ಜೈಲಿಂದ ಬಂದ್ಮೇಲೆ ದರ್ಶನ್‌ ಮೊದಲ ವಿಡಿಯೋ! ಸೆಲೆಬ್ರಿಟಿಗಳೇ ಕ್ಷಮಿಸಿ, ಈ ಬಾರಿ ಬರ್ತ್‌ಡೇ ಇಲ್ಲ

| N/A | Published : Feb 09 2025, 10:32 AM IST

kannada actor darshan thoogudeepa
ಜೈಲಿಂದ ಬಂದ್ಮೇಲೆ ದರ್ಶನ್‌ ಮೊದಲ ವಿಡಿಯೋ! ಸೆಲೆಬ್ರಿಟಿಗಳೇ ಕ್ಷಮಿಸಿ, ಈ ಬಾರಿ ಬರ್ತ್‌ಡೇ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಜಾಮೀನು ಮೇಲೆ ಜೈಲಿನಿಂದ ಹೊರಬಂದ ಬಳಿಕ ನಟ ದರ್ಶನ್‌ ಅವರು ಮೊದಲ ಬಾರಿಗೆ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಫೆ.16ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

 ಬೆಂಗಳೂರು : ಜಾಮೀನು ಮೇಲೆ ಜೈಲಿನಿಂದ ಹೊರಬಂದ ಬಳಿಕ ನಟ ದರ್ಶನ್‌ ಅವರು ಮೊದಲ ಬಾರಿಗೆ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಫೆ.16ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಸುದೀರ್ಘ ವಿಡಿಯೋದಲ್ಲಿ ಅವರು, ‘ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರುವುದಕ್ಕೆ ಕ್ಷಮಿಸಿ. ಆರೋಗ್ಯ ಸಮಸ್ಯೆ ಕಾರಣಕ್ಕೆ ಹುಟ್ಟುಹಬ್ಬದ ಸಂಭ್ರಮದಿಂದ ದೂರ ಇರಬೇಕಾಗಿದೆ’ ಎಂದು ಹೇಳಿದ್ದಾರೆ.

ಇದೇ ವೇಳೆ ತಮಗೆ ಬೆಂಬಲವಾಗಿ ನಿಂತ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿರುವ ಅವರು, ‘ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ, ಥ್ಯಾಂಕ್ಸ್‌ ಏನು ಹೇಳಿದರೂ ತುಂಬಾ ಕಡಿಮೆಯೇ. ನೀವು ತೋರಿಸುತ್ತಿರುವ ಪ್ರೀತಿ, ಅಭಿಮಾನಕ್ಕೆ ನನ್ನ ಬಳಿ ಪದಗಳೇ ಇಲ್ಲ. ನನ್ನ ಹುಟ್ಟುಹಬ್ಬದ ದಿನ ಪ್ರತೀ ವರ್ಷ ರಾಜ್ಯದ ಬೇರೆ ಬೇರೆ ಊರುಗಳಿಂದ ನನ್ನ ನೋಡಲು ಬರುತ್ತಿದ್ದಿರಿ. ನಾನೂ ಇಡೀ ದಿನ ನಿಂತುಕೊಂಡೇ ನಿಮ್ಮ ಶುಭಾಶಯಗಳನ್ನು ಸ್ವೀಕರಿಸುತ್ತಿದ್ದೆ. ಆದರೆ, ಆರೋಗ್ಯ ಸಮಸ್ಯೆಯಿಂದ ತುಂಬಾ ಹೊತ್ತು ಈಗ ನಿಂತುಕೊಳ್ಳಲು ಆಗುವುದಿಲ್ಲ. ಹಾಗಂತ ಹುಟ್ಟುಹಬ್ಬದ ದಿನ ಮನೆ ಮೇಲೆ ನಿಂತು ಕೈ ಬೀಸಿ ಹೋಗುವುದಕ್ಕೂ ನನಗೆ ಮನಸ್ಸಿಲ್ಲ. ಹೀಗಾಗಿ ನಿಮ್ಮೊಂದಿಗೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ. ಅಭಿಮಾನಿಗಳು ಈ ಕಾರಣಕ್ಕೆ ನನ್ನ ಕ್ಷಮಿಸಿ’ ಎಂದು ಭಾವುಕರಾಗಿ ತಿಳಿಸಿದ್ದಾರೆ.

ಆಪರೇಷನ್‌ ಗ್ಯಾರಂಟಿ: ‘ಆಪರೇಷನ್ ಅನ್ನೋದು ಕಟ್ಟಿಟ್ಟ ಬುತ್ತಿ. ಯಾಕೆಂದರೆ ನನ್ನ ಆರೋಗ್ಯ ಸಮಸ್ಯೆ ಏನೆಂಬುದು ನಿಮಗೂ ಗೊತ್ತಿದೆ. ಬೆನ್ನು ಮೂಳೆ ನೋವಿನಿಂದ ಬಳಲುತ್ತಿದ್ದೇನೆ. ಇಂಜೆಕ್ಷನ್ ತೆಗೆದುಕೊಂಡರೆ 15 ರಿಂದ 20 ದಿನ ಸರಿ ಇರುತ್ತದೆ. ಅದರ ಪವರ್ ಕಡಿಮೆ ಆಗುತ್ತಿದ್ದಂತೆ ನೋವು ಶುರುವಾಗುತ್ತದೆ. ಹೀಗಾಗಿ ಹೆಚ್ಚು ಹೊತ್ತು ನಿಲ್ಲಲು, ನಡೆಯಲು ಆಗಲ್ಲ. ಹೀಗಾಗಿ ಆಪರೇಷನ್‌ ಮಾಡಿಸಿಕೊಳ್ಳಲೇಬೇಕಿದೆ. ಆದಷ್ಟು ಬೇಗ ಆರೋಗ್ಯ ಸುಧಾರಿಸಿಕೊಂಡು ಮತ್ತೆ ಬರುತ್ತೇನೆ’ ಎಂದು ದರ್ಶನ್‌ ಹೇಳಿದ್ದಾರೆ.

ಧನ್ವೀರ್‌, ರಚಿತಾ, ರಕ್ಷಿತಾಗೆ ಥ್ಯಾಂಕ್ಸ್‌: ‘ಸಂಕಷ್ಟದಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದ ನಟ ಧನ್ವೀರ್‌, ಬುಲ್‌ ಬುಲ್‌ ರಚಿತಾ ರಾಮ್‌ ಹಾಗೂ ಸ್ನೇಹಿತೆ ರಕ್ಷಿತಾ ಅವರಿಗೆ ನಾನು ಥ್ಯಾಂಕ್ಸ್‌ ಹೇಳುತ್ತೇನೆ. ನನ್ನ ನೆರವಿಗೆ ನಿಂತ ಈ ಮೂವರನ್ನು ನಾನು ಮರೆಯಲ್ಲ. ಜೊತೆಗೆ ನನಗಾಗಿ ಕಾದಿದ್ದ ನಿರ್ಮಾಪಕರಿಗೂ ಥ್ಯಾಂಕ್ಸ್‌. ಆದರೆ, ಈಗಿನ ಆರೋಗ್ಯ ಸಮಸ್ಯೆಯಿಂದ ನಿರ್ಮಾಪಕರನ್ನು ನಾನು ಮತ್ತಷ್ಟು ಕಾಯಿಸಲು ಆಗಲ್ಲ. ಹೀಗಾಗಿ ಕೆವಿಎನ್ ಹಾಗೂ ಸೂರಪ್ಪ ಬಾಬು ಅವರಿಂದ ತೆಗೆದುಕೊಂಡ ಅಡ್ವಾನ್ಸ್ ಮರಳಿಸಿದ್ದೇನೆ. ಯಾಕೆಂದರೆ ಸೂರಪ್ಪ ಬಾಬು ಅವರು ಸಿನಿಮಾ ಮಾಡಲು ನನ್ನ ಬಳಿ ಬಂದಾಗ ತುಂಬಾ ಕಮಿಟ್‌ಮೆಂಟ್‌ನಲ್ಲಿದ್ದರು. ಅವರಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ನಾನು ಸಿನಿಮಾ ಒಪ್ಪಿದ್ದೆ. ಆದರೆ, ನಾನು ಮತ್ತಷ್ಟು ಕಾಯಿಸಿದರೆ ಅವರಿಗೆ ಕಷ್ಟ ಆಗುತ್ತದೆ. ಈ ಕಾರಣಕ್ಕೆ ಅಡ್ವಾನ್ಸ್‌ ವಾಪಸ್‌ ನೀಡಿದ್ದೇನೆ. ಒಳ್ಳೆಯ ಕತೆ ಸಿಕ್ಕಾಗ ಖಂಡಿತ ಮುಂದೆ ಅವರ ಜತೆಗೆ ಸಿನಿಮಾ ಮಾಡುತ್ತೇನೆ’ ಎಂದಿದ್ದಾರೆ ದರ್ಶನ್‌.

ಪ್ರೇಮ್‌ ಜತೆಗೆ ಸಿನಿಮಾ ಗ್ಯಾರಂಟಿ: ‘ನಾನು ಮತ್ತು ಪ್ರೇಮ್‌ ಅವರು ಸಿನಿಮಾ ಮಾಡೋದು ಪಕ್ಕಾ. ಯಾಕೆಂದರೆ ಪ್ರೇಮ್‌ ನನ್ನ ಗುರು. ಜತೆಗೆ ಇದು ನನ್ನ ಸ್ನೇಹಿತೆ ರಕ್ಷಿತಾ ಆಸೆ ಕೂಡ ಆಗಿದೆ. ಆದರೆ, ಕೆವಿಎನ್ ಪ್ರೊಡಕ್ಷನ್ ಅವರು ಈಗ ಸಿನಿಮಾ ಮಾಡುತ್ತಿದ್ದಾರೆ. ಅದು ನಡೆಯುತ್ತಿರುವಾಗ ಪುನಃ ಇನ್ನೊಂದು ಸಿನಿಮಾ ಯಾಕೆ ಅಂತ ಖಾಲಿ ಇರುವ ನಿರ್ಮಾಪಕನಿಗೆ ಸಿನಿಮಾ ಮಾಡೋಣ ಎಂದುಕೊಂಡಿದ್ದೇನೆ. ಅದು ಬಿಟ್ಟರೆ ಬೇರೇನೂ ಇಲ್ಲ’ ಎಂದಿದ್ದಾರೆ.

ಬೇರೆ ಭಾಷೆಗೆ ಹೋಗಲ್ಲ: ‘ನಾನು ಬೇರೆ ಭಾಷೆಗಳಿಗೆ ಹೋಗುತ್ತೇನೆ ಎನ್ನುವ ಸುದ್ದಿ ಓಡಾಡುತ್ತಿದೆ. ಇದು ಸುಳ್ಳು. ಇಲ್ಲೇ ಇಷ್ಟು ಅಭಿಮಾನ ತೋರಿಸುತ್ತಿರುವಾಗ ಸುಮ್ಮನೆ ಎಲ್ಲಿಗೆ ಅಂತ ಹೋಗಲಿ. ಸಾಯೋವರೆಗೂ ಇಲ್ಲೇ ಇರುತ್ತೇನೆ. ಇಲ್ಲಿ ಬಿಟ್ಟು ನಾನು ಎಲ್ಲೂ ಹೋಗಲ್ಲ. ನನ್ನ ಸಿನಿಮಾಗಳು ಕನ್ನಡದಲ್ಲೇ ಹುಟ್ಟಿ ಬೇರೆ ಭಾಷೆಗಳಿಗೆ ಡಬ್‌ ಆದರೆ ಆಗಲಿ’ ಎಂದು ಸ್ಪಷ್ಟನೆ ನೀಡಿದ್ದಾರೆ.