ಸಾರಾಂಶ
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಇರುವುದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆ ಇದೆ
ಬೆಂಗಳೂರು : ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಇರುವುದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆ.1 ಮತ್ತು ಸೆ.4ರಿಂದ ಸೆ.6ರವರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಸೆ.2 ಮತ್ತು ಸೆ.3ಕ್ಕೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮಳೆ ಮಾರುತಗಳನ್ನು ಸೆಳೆಯುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ.
ಉಳಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣದಿಂದ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆಪ್ಟಂಬರ್‌ನಲ್ಲಿ ವಾಡಿಕೆ ಮಳೆ:
ಭಾರತೀಯ ಹವಾಮಾನ ಇಲಾಖೆಯು ಭಾನುವಾರ ಮುಂಗಾರು ಅವಧಿಯ ಕೊನೆಯ ತಿಂಗಳಾದ ಸೆಪ್ಟಂಬರ್ ಅವಧಿಯ ನಿರೀಕ್ಷಿತ ಮಳೆ ಮುನ್ಸೂಚನೆ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಲಿದೆ ಎಂದು ತಿಳಿಸಿದೆ.---
ಶೃಂಗೇರಿಯಲ್ಲಿ ‘ಮಘಾ’ ಮಳೆಯ ಆರ್ಭಟ
*ಹಂಪಿಯ ಪುರಂದರದಾಸರ ಮಂಟಪ ಜಲಾವೃತ
*ಆನೆಗೊಂದಿ-ಬೃಂದಾವನ ನಡುವೆ ಸಂಪರ್ಕ ಕಡಿತ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರು, ಶೃಂಗೇರಿ, ಚಿಕ್ಕಮಗಳೂರು, ಕೊಡಗು ಸೇರಿ ರಾಜ್ಯದ ಕೆಲವೆಡೆ ಭಾನುವಾರವೂ ಮಳೆಯಾಗಿದೆ.
ಶೃಂಗೇರಿ ತಾಲೂಕಿನಲ್ಲಿ ಮಘಾ ಮಳೆಯ ಆರ್ಭಟ ಜೋರಾಗಿತ್ತು. ಬೆಳಗ್ಗೆಯಿಂದಲೇ ಭಾರೀ ಮಳೆ ಸುರಿದಿದ್ದು, ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗಿತ್ತು. ಮಳೆಯಿಂದಾಗಿ ತುಂಗಾ, ನಳಿನಿ, ನಂದಿನಿ, ಮಾಲತಿ ನದಿಗಳು ತುಂಬಿ ಹರಿಯುತ್ತಿದ್ದು, ತುಂಗಾ ನದಿ ತೀರದ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಇದೇ ವೇಳೆ, ಮಲೆನಾಡಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಹೀಗಾಗಿ, ಜಲಾಶಯದ 14 ಗೇಟ್‌ಗಳ ಮೂಲಕ ನದಿಗೆ 60,000 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದಾಗಿ ಹಂಪಿಯ ಪುರಂದರದಾಸರ ಮಂಟಪ ಜಲಾವೃತಗೊಂಡಿದ್ದು, ಆನೆಗೊಂದಿ ಹಾಗೂ ಬೃಂದಾವನ ನಡುವಿನ ಸಂಪರ್ಕ ಕಡಿತವಾಗಿದೆ.