ಬೆಂಗಳೂರು : ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್‌ನಂತೆ 15 ದಿನ ಒಟ್ಟು 4 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡುತ್ತಿದ್ದಂತೆ ಕಾವೇರಿ ಕೊಳ್ಳದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರೈತರು, ಕನ್ನಡ ಪರ ಸಂಘಟನೆಗಳು, ಮುಖಂಡರು ಪ್ರಾಧಿಕಾರದ ಆದೇಶ ಖಂಡಿಸಿ ಪ್ರತಿಭಟಿಸಿದ್ದಾರೆ. ವಿಶೇಷವಾಗಿ ಮಂಡ್ಯದಲ್ಲಿ ರೈತರು, ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ.
ಜು.28ರಂದು ಕಾವೇರಿ ನೀರು ನಿರ್ವಹಣಾ ಸಮಿತಿಯು ನೀಡಿದ್ದ ಆದೇಶದ ವಿರುದ್ಧ ಮಂಡ್ಯ, ಚಾಮರಾಜನಗರ, ಕಾರವಾರ, ಧಾರವಾಡ, ಮೈಸೂರು ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳು ಬೆಳಗ್ಗೆಯಿಂದಲೇ ನಡೆಯುತ್ತಿದ್ದವು. ಮಧ್ಯಾಹ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸುವಂತೆ ನೀಡಿದ ಆದೇಶ ಹೊರಬೀಳುತ್ತಿದ್ದಂತೆ ಮಂಡ್ಯ ಭಾಗದಲ್ಲಿ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯಿತು.
ಶ್ರೀರಂಗಪಟ್ಟಣದಲ್ಲಿ ನದಿಗಿಳಿದು ಭೂಮಿತಾಯಿ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದರೆ, ರೈತ ಸಂಘಟನೆಗಳು ರಸ್ತೆತಡೆ ನಡೆಸಿದರು. ಹಲವೆಡೆ ಹೋರಾಟಗಳು ಹೆಚ್ಚಾಗಿದ್ದು, ಶುಕ್ರವಾರದಿಂದ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ.
ವಿಜಯ್ ಚಿತ್ರಕ್ಕೆ ಅಡ್ಡಿ:
ವಿಜಯಸೇನೆ ಕಾರ್ಯಕರ್ತರು ಮಂಡ್ಯ ಗುರುಶ್ರೀ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಅಭಿನಯದ ಜನನಾಯಗನ್ ಚಿತ್ರದ ಪೋಸ್ಟರನ್ನು ಹರಿದು ಆಕ್ರೋಶ ಹೊರಹಾಕಿದರು. ಬಿಜೆಪಿ ಮುಖಂಡರು ನಗರದ ಜೆ.ಸಿ. ವೃತ್ತದಲ್ಲಿ ಟೈರ್‌ಗಳನ್ನು ಇಟ್ಟು ಬೆಂಕಿ ಹಚ್ಚಲು ಯತ್ನಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಅದನ್ನು ತಡೆದರು.
ವಿವಿಧೆಡೆ ಪ್ರತಿಭಟನೆ:
ಚಾಮರಾಜನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣ ಗೌಡ ಬಣದ ಜಿಲ್ಲಾ ಘಟಕ ಪ್ರತಿಭಟಿಸಿತು. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕದ ಕಾರ್ಯಕರ್ತರು ಹಣೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರೆ ಕರವೇ ಶಿವರಾಮೇಗೌಡ ಬಣದ ಜಿಲ್ಲಾ ಘಟಕ ಹೋರಾಟ ನಡೆಸಿತು. ಇನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಳಗವು ಪ್ರತಿಭಟಿಸಿತು. ಹುಬ್ಬಳ್ಳಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟಿಸಿದರು. ಇನ್ನು ಮೈಸೂರಿನಲ್ಲಿ ಖಾಲಿ ಕೊಡ ಹಿಡಿದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
