1500 ಮುಡಾ ಸೈಟು ಹಂಚಿಕೆ ರದ್ದುಪಡಿಸಲು ಸಿಎಂ ಸೂಚನೆ? - ಶಾಸಕ ಶ್ರೀವತ್ಸ ಪತ್ರಕ್ಕೆ ಸ್ಪಂದನೆ

| Published : Nov 01 2024, 11:01 AM IST

CM Siddaramaiah Muda Case

ಸಾರಾಂಶ

 ಮುಡಾದಿಂದ 50:50ರ ಅನುಪಾತದಲ್ಲಿ ಹಂಚಿಕೆ ಮಾಡಲಾಗಿರುವ ನಿವೇಶನಗಳನ್ನು ರದ್ದು ಮಾಡುವಂತೆ ಕೋರಿ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಅವರು ಬರೆದಿದ್ದ ಪತ್ರಕ್ಕೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ  

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ 50:50ರ ಅನುಪಾತದಲ್ಲಿ ಹಂಚಿಕೆ ಮಾಡಲಾಗಿರುವ ನಿವೇಶನಗಳನ್ನು ರದ್ದು ಮಾಡುವಂತೆ ಕೋರಿ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಅವರು ಬರೆದಿದ್ದ ಪತ್ರಕ್ಕೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಈ ಸೂಚನೆಯಿಂದಾಗಿ ಮುಡಾದಿಂದ ಈವರೆಗೆ 50:50ರ ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ ಎನ್ನಲಾದ 1500ಕ್ಕೂ ಹೆಚ್ಚು ಸೈಟ್‌ಗಳು ರದ್ದಾಗಲಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ.

ಮುಡಾದಿಂದ 50:50 ಅನುಪಾತದಡಿ 1,500ಕ್ಕೂ ಹೆಚ್ಚು ಸೈಟ್​ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂಬ ವದಂತಿಗಳು ಓಡಾಡುತ್ತಿವೆ. ಈ ಸೈಟ್‌ಗಳನ್ನು ವಾಪಸ್‌ ಪಡೆದು, ಅವುಗಳನ್ನು ಮುಡಾ ಆಸ್ತಿ ಎಂದು‌ ಋಣಭಾರ ಪ್ರಮಾಣಪತ್ರದಲ್ಲಿ ಬರುವ ಹಾಗೆ ನೋಡಿಕೊಳ್ಳಬೇಕು ಎಂದು ಶಾಸಕ ಶ್ರೀವತ್ಸ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಪತ್ರವನ್ನು ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿಗೆ ರವಾನಿಸಿರುವ ಸಿದ್ದರಾಮಯ್ಯ, ಈ ಸಂಬಂಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸಿಎಂ ಕ್ರಮಕ್ಕೆ ಶ್ರೀವತ್ಸ ಹರ್ಷ:

ಈ ಮಧ್ಯೆ, ತಮ್ಮ ಮನವಿಗೆ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ ಸಂತಸ ವ್ಯಕ್ತಪಡಿಸಿದ್ದಾರೆ. 50:50 ಅನುಪಾತದಡಿ ಹಂಚಿಕೆ ಮಾಡಲಾಗಿರುವ ಎಲ್ಲ ನಿವೇಶನಗಳನ್ನು ರದ್ದು ಮಾಡಿ, ನಂತರ ಆ ನಿವೇಶನಗಳನ್ನು ಅರ್ಹರಿಗೆ ಕೊಡಲಿ ಎಂಬುದು ನನ್ನ ಉದ್ದೇಶ. ಈಗ ನಿವೇಶನ ಪಡೆದವರಲ್ಲಿ ಬಹುತೇಕರು ಅನರ್ಹರಿದ್ದಾರೆ. 50:50 ಅನುಪಾತದಲ್ಲಿ ನಿವೇಶನ ಪಡೆದವರು ಈಗ ಅದನ್ನು ಅರ್ಧ ದರಕ್ಕೆ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಡಾ ಸೈಟ್‌ ವಿಚಾರಕ್ಕೆ ಸಂಬಂಧಿಸಿ ಶೀಘ್ರ ಒಳ್ಳೆಯ ಬಳವಣಿಗೆ ಆಗುವ ಬಗ್ಗೆ ಸೂಚನೆ ಇದೆ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ 14 ನಿವೇಶನ ವಾಪಸ್ ಕೊಟ್ಟಿರುವುದನ್ನು ಪತ್ರದಲ್ಲಿ ಅಭಿನಂದಿಸಿದ್ದೇನೆ. ಮುಡಾ ಶುದ್ಧವಾಗಬೇಕು ಎಂದು ಹೇಳಿದ್ದೇನೆ ಎಂದರು.

ಇನ್ನೆರಡು ದಿನದಲ್ಲಿ ದಾಳಿ: ಮುಡಾ ಅಕ್ರಮಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಯುತ್ತಿದೆ. ಇನ್ನೆರಡು ದಿನದಲ್ಲಿ ಮತ್ತಷ್ಟು ಜನರ ಮೇಲೆ ದಾಳಿ ಆಗಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಲ್ಡರ್‌ಗಳು ಸೇರಿ ಅಕ್ರಮದಲ್ಲಿ ಭಾಗಿಯಾದವರೆಲ್ಲರು ತನಿಖೆಗೆ ಒಳಗಾಗಲಿದ್ದಾರೆ ಎಂದು ಶಾಸಕ ಹೇಳಿದರು.