ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಫೆ. 10ರಂದು ಬೆಂಗಳೂರಿನ ಕರ್ನಾಟಕ ಹಾಲು ಮಹಾ ಮಂಡಳಿ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ತಾಲೂಕು ಕಾರ್ಯದರ್ಶಿ ಗೋಪಾಲ್ ತಿಳಿಸಿದರು.ನಗರದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಉಪಕಸುಬಾದ ಹೈನುಗಾರಿಕೆ ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದರೂ ರೈತರ ಮೇಲಿನ ಶೋಷಣೆ ನಿಂತಿಲ್ಲ ಎಂದರು.
ರಾಜಕೀಯ ಹಸ್ತಕ್ಷೇಪ, ದುಂದು ವೆಚ್ಚನಾಡಿನ ಜನತೆಗೆ ಉತ್ತಮ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುತ್ತಾ ನಂದಿನಿ ಹೆಸರಿನಲ್ಲಿ ಬೃಹತ್ ಉದ್ಯಮವಾಗಿ ಬೆಳೆದು ಸಾವಿರಾರು ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ. ಆಡಳಿತ ಮಂಡಳಿಯ ಅವೈಜ್ಞಾನಿಕ ನಿರ್ಧಾರ, ನೌಕರಪಾಯಿಯ ನಿರ್ಲಕ್ಷತನ, ಅನಾವಶ್ಯಕ ದುಂದುವೆಚ್ಚ, ರಾಜಕೀಯ ಹಸ್ತಕ್ಷೇಪ ಮುಂತಾದ ಕಾರ್ಯಗಳಿಂದ ಈ ಬೃಹತ್ ಉದ್ದಿಮೆಯನ್ನ ಶೋಷಣೆ ಮಾಡುವ ಮೂಲಕ ಅವನತಿಯ ಹಾದಿ ಹಿಡಿಯುತ್ತಿರುವುದು ದುರಂತದ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
ಬರಗಾಲದಿಂದ ಮೇವಿನ ಕೊರತೆ, ಕಾಲುಬಾಯಿ ಜ್ವರ, ಚರ್ಮಗಂಟು ರೋಗ, ಕೆಚ್ಚಲು ಬಾವು. ಗರ್ಭ ಧರಿಸದೇ ಇರುವುದು ಮುಂತಾದ ರೋಗಗಳಿಂದ ಹಾಲು ಉತ್ಪಾದಕರ ಆರ್ಥಿಕ ಸ್ಥಿತಿ ಆದೋಗತಿಯಾಗಿದೆ. ಬಾಟಲ್ ನೀರಿಗೆ ನೀಡುವ ಬೆಲೆ ಹಾಲಿಗಿಲ್ಲ. ಹಾಲು, ತರಕಾರಿ ಹಾಗೂ ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯದೆ ನಿರಂತರ ಸಾವು-ಬದುಕಿನ ನಡುವೆ ಜೀವನ ಸಾಗಿಸುತ್ತಿದ್ದಾರೆಂದರು.ಬೇರೆ ರಾಜ್ಯಕ್ಕಿಂತ ಕಡಿಮೆ ದರ
ದೇಶದ ಯಾವುದೇ ರಾಜ್ಯದಲ್ಲಿ ಇಷ್ಟು ಕಡಿಮೆ ಬೆಲೆಗೆ ಹಾಲು ಸಿಗುವುದಿಲ್ಲ. ರೈತರು ಸಾಲ ಸೋಲ ಮಾಡಿ ಹಸುಗಳನ್ನು ಖರೀದಿಸಿ ದುಬಾರಿ ಬೆಲೆಗೆ ಹಿಂಡಿ, ಬೂಸೂ ಮತ್ತು ಪಶು ಆಹಾರಗಳನ್ನು ಖರೀದಿಸಿ ಪುಕ್ಕಟೆ ಹಾಲು ನೀಡಿದಂತಾಗಿದೆ. ಇದರಿಂದಾಗಿ ಸತತ ನಷ್ಟಕ್ಕೆ ಒಳಗಾಗುತ್ತ ಸಾವಿರಾರು ರೈತರು ಹೈನು ಉದ್ಯಮದಿಂದ ಹಿಂದೆ ಸರಿಯುವಂತಾಗಿದೆ ಎಂದರು.ಆದ್ದರಿಂದ ಈ ಎಲ್ಲಾ ಶೋಷಣೆಗೆ ಕಾರಣವಾದ ನೀತಿ ನಿರ್ಧಾರಗಳನ್ನು ಸರಿಪಡಿಸಲು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸುವಂತೆ ಒತ್ತಾಯಿಸಲು ಮತ್ತು ಹಾಲಿನ ಬಾಕಿ ಹಣ ಬಿಡುಗಡೆ ಮತ್ತು ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಫೆ.10ರ ಸೋಮವಾರ ಬೆಂಗಳೂರಿನ ಕರ್ನಾಟಕ ಹಾಲು ಮಹಾ ಮಂಡಲಿ (ಕೆಎಂಎಫ್) ಡೇರಿ ಎದುರು ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಹಾಲು ಉತ್ಪಾದಕರು ಪಾಲ್ಗೊಳ್ಳುವ ಮೂಲಕ ಈ ಬೃಹತ್ ಉದ್ಯಮವನ್ನು ರಕ್ಷಿಸುವಂತೆ ಮನವಿ ಮಾಡಿದರು.
ಲೀಟರ್ ಹಾಲಿಗೆ ₹50 ನೀಡಿಪ್ರತಿಭಟನೆಯಲ್ಲಿ ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 50 ರೂ. ನಿಗದಿಪಡಿಸಬೇಕು. ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡಿ, ಹೆಚ್ಚಿನ ಸಹಾಯಧನ ನೀಡಬೇಕು. ಪಶು ಆಹಾರಕ್ಕೆ ಬಳಸುವ ಮೆಕ್ಕೆಜೋಳವನ್ನು ರೈತರಿಂದಲೇ ನೇರವಾಗಿ ಖರೀದಿಸಬೇಕು. ಸ್ಥಳೀಯ ಹಾಲು ಮಾರಾಟಕ್ಕೆ ವಿಧಿಸುವ ಲೇವಿಯನ್ನು ರದ್ದುಗೊಳಿಸಬೇಕು. ಸರ್ಕಾರ ನೀಡುವ ಪ್ರೋತ್ಸಾಹಧನ 5 ರೂ.ಗಳಿಂದ 10 ರೂಪಾಯಿಗೆ ಹೆಚ್ಚಿಸಬೇಕು. ಹಾಲಿನ ಬೆಲೆ ನಿಗದಿಯಲ್ಲಿ ಒಕ್ಕೂಟಗಳು ಸ್ವತಂತ್ರವಾಗಿರಬೇಕು ಎಂದರು.
ಬಾಕಿ ಸಹಾಯಧನ ನೀಡಿಈ ಸಂಸ್ಥೆಯ ನೇಮಕಾತಿಯಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಮಾತ್ರ ಸೀಮಿತವಾಗಿರಬೇಕು. ಸ್ಥಳೀಯ ಪ್ರಾಥಮಿಕ ಸಹಕಾರಿ ಸಂಘಗಳ ನೌಕರರನ್ನು ಒಕ್ಕೂಟದ ನೌಕರರೆಂದು ಪರಿಗಣಿಸಬೇಕು. ಬಾಕಿ ಇರುವ ಸಹಾಯಧನ ಬಾಬ್ತು 620 ಕೋಟಿ ಕೂಡಲೇ ಬಿಡುಗಡೆ ಮಾಡಬೇಕು ಎಂಬ ಹಕ್ಕೂತ್ತಾಯಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರೈತ ಸಂಘದ ರಾಮಾಂಜಿನಪ್ಪ, ವೆಂಕಟೇಶಪ್ಪ, ಶ್ರೀನಿವಾಸ್, ವೇಣುಗೋಪಾಲ್, ದೇವರಾಜ್, ಸುನಿಲ್, ನಾರಾಯಣಸ್ವಾಮಿ, ನಾಗರಾಜು, ಕೃಷ್ಣಪ್ಪ, ಮತ್ತಿತರರು ಇದ್ದರು.