂ ಸಿಗಲಿಲ್ಲ. ಇದರಿಂದಾಗಿ, ಪ್ರಕರಣದ ವ್ಯವಸ್ಥಿತ ಷಡ್ಯಂತ್ರದ ಹಿಂದೆ ಅಪಪ್ರಚಾರ ಹಾಗೂ ಶ್ರದ್ಧಾ ಭಂಗದ ಹುನ್ನಾರವೂ ಇದೆ. ಆದ್ದರಿಂದ ಮಾಸ್ಕ್ ಮ್ಯಾನ್‌ಗೆ ಶಿಕ್ಷೆ ವಿಧಿಸಬೇಕು ಹಾಗೂ ಇತನ ಬೆನ್ನ ಹಿಂದಿರುವ ವ್ಯಕ್ತಿಗಳನ್ನು ಸರ್ಕಾರ ಪತ್ತೆಹಚ್ಚಬೇಕು’ ಎಂದರು.

‘8 ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಬಗ್ಗೆ ಕಳೆದ ಕೆಲವು ದಿನಗಳಿಂದ ಎಸ್‌ಐಟಿ ತನಿಖೆಯ ನೆಪದಲ್ಲಿ ನಡೆಯುತ್ತಿರುವ ಅಪಪ್ರಚಾರಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು. ಧರ್ಮಸ್ಥಳ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತೇಜೋವಧೆ ಬಗ್ಗೆ ಆಧಾರ ರಹಿತ ಸುಳ್ಳು ವದಂತಿಗಳ ಅಪಪ್ರಚಾರದಿಂದ ಅಸಂಖ್ಯಾತ ಭಕ್ತರು ಹಾಗೂ ಅಭಿಮಾನಿಗಳಲ್ಲಿ ಗೊಂದಲದ ವಾತಾವರಣ ಮೂಡಿದೆ’ ಎಂದು ಬೇಸರಿಸಿದರು.

ಆದಾಗ್ಯೂ, ‘ಎಸ್‌ಐಟಿ ತನಿಖೆಯನ್ನು ಬಿಜೆಪಿ ಸ್ವಾಗತಿಸುತ್ತದೆ’ ಎಂದು ಸ್ಪಷ್ಟಪಡಿಸಿದ ಅವರು, ತನಿಖೆ ಪಾರದರ್ಶಕವಾಗಿ ನಡೆಯಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಅವರು ಬಹಿರಂಗಪಡಿಸಿಲ್ಲ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ತನಿಖೆಯಾಗಬೇಕು. ಜತೆಗೆ ದೂರುದಾರನ ಹಿನ್ನೆಲೆ ಹಾಗೂ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ಬಗ್ಗೆಯೂ ತನಿಖೆಯಾಗಲಿ’ ಎಂದರು.

ತನಿಖೆ ಆಗಲಿ ಎಂದು ಹೆಗ್ಗಡೆ ಮೌನ:

ಇದಕ್ಕೂ ಮೊದಲು ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಧರ್ಮಸ್ಥಳದ ಮೇಲೆ ಒಂದು ಗುಂಪು ಕಳೆದ ಒಂದು ದಶಕದಿಂದ ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದು, ಒಮ್ಮೆ ತನಿಖೆಯಾಗಲಿ ಎಂಬ ದೃಷ್ಟಿಯಿಂದ ವಿರೇಂದ್ರ ಹೆಗ್ಗಡೆಯವರು ಸುಮ್ಮನಿದ್ದಾರೆ. ಸರ್ಕಾರ ಸಣ್ಣದೊಂದು ದೂರನ್ನು ಆಧರಿಸಿ ತನಿಖೆಗೆ ಎಸ್‌ಐಟಿ ನೇಮಿಸಿರುವುದು ಆಶ್ಚರ್ಯಕರ. ಎಸ್‌ಐಟಿ ನೇಮಕಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದವರು ಯಾರು ಎಂಬುದು ಸ್ವಷ್ಟವಾಗಿದೆ. ಎಸ್‌ಐಟಿ ತನಿಖೆ ನಡೆಸಲು ಲಕ್ಷಾಂತರ ರು, ವೆಚ್ಚವಾಗಿದ್ದು, ಈ ಮೊತ್ತವನ್ನು ದೂರುದಾರರಿಂದಲೇ ಭರಿಸಬೇಕು. ಮಾಸ್ಕ್ ಹಾಕಿರುವ ವ್ಯಕ್ತಿ ಕ್ರಿಮಿನಲ್ ಆಗಿದ್ದು ಹಣದ ವ್ಯಾಮೋಹದಿಂದ ಕೊಟ್ಯಾಂತರ ಜನರ ಆರಾಧನ ಕ್ಷೇತ್ರಕ್ಕೆ ಹಾನಿ ಉಂಟು ಮಾಡಲು ಯತ್ನಿಸಿದ್ದಾನೆ’ ಎಂದು ಆರೋಪಿಸಿದರು.

‘ಇಡೀ ರಾಜ್ಯದ ಜನತೆ ಧರ್ಮಸ್ಥಳದ ಪರವಾಗಿದ್ದು ಹೆಗ್ಗಡೆಯವರು ಎದೆಗುಂದುವ ಅಗತ್ಯವಿಲ್ಲ. ದೇವರ ವಿಚಾರದಲ್ಲಿ ಯಾರು ಹುಡುಗಾಟ ಆಡುವುದು ಬೇಡ’ ಎಂದರು.

ಶಾಸಕ ಹರೀಶ್ ಪೂಂಜ, ಛಲವಾದಿ ನಾರಾಯಣಸ್ವಾಮಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಸಿ.ಟಿ.ರವಿ, ಶಾಸಕರಾದ ಭಾಗೀರಥಿ ಮುರುಳ್ಯ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೋಳಿ, ಎಸ್.ಆರ್. ವಿಶ್ವನಾಥ್, ಧನಂಜಯ ಸರ್ಜಿ, ಕಿಶೋರ್ ಕುಮಾರ್ ಬೊಟ್ಯಾಡಿ, ಕೊರಣ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ರವಿಕುಮಾರ್, ಶ್ರೀವಾತ್ಸವ ಹಾಗೂ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 

Read more Articles on