ಸಾರಾಂಶ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಅನುಷ್ಠಾನ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಬೆಂಗಳೂರು : ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಅನುಷ್ಠಾನ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಆದರೆ ಇನ್ನೂ ಐದಾರು ಸಚಿವರು ಲಿಖಿತ ಅಭಿಪ್ರಾಯ ಸಲ್ಲಿಸದ ಕಾರಣ ವರದಿಯ ವಿಚಾರವನ್ನು ಮತ್ತೊಮ್ಮೆ ಮುಂದೂಡಲಾಗಿದೆ.
ರಾಜ್ಯ ಸರ್ಕಾರ ಹಲವು ದಿನಾಂಕಗಳನ್ನು ಮುಂದೂಡಿ ಏ.11 ರಂದು ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿತ್ತು. ಈ ಬಗ್ಗೆ ಚರ್ಚಿಸಲು ಏ.17 ರಂದು ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿ ಬಗ್ಗೆ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವರದಿ ಬಗ್ಗೆ ಸಚಿವರಿಗೆ ಲಿಖಿತವಾಗಿ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೂ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ಕೆಲ ಸಚಿವರು ಅಭಿಪ್ರಾಯ ಮಂಡನೆ ಮಾಡಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ಎಲ್ಲಾ ಸಚಿವರು ವರದಿ ಬಗ್ಗೆ ಲಿಖಿತ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಲಾಗಿತ್ತು. ಬಹುತೇಕ ಮಂದಿ ಲಿಖಿತ ವರದಿ ಸಲ್ಲಿಸಿದ್ದು ಇದರ ಅನ್ವಯ ಚರ್ಚೆ ಮಾಡಲಾಗಿದೆ. ಆದರೆ ಇನ್ನೂ ಐದಾರು ಮಂದಿ ಸಚಿವರು ವರದಿ ಸಲ್ಲಿಸದ ಕಾರಣ ಚರ್ಚೆ ಅಪೂರ್ಣವಾಗಿದ್ದು, ಮುಂದಿನ ಸಂಪುಟ ಸಭೆಗೆ ಮುಂದೂಡಲಾಗಿದೆ ಎಂದು ಹೇಳಿದರು. ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ, ಆ ರೀತಿಯ ಪ್ರಶ್ನೆಯೇ ಉದ್ಭವಿಸಲ್ಲ. 10 ವರ್ಷಗಳ ಹಿಂದೆ ಈ ರೀತಿಯ ಸಮೀಕ್ಷಾ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿತ್ತು. ಆಯೋಗ ಕಳೆದ ವರ್ಷ ವರದಿ ಮಂಡಿಸಿದ್ದು, ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಸಚಿವರ ಅಭಿಪ್ರಾಯ ಕೇಳಲಾಗಿದೆ. ಎಲ್ಲರ ಅಭಿಪ್ರಾಯ ಬಂದ ಬಳಿಕ ಸೂಕ್ತ ನಿರ್ಧಾರ ಆಗಲಿದೆ ಎಂದು ಎಚ್.ಕೆ. ಪಾಟೀಲ್ ಸಮರ್ಥಿಸಿದರು. ವಿವಿಧ ಆಯಾಮದಲ್ಲಿ ಚರ್ಚೆ:
ಮತ್ತೊಂದೆಡೆ ಸಭೆಯಲ್ಲಿ ಸಚಿವರು ಜಾತಿಗಣತಿ ವರದಿ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿಗಣತಿಯೂ ನಡೆಸುವುದಾಗಿ ಘೋಷಿಸಿದೆ. ಹೀಗಾಗಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಜಾತಿವಾರು ಸಮೀಕ್ಷಾ ವರದಿಯ ಭವಿಷ್ಯ ಏನು? ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯದೊಂದಿಗೆ ಚರ್ಚಿಸುವಂತೆ ಸಚಿವ ಸಂಪುಟ ಸಭೆಯಲ್ಲಿ ಸಲಹೆ ಕೇಳಿ ಬಂದಿದೆ. ಇದೇ ವೇಳೆ ಕೇಂದ್ರ ಸರ್ಕಾರ ಕೇವಲ ಜಾತಿಗಣತಿ ಮಾಡಿದರೆ ಸಾಲದು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕು. ಜತೆಗೆ ಮೀಸಲಾತಿಗೆ ನಿಗದಿ ಮಾಡಿರುವ ಶೇ.50 ರಷ್ಟು ಮಿತಿ ತೆಗೆಯಬೇಕು ಎಂದು ಒತ್ತಾಯಿಸಿ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸುವ ಬಗ್ಗೆಯೂ ಚರ್ಚೆಯಾಗಿದೆ.
ಆದರೆ, ಎಲ್ಲಾ ಸಚಿವರು ಚರ್ಚೆಯಲ್ಲಿ ಭಾಗವಹಿಸಿಲ್ಲ. ಜತೆಗೆ ಸಚಿವರಿಗೆ ಲಿಖಿತ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಿ ಒಂದು ತಿಂಗಳು ಕಳೆದಿದೆ. ಹೀಗಿದ್ದರೂ ಕೆಲ ಸಚಿವರು ವೈಯಕ್ತಿಕವಾಗಿ ಅಭಿಪ್ರಾಯ ಸಲ್ಲಿಕೆ ಮಾಡಿಲ್ಲ. ಎಲ್ಲಾ ಸಚಿವರು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಬಳಿಕವಷ್ಟೇ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲು ಸಾಧ್ಯ ಎಂದು ಹೇಳಿ ವಿಷಯ ಮುಂದೂಡಲಾಯಿತು ಎಂದು ಮೂಲಗಳು ತಿಳಿಸಿವೆ.