ಕೆಎಂಎಫ್‌ ಜತೆ ಇಂದು ಸಿಎಂ ಸಭೆ, ಹಾಲು ದರ ಲೀಟರ್‌ಗೆ 5 ರು. ಹೆಚ್ಚಳದ ಕುರಿತು ಚರ್ಚೆ?

| N/A | Published : Mar 24 2025, 08:54 AM IST

KMF Milk Price Hike

ಸಾರಾಂಶ

ಕೆಎಂಎಫ್‌ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು, ಸಂಬಂಧಪಟ್ಟ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಭೆ ನಡೆಸಲಿದ್ದು, ಹಾಲು ದರ ಹೆಚ್ಚಳದ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

ಬೆಂಗಳೂರು : ಕೆಎಂಎಫ್‌ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು, ಸಂಬಂಧಪಟ್ಟ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಭೆ ನಡೆಸಲಿದ್ದು, ಹಾಲು ದರ ಹೆಚ್ಚಳದ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

ಮೇವು, ಪಶು ಆಹಾರ, ಕೂಲಿ ಸೇರಿ ಇತರೆ ಖರ್ಚು ಹೆಚ್ಚಾಗಿರುವುದರಿಂದ ಪ್ರತಿ ಲೀಟರ್‌ ಹಾಲಿಗೆ 5 ರು.ನಂತೆ ದರ ಹೆಚ್ಚಳ ಮಾಡಲು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಪಶುಸಂಗೋಪನೆ ಸಚಿವ ವೆಂಕಟೇಶ್ ಅವರಿಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಪ್ರಸ್ತಾಪ ಸಿದ್ಧವಾಗಿದ್ದು, ಸರ್ಕಾರದ ಅನುಮತಿ ದೊರೆಯುವುದು ಮಾತ್ರವೇ ಬಾಕಿಯಿದೆ ಎಂದು ಹೇಳಲಾಗಿದೆ.

ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಶು ಸಂಗೋಪನೆ ಸಚಿವ ವೆಂಕಟೇಶ್‌, ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಕೆಎಂಎಫ್‌ ಅಧ್ಯಕ್ಷ ಭೀಮಾನಾಯಕ್‌, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರೊಂದಿಗೆ ಸೋಮವಾರ ಸಭೆ ನಡೆಸಲಿದ್ದಾರೆ. ಈ ವೇಳೆ ವಿವಿಧ ವಿಷಯಗಳ ಜತೆಗೆ ಹಾಲಿನ ದರ ಹೆಚ್ಚಳವೂ ಚರ್ಚೆಯಾಗಲಿದೆ. ಹೀಗಾಗಿ ಹಾಲಿನ ದರ ಹೆಚ್ಚಳ ಬಗ್ಗೆ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರಾ? ತೆಗೆದುಕೊಂಡರೆ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬ ಬಗ್ಗೆ ಕುತೂಹಲ ಮೂಡಿದೆ.