ಸಾರಾಂಶ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧ ಬಂಧಿತ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸೇರಿ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಮಂಗಳವಾರ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧ ಬಂಧಿತ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸೇರಿ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಮಂಗಳವಾರ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ಕಾಲ್ತುಳಿತ ಪ್ರಕರಣದಲ್ಲಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್‌ಎ ಕಂಪನಿಯ ವ್ಯವಸ್ಥಾಪಕ ಕಿರಣ್, ಸುನಿಲ್ ಮ್ಯಾಥ್ಯು ಹಾಗೂ ಸುಮಂತ್ ಅವರನ್ನು ಬಂಧಿಸಿ ಸಿಸಿಬಿ ಜೈಲಿಗೆ ಕಳುಹಿಸಿದೆ. ಇದೀಗ ಪ್ರಕರಣ ಸಿಸಿಬಿಯಿಂದ ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ಮುಂದಿನ ತನಿಖೆಯನ್ನು ಸಿಐಡಿ ನಡೆಸಲಿದೆ.
ಶನಿವಾರ ಹಾಗೂ ಭಾನುವಾರ ರಜೆ ಇದ್ದ ಕಾರಣ ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಪ್ರಕ್ರಿಯೆ ತಡವಾಗಿದ್ದು, ಮಂಗಳವಾರ ಬಾಡಿ ವಾರೆಂಟ್‌ಗೆ ನ್ಯಾಯಾಲಯಕ್ಕೆ ಸಿಐಡಿ ಮನವಿ ಸಲ್ಲಿಸಬಹುದು ಎಂದು ಮೂಲಗಳು ಹೇಳಿವೆ.
ಇನ್ನೆರಡು ದಿನದಲ್ಲಿ ನೋಟಿಸ್ ಜಾರಿ
ಕಾಲ್ತುಳಿತ ಪ್ರಕರಣದ ಆರೋಪಿಗಳಾದ ಕೆಎಸ್‌ಸಿಎ ಹಾಗೂ ಆರ್‌ಸಿಬಿ ಆಡಳಿತ ಮಂಡಳಿಗಳಿಗೆ ವಿಚಾರಣೆಗೆ ಇನ್ನೆರಡು ದಿನಗಳಲ್ಲಿ ನೋಟಿಸ್ ಜಾರಿಗೊಳಿಸಲು ಸಿಐಡಿ ಸಜ್ಜಾಗಿದೆ. ದುರಂತದ ಘಟನಾ ಸ್ಥಳ ಹಾಗೂ ಸ್ಥಳೀಯ ಪೊಲೀಸರು ಸಂಗ್ರಹಿಸಿದ್ದ ಸಾಂದರ್ಭಿಕ ಸಾಕ್ಷ್ಯಗಳನ್ನು ಸಿಐಡಿ ಪರಿಶೀಲಿಸಿದೆ. ಈ ಮಾಹಿತಿ ಮೇರೆಗೆ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಲು ಅಧಿಕಾರಿಗಳು ಯೋಚಿಸಿದ್ದಾರೆ ಎಂದು ತಿಳಿದು ಬಂದಿದೆ.