ಮುಂದುವರಿದ 1ನೇ ತರಗತಿ ಮಕ್ಕಳ ದಾಖಲಾತಿ ಗೊಂದಲ! ಅಂಗನವಾಡಿ ಮಕ್ಕಳ ಕಥೆ ಏನು? : ಪೋಷಕರ ಪ್ರಶ್ನೆ

| N/A | Published : Apr 18 2025, 07:01 AM IST

School Children
ಮುಂದುವರಿದ 1ನೇ ತರಗತಿ ಮಕ್ಕಳ ದಾಖಲಾತಿ ಗೊಂದಲ! ಅಂಗನವಾಡಿ ಮಕ್ಕಳ ಕಥೆ ಏನು? : ಪೋಷಕರ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಂದನೇ ತರಗತಿ ಪ್ರವೇಶಕ್ಕೆ ಈ ವರ್ಷದ ಮಟ್ಟಿಗೆ ವಯೋಮಿತಿ ಸಡಿಲಿಸಿ 5.5 ವರ್ಷ ಪೂರ್ಣಗೊಂಡ ಮಕ್ಕಳನ್ನೂ ದಾಖಲಾತಿ ಮಾಡಿಕೊಳ್ಳಲು ಅವಕಾಶ ನೀಡಿರುವ ಶಿಕ್ಷಣ ಇಲಾಖೆ, ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿರುವ ಮಕ್ಕಳಿಗೆ ಮಾತ್ರ ಇದು ಅನ್ವಯ ಎಂದು ಹೇಳಿರುವುದು ಮತ್ತೆ ಗೊಂದಲಕ್ಕೆ ಕಾರಣವಾಗಿದೆ.

 ಬೆಂಗಳೂರು :ಒಂದನೇ ತರಗತಿ ಪ್ರವೇಶಕ್ಕೆ ಈ ವರ್ಷದ ಮಟ್ಟಿಗೆ ವಯೋಮಿತಿ ಸಡಿಲಿಸಿ 5.5 ವರ್ಷ ಪೂರ್ಣಗೊಂಡ ಮಕ್ಕಳನ್ನೂ ದಾಖಲಾತಿ ಮಾಡಿಕೊಳ್ಳಲು ಅವಕಾಶ ನೀಡಿರುವ ಶಿಕ್ಷಣ ಇಲಾಖೆ, ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿರುವ ಮಕ್ಕಳಿಗೆ ಮಾತ್ರ ಇದು ಅನ್ವಯ ಎಂದು ಹೇಳಿರುವುದು ಮತ್ತೆ ಗೊಂದಲಕ್ಕೆ ಕಾರಣವಾಗಿದೆ.

ಅಂಗನವಾಡಿಯಲ್ಲಿ ಕಲಿತ 5.5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು 1ನೇ ತರಗತಿಗೆ ದಾಖಲಿಸಿಕೊಳ್ಳಬೇಕೇ, ಬೇಡವೇ? ಒಂದನೇ ತರಗತಿಗೆ ನೇರವಾಗಿ ಮಕ್ಕಳನ್ನು ದಾಖಲಿಸಿಕೊಳ್ಳಲು ಇದ್ದ ಅವಕಾಶ ಇನ್ನು ಮುಂದೆ ರದ್ದಾಗುತ್ತದೆಯೇ ಎನ್ನುವ ಪ್ರಶ್ನೆಗಳು ಶಿಕ್ಷಕರು ಹಾಗೂ ಪೋಷಕರ ವಲಯದಲ್ಲಿ ಇದೀಗ ಉದ್ಭವಿಸಿದೆ.

ಸುಮಾರು 2000 ಸರ್ಕಾರಿ ಶಾಲೆಗಳನ್ನು ಬಿಟ್ಟರೆ ಉಳಿದ ಸರ್ಕಾರಿ ಶಾಲೆಗಳಲ್ಲಿ ಎಲ್ಲೂ ಪೂರ್ವ ಪ್ರಾಥಮಿಕ(ಎಲ್‌ಕೆಜಿ-ಯುಕೆಜಿ) ತರಗತಿಗಳೇ ಇಲ್ಲ. ಅದರಂತೆ ಕೆಲ ತೀವ್ರ ಹಿಂದುಳಿದ ಹಾಗೂ ವಲಸಿಗ ಕುಟುಂಬಗಳು ತಮ್ಮ ಮಕ್ಕಳನ್ನು ಎಲ್‌ಕೆಜಿ, ಯುಕೆಜಿಗೆ ಕಳುಹಿಸಲಾಗದೆ ಅಂಗನವಾಡಿಗಳಿಗೆ ಸೇರಿಸಿದ್ದಾರೆ. ಕೆಲವರು ನೇರವಾಗಿ 1ನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಕಾಯುತ್ತಿದ್ದಾರೆ. ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಕ್ಕಳು ಖಾಸಗಿ ಶಾಲೆಗೆ ದಾಖಲಾಗುತ್ತಾರೆ. ನೇರವಾಗಿ ದಾಖಲಾತಿಗೆ ಬರುವವರು, ಅಂಗನವಾಡಿಗೆ ಹೋಗಿರುವ ಮಕ್ಕಳ ಪೋಷಕರು ಸರ್ಕಾರಿ ಶಾಲೆಗಳಿಗೆ ಬರುತ್ತಾರೆ. ಅವರಿಗೆ 1ನೇ ತರಗತಿಗೆ ಪ್ರವೇಶ ನೀಡಬೇಕೋ ಬೇಡವೋ ಎನ್ನುವುದು ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರ ಪ್ರಶ್ನೆಯಾಗಿದೆ.

ಸರ್ಕಾರದ ಆದೇಶದಲ್ಲಿ ಈ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ನಮಗೆ ಗೊಂದಲ ಶುರುವಾಗಿದೆ. ನೇರವಾಗಿ ಒಂದನೇ ತರಗತಿ ದಾಖಲಾತಿಗೆ ಬರುವ 5.5 ವರ್ಷ ಪೂರ್ಣಗೊಂಡಿರುವ ಮಕ್ಕಳ ಪೋಷಕರಿಗೆ ನಾವು ಏನು ಉತ್ತರ ನೀಡಬೇಕೆಂದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಬಿಇಒ, ಡಿಡಿಪಿಐಗಳನ್ನು ಪ್ರಶ್ನಿಸಿದರೆ ನಮಗೂ ಗೊತ್ತಿಲ್ಲ. ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ ಎನ್ನುತ್ತಾರೆ. ಹಾಗಾಗಿ ಇಲಾಖೆಯ ಆಯುಕ್ತರು, ಪ್ರಧಾನ ಕಾರ್ಯದರ್ಶಿ ಅವರು ಈ ಬಗ್ಗೆ ಗಮನ ಹರಿಸಿ ಸ್ಪಷ್ಟನೆ ನೀಡಬೇಕೆಂಬುದು ಮುಖ್ಯಶಿಕ್ಷಕರ ಮನವಿ.