ಸಾರಾಂಶ
‘ಇನ್ನು 8-10 ದಿನಗಳಲ್ಲಿ ರಾಜ್ಯದ ಅಧ್ಯಕ್ಷರು ಯಾರು ಎಂಬ ಬಗ್ಗೆ ಉತ್ತರ ದೊರೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಪುನರಾಯ್ಕೆಯಾಗುವ ಸಂಪೂರ್ಣ ವಿಶ್ವಾಸ ನನಗಿದೆ - ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶಿವಮೊಗ್ಗ : ‘ಇನ್ನು 8-10 ದಿನಗಳಲ್ಲಿ ರಾಜ್ಯದ ಅಧ್ಯಕ್ಷರು ಯಾರು ಎಂಬ ಬಗ್ಗೆ ಉತ್ತರ ದೊರೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಪುನರಾಯ್ಕೆಯಾಗುವ ಸಂಪೂರ್ಣ ವಿಶ್ವಾಸ ನನಗಿದೆ. ಜೊತೆಗೆ, ಇನ್ನೊಂದು ವಾರದಲ್ಲಿ ಬಿಜೆಪಿಯಲ್ಲಿನ ಎಲ್ಲ ಆಂತರಿಕ ಗೊಂದಲವೂ ಸರಿಯಾಗುವ ವಿಶ್ವಾಸವಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಗಳಿಗೂ ಪೈಪೋಟಿ ಇತ್ತು. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ ಸಹಜವಾಗಿಯೇ ಇದೆ. ಕೇಂದ್ರದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದು, ಚುನಾವಣೆಯಲ್ಲಿ ನಾನೇ ಪುನರಾಯ್ಕೆಗೊಳ್ಳುವ ವಿಶ್ವಾಸವಿದೆ ಎಂದರು.
ಬಿಜೆಪಿಯಲ್ಲಿ ಮಾತ್ರ ಇಂತಹ ಆಂತರಿಕ ಪ್ರಜಾಪ್ರಭುತ್ವ ಇದೆ. ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೂ ಚುನಾವಣೆ ನಡೆಯುತ್ತದೆ. ಅರ್ಹತೆ ಮತ್ತು ಆಸಕ್ತಿ ಇರುವ ಎಲ್ಲರೂ ಸ್ಪರ್ಧಿಸುತ್ತಾರೆ. ಆದರೆ, ಯಾವುದೇ ಗೊಂದಲವಿರುವುದಿಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಇದೆಲ್ಲವೂ ನಡೆಯುತ್ತದೆ ಎಂದು ಹೇಳಿದರು.
ಯತ್ನಾಳ ಅವರ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿರುವ ಕುರಿತು ಪ್ರತಿಕ್ರಿಯಿಸಿ, ಪಕ್ಷದಲ್ಲಿ ಗೊಂದಲ ಇಲ್ಲ ಎಂದು ಹೇಳಲಾರೆ. ಈಗಾಗಲೇ ಈ ಗೊಂದಲಗಳಿಂದ ಪಕ್ಷಕ್ಕೆ ಏನೇನು ಡ್ಯಾಮೇಜ್ ಆಗಬೇಕೋ ಅದೆಲ್ಲವೂ ಆಗಿದೆ. ಆದರೆ, ಯಾವುದೇ ಸಂದರ್ಭದಲ್ಲಿಯೂ ನಾನು ಯಾರ ವಿರುದ್ಧವೂ ಹೇಳಿಕೆ ನೀಡಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ನನಗೆ ಇರುವ ಜವಾಬ್ದಾರಿಯ ಅರಿವು ನನಗಿದೆ ಎಂದರು.
ಕಳೆದೊಂದು ವರ್ಷದಿಂದ ಪಕ್ಷದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇದೆಲ್ಲವನ್ನೂ ಪಕ್ಷದ ವರಿಷ್ಠರು ಮತ್ತು ಕಾರ್ಯಕರ್ತರು ಗಮನಿಸುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಗೊಂದಲಗಳಿಗೆ ಪರಿಹಾರ ಸಿಗಲಿದೆ ಮತ್ತು ಸುಖಾಂತ್ಯವಾಗುತ್ತದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.